Unlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?

IPL 2023 In Mobile: ಐಪಿಎಲ್ ಕ್ರೇಜ್ ಭಾರತದಲ್ಲಿ ಹೆಚ್ಚುತ್ತಿದೆ. ಟಿವಿಗಿಂತ ಮೊಬೈಲ್​ನಲ್ಲಿ ಐಪಿಎಲ್ ನೋಡುಗರ ಸಂಖ್ಯೆ ಹೆಚ್ಚಿದೆ. ಮೊಬೈಲ್​ನಲ್ಲಿ ನೋಡಲು ಹೆಚ್ಚು ಡಾಟಾ ಖರ್ಚಾಗುತ್ತದೆ. ಉತ್ತಮ ಡಾಟಾ ಪ್ಯಾಕೇಜ್ ನೀಡುವ ವಿವಿಧ ಪ್ಲಾನ್​ಗಳ ಪರಿಚಯ ಇಲ್ಲಿದೆ:

Unlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?
ರಿಲಾಯನ್ಸ್ ಜಿಯೋ
Follow us
|

Updated on:Apr 17, 2023 | 1:07 PM

ಈಗ ಐಪಿಎಲ್ (IPL 2023) ಫಿವರ್ ಹೆಚ್ಚುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಕೋಟ್ಯಂತರ ಜನರು ಮೊಬೈಲ್​ನಲ್ಲಿ ಐಪಿಎಲ್ ವೀಕ್ಷಿಸುತ್ತಿದ್ದಾರೆ. ಜಿಯೋ ಸಿನಿಮಾದಲ್ಲಿ (Jio Cinema App) ಐಪಿಎಲ್ ಸ್ಟ್ರೀಮಿಂಗ್ ಉಚಿತವಾದರೂ ಮೊಬೈಲ್ ಡಾಟಾ ಬಹಳಷ್ಟು ವ್ಯಯವಾಗುತ್ತದೆ. ಹೀಗಾಗಿ, ಅಧಿಕ ಡಾಟಾ ಒದಗಿಸುವ ಪ್ಲಾನ್​ಗಳನ್ನು ಕೊಳ್ಳುವುದು ಅಗತ್ಯ. ರಿಲಾಯನ್ಸ್ ಜಿಯೋ, ಏರ್​ಟೆಲ್, ವೊಡಾಫೋನ್ ಐಡಿಯಾ (Vi) ಮತ್ತು ಬಿಎಸ್​ಎನ್​ಎಲ್​ನಲ್ಲಿ ತರಹಾವೇರಿ ಡಾಟಾ ಪ್ಯಾಕೇಜ್​ಗಳಿವೆ. ಪ್ರೀಪೇಯ್ಡ್ (Prepaid) ಮತ್ತು ಪೋಸ್ಟ್ ಪೇಯ್ಡ್ (Post Paid) ಎರಡರಲ್ಲೂ ಉತ್ತಮ ಡಾಟಾ ಪ್ಯಾಕೇಜ್ ಇದೆ. ನೀವು ಕ್ರಿಕೆಟ್ ಪಂದ್ಯ ಪೂರ್ತಿ ವೀಕ್ಷಿಸುತ್ತೀರಾದರೆ ಪೋಸ್ಟ್ ಪೇಯ್ಡ್ ಪ್ಲಾನ್ ಪಡೆಯುವುದು ಉತ್ತಮ. ಪ್ರೀಪೇಯ್ಡ್ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡಾಟಾ ಕೊಡುವ ಪ್ಲಾನ್ ಆಯ್ಕೆ ಮಾಡಿಕೊಂಡು, ಅದಕ್ಕೆ ಡಾಟಾ ಟಾಪ್ ಅಪ್ (Data top-up) ಮಾಡಿಸಬಹುದು. ಆದರೆ, ಒಂದಿಡೀ ಐಪಿಎಲ್ ಪಂದ್ಯ ವೀಕ್ಷಿಸಿದರೆ 3-4 ಜಿಬಿಗಳಷ್ಟು ಡಾಟಾ ಖರ್ಚಾಗುತ್ತದೆ. ಹೀಗಾಗಿ ಪ್ರೀಪೇಯ್ಡ್ ಪ್ಲಾನ್ ಸೂಕ್ತ ಎನಿಸದಿರಬಹುದು. ಇನ್ನು, ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ ಬಹಳ ಆಯ್ಕೆಗಳಿವೆ. ಡಾಟಾ ಖಾಲಿಯಾಗುವ ಭಯ ಇಲ್ಲದೇ ಆ್ಯಪ್, ಇಂಟರ್ನೆಟ್ ಜಾಲಾಡಬಹುದು. 199 ರೂನಿಂದ ಆರಂಭವಾಗಿ 1500 ರೂವರೆಗೂ ಪೋಸ್ಟ್​ಪೇಯ್ಡ್ ಪ್ಲಾನ್​ಗಳಿವೆ. ಇಂಥ ಕೆಲ ಪ್ರಮುಖ ಪೋಸ್ಟ್ ಪೇಯ್ಡ್ ಪ್ಲಾನ್​ಗಳ ವಿವರ ಇಲ್ಲಿದೆ:

ಏರ್​ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್​ಗಳು:

399 ರೂ ಪ್ಲಾನ್: ಇದರಲ್ಲಿ ಅನ್​ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್, ತಿಂಗಳಿಗೆ 40 ಜಿಬಿ ಡಾಟಾ (4ಜಿ), 200 ಜಿಬಿಯಷ್ಟು ಡಾಟಾ ರೋಲ್ ಓವರ್ (Data Rollover) ಸೌಲಭ್ಯ ಇದೆ. ಇಲ್ಲಿ ರೋಲ್ ಓವರ್ ಡಾಟಾ ಎಂದರೆ ಒಂದು ತಿಂಗಳಲ್ಲಿ ಉಳಿಸಲಾದ ಡಾಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಫಾರ್ವರ್ಡ್ ಆಗುವುದು. ಇನ್ನು, ಏರ್​ಟೆಲ್​ನ ಈ ಪ್ಲಾನ್​ನಲ್ಲಿ ಅನ್​ಲಿಮಿಟೆಡ್ 5ಜಿ ಡಾಟಾ ಇರುತ್ತದೆ.

ಏರ್​ಟೆಲ್ 499 ರೂ ಪ್ಲಾನ್: ಅನ್​ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್ ಜೊತೆ 75 ಜಿಬಿಯಷ್ಟು 4ಜಿ ಡಾಟಾ ಹಾಗೂ 200 ಜಿಬಿ ಡಾಟಾ ರೋಲ್ ಓವರ್ ಸಿಗುತ್ತದೆ. ಇದರಲ್ಲೂ ಅನ್​ಲಿಮಿಟೆಡ್ 5ಜಿ ಡಾಟಾ ಸಿಗುತ್ತದೆ. ಅಮೇಜಾನ್ ಪ್ರೈಮ್ ಮತ್ತು ಹಾಟ್​ಸ್ಟಾರ್ ಸಬ್​ಸ್ಕ್ರಿಪ್ಷನ್ ಕೂಡ ಗಿಫ್ಟ್ ಆಗಿ ಸಿಗುತ್ತವೆ.

ಇದನ್ನೂ ಓದಿTech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಪಡೆಯಲು ಇರುವ ಸುಲಭ ದಾರಿ ಯಾವುದು?: ಇಲ್ಲಿದೆ ನೋಡಿ

ರಿಲಾಯನ್ಸ್ ಜಿಯೋ ಪೋಸ್ಟ್ ಪೇಯ್ಡ್ ಪ್ಲಾನ್ಸ್:

ಜಿಯೋ 299 ರೂ ಪ್ಲಾನ್: ಜಿಯೋದ ಈ ಪ್ಲಾನ್​ನಲ್ಲಿ ಅನ್​ಲಿಮಿಟೆಡ್ ಕಾಲ್ ಮತ್ತು ಎಸ್ಸೆಮ್ಮೆಸ್ ಸಿಗುತ್ತದೆ. ತಿಂಗಳಿಗೆ ಒಟ್ಟು 30 ಜಿಬಿಯಷ್ಟು 4ಜಿ ಡೇಟಾ ಸಿಗುತತ್ತದೆ. ಅನ್​ಲಿಮಿಟೆಡ್ 5ಜಿ ಡಾಟಾ ಕೊಡುಗೆಯೂ ಇದೆ. ಜಿಯೋ ಆ್ಯಪ್ ಮತ್ತು ಸೇವೆಗಳನ್ನೂ ಪಡೆಯಬಹುದು.

ಜಿಯೋ 599 ಪ್ಲಾನ್: ಈ ಪ್ಲಾನ್​ನಲ್ಲಿ ಎಷ್ಟು ಬೇಕಾದರೂ ಡಾಟಾ ಬಳಸಿ. ಮಿತಿ ಇಲ್ಲ. ಅನ್​ಲಿಮಿಟೆಡ್ ಕಾಲ್, ಎಸ್ಸೆಮ್ಮೆಸ್ ಮತ್ತು ಡಾಟಾವನ್ನು ಈ ಪ್ಲಾನ್ ಒದಗಿಸುತ್ತದೆ. ಜೊತೆಗೆ ಜಿಯೋ ಆ್ಯಪ್ ಮತ್ತು ಸರ್ವಿಸ್​ಗಳೂ ನಿಮಗೆ ಸಿಗುತ್ತದೆ. ಹೆಚ್ಚು ಡಾಟಾ ಬಳಸುವ ಜನರಿಗೆ ಹೇಳಿ ಮಾಡಿಸಿದ ಪ್ಲಾನ್ ಇದಾಗಿದೆ.

ಜಿಯೋ 1,499 ರೂ ಪ್ಲಾನ್: ಈ ಜಿಯೋ ಪೋಸ್ಟ್ ಪೇಡ್ ಪ್ಲಾನ್​ನಲ್ಲಿ 300 ಜಿಬಿಯಷ್ಟು 4ಜಿ ಡೇಟಾ ಸಿಗುತ್ತದೆ. ಅನ್​ಲಿಮಿಟೆಡ್ ಕಾಲ್ ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ಇದೆ. ಈ ಪ್ಲಾನ್​ನ ವಿಶೇಷತೆ ಎಂದರೆ ನೆಟ್​ಫ್ಲಿಕ್ಸ್ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ.

ಇದನ್ನೂ ಓದಿViral Video; ಸಂಜು ಸ್ಯಾಮ್ಸನ್​ಗೆ ಪಾಂಡ್ಯ ಕೀಟಲೆ; ಬ್ಯಾಟಿಂಗ್ ಮೂಲಕ ಉತ್ತರ ಕೊಟ್ಟ ಆರ್​ಆರ್ ಕ್ಯಾಪ್ಟನ್

ವೊಡಾಫೋನ್ ಐಡಿಯಾ (Vi) ಪೋಸ್ಟ್ ಪೇಯ್ಡ್ ಪ್ಲಾನ್:

ವಿಐ 401 ರೂ ಪ್ಲಾನ್: ಇದರಲ್ಲಿ 50 ಜಿಬಿ ಡಾಟಾ ಹಾಗೂ 200 ಜಿಬಿ ರೋಲ್ ಓವರ್ ಡಾಟಾ ಸಿಗುತ್ತದೆ. ರಾತ್ರಿ ವೇಳೆ ಅನಿರ್ಬಂಧಿತವಾಗಿ ಬಳಸುವ ಅವಕಾಶ ನೀಡುತ್ತದೆ. ದಿನಕ್ಕೆ 100 ಎಸ್ಸೆಮ್ಮೆಸ್, ಅನ್​ಲಿಮಿಟೆಡ್ ಕಾಲಿಂಗ್, ಸೋನಿಲಿವ್ ಝೀ5ನಂತರ ಓಟಿಟಿ ಸೇವೆ ಸಿಗುತ್ತದೆ.

ವಿಐ 501 ರೂ ಪ್ಲಾನ್: ವೊಡಾಫೋನ್ ಐಡಿಯಾದ 501 ರೂಗಳ ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ 90 ಜಿಬಿ 4ಜಿ ಡಾಟಾ ಹಾಗೂ 200 ಜಿಬಿ ರೋಲ್ ಓವರ್ ಡಾಟಾ ಸಿಗುತ್ತದೆ. ಅಮೇಜಾನ್ ಪ್ರೈಮ್, ಸೋನಿಲೈವ್, ಝೀ5, ಹಾಟ್​ಸ್ಟಾರ್ ಮೊದಲಾದ ಓಟಿಟಿ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

ವಿಐ 701 ರೂ ಪ್ಲಾನ್: ವೊಡಾಫೋನ್ ಐಡಿಯಾದ 701 ರೂಗಳ ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ ಅನ್​ಲಿಮಿಟೆಡ್ ಡಾಟಾ ನೀಡಲಾಗುತ್ತದೆ. ಎಷ್ಟು ಬೇಕಾದರೂ ಇಂಟರ್ನೆಟ್ ಉಪಯೋಗಿಸಬಹುದು. ದಿನಕ್ಕೆ 100 ಎಸ್ಸೆಮ್ಮೆಸ್, ಅನ್​ಲಿಮಿಟೆಡ್ ಕಾಲಿಂಗ್ ಸೌಲಭ್ಯ ಇದೆ. ವಿವಿಧ ಒಟಿಟಿ ಸಬ್​ಸ್ಕ್ರಿಪ್ಚನ್ ಕೂಡ ಸಿಗುತ್ತದೆ.

ವಿಐ REDX ಪ್ಲಾನ್: ವೊಡಾಫೋನ್ ಐಡಿಯಾದ ರೆಡ್​ಎಕ್ಸ್ ಪ್ಲಾನ್ 1,101 ರೂನದ್ದಾಗಿದೆ. ಇದರಲ್ಲಿ ಅನ್​ಲಿಮಿಟೆಡ್ ಡಾಟಾ, ಕಾಲ್ ಸೌಲಭ್ಯ ಇದೆ. 14 ದೇಶಗಳಿಗೆ ವಿಶೇಷ ದರದಲ್ಲಿ ಐಎಸ್​ಡಿ ಕರೆ ಮಾಡಬಹುದು. ಇದರಲ್ಲೂ ವಿವಿಧ ಒಟಿಟಿ ಸಬ್​ಸ್ಕ್ರಿಪ್ಚನ್​ಗಳು ಸಿಗುತ್ತವೆ.

ಇದನ್ನೂ ಓದಿBlinkit Strike: ಡೆಲಿವರಿ ಬಾಯ್ಸ್ ಮುಷ್ಕರ; ಜೊಮಾಟೊ ಮಾಲಕತ್ವದ ಬ್ಲಿಂಕಿಟ್​ಗೆ ನಡುಕ; ಬಾಗಿಲು ಮುಚ್ಚಿದ ಅನೇಕ ಡಾರ್ಕ್ ಸ್ಟೋರ್ಸ್

ಬಿಎಸ್​ಎನ್​ಎಲ್​ನ ಪೋಸ್ಟ್ ಪೇಯ್ಡ್ ಪ್ಲಾನ್​ಗಳು:

ಸರ್ಕಾರಿ ಸ್ವಾಮ್ಯದ ಭಾರತೀಯ ದೂರ ಸಂಚಾರ ನಿಗಮ (ಬಿಎಸ್ಸೆನ್ನೆಲ್) ಹೊಸ ಉತ್ಸಾಹದಲ್ಲಿ ಕಂಬ್ಯಾಕ್ ಮಾಡುತ್ತಿದೆಯಾದರೂ ಸದ್ಯ 3ಜಿ ಸೇವೆಗಳನ್ನು ಮಾತ್ರ ಒದಗಿಸುತ್ತಿದೆ. ಕೆಲವೇ ತಿಂಗಳಲ್ಲಿ ಎಲ್ಲೆಡೆ 4ಜಿ ನೆಟ್ವರ್ಕ್ ಅಳವಡಿಸಲಿದೆ. ಅದಾದ ಬಳಿಕ 5ಜಿ ಅನ್ನು ಬಿಎಸ್ಸೆನ್ನೆಲ್ ಅಳವಡಿಸಲಿದೆ. 3ಜಿ ಡಾಟಾ ಪರವಾಗಿಲ್ಲ ಎನ್ನುವವರಿಗೆ ಬಿಎಸ್ಸೆನ್ನೆಲೆ ಆಕರ್ಷಕ ಪ್ಯಾಕೇಜ್​ಗಳನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡುತ್ತದೆ.

ಬಿಎಸ್ಸೆನ್ನೆಲ್ 199 ರೂ ಪ್ಲಾನ್: ಇದರಲ್ಲಿ 25 ಜಿಬಿ ಡಾಟಾ ಮತ್ತು 75 ಜಿಬಿ ಡಾಟಾ ರೋಲ್ ಓವರ್ ಸಿಗುತ್ತದೆ. ಅನ್​ಲಿಮಿಟೆಡ್ ಕಾಲ್ ಕೂಡ ಇರುತ್ತದೆ.

ಬಿಎಸ್ಸೆನ್ನೆಲ್ 399 ರೂ ಪ್ಲಾನ್: ಇದರಲ್ಲಿ 70 ಜಿಬಿಯಷ್ಟು 3ಜಿ ಡಾಟಾ ಮತ್ತು 210 ರೂಗಳಷ್ಟು ರೋಲ್ ಓವರ್ ಡಾಟಾ ಸಿಗುತ್ತದೆ. ಈ ಪೋಸ್ಟ್ ಪೇಯ್ಡ್ ಪ್ಲಾನ್​ನಲ್ಲಿ ಒಟಿಟಿ ಸಬ್​ಸ್ಕ್ರಿಪ್ಚನ್ ಸಿಗುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Mon, 17 April 23