Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

|

Updated on: Apr 14, 2021 | 8:00 PM

ಭಾರತದ ಯುವ ಜನರಲ್ಲಿ ತಮ್ಮ ಪೋಷಕರಂತೆ ಚಿನ್ನದ ಮೇಲೆ ವ್ಯಾಮೋಹ ಇಲ್ಲ. ಅಷ್ಟೇ ಏಕೆ, ಹೂಡಿಕೆ ದೃಷ್ಟಿಯಿಂದಲೂ ಚಿನ್ನ ಎಂಬುದು ಅವರ ಪಾಲಿಗೆ ಕೊನೆ ಆಯ್ಕೆ ಎಂಬುದು ಹೌದು. ಇದೇಕೆ ಹೀಗೆ ಎಂಬ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?
ಸಾಂದರ್ಭಿಕ ಚಿತ್ರ
Follow us on

ಕಳೆದ ವರ್ಷ ಮಾರ್ಚ್​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್- 19 ಅನ್ನು ಜಾಗತಿಕ ಬಿಕ್ಕಟ್ಟು ಎಂದು ಘೋಷಣೆ ಮಾಡಿತು. ಆಗಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಶುರುವಾಗಿದ್ದರಿಂದ ಭಾರತದ ಹಲವು ಕುಟುಂಬಗಳಲ್ಲಿ ತಾಯಂದಿರು, ಮದುವೆಗೆ ಬಂದಿರುವ ತಮ್ಮ ಹೆಣ್ಣುಮಕ್ಕಳಿಗೆ ಚಿನ್ನ ಹಾಕುವುದು ಇನ್ನೆಷ್ಟು ದುಬಾರಿ ಆಗುತ್ತದೋ ಎಂದು ಆತಂಕಗೊಂಡಿದ್ದೇ ಬಂತು. ಏಕೆಂದರೆ ಭಾರತದಲ್ಲಿ ಮದುವೆಗಳೆಂದರೆ ಚಿನ್ನದ ಒಡವೆ, ವಸ್ತುಗಳು ಅವಿಭಾಜ್ಯ ಅಂಗ. ಅದೆಷ್ಟು ಚಿನ್ನವನ್ನು ಹಾಕುತ್ತಾರೋ ಆ ಕುಟುಂಬದವರು ಅಷ್ಟು ಶ್ರೀಮಂತರು ಎಂಬುದು ಲೆಕ್ಕಾಚಾರ. ಈ ದೇಶದಲ್ಲಿ ಚಿನ್ನವನ್ನು ಸಂಪತ್ತಿನಂತೆ ಪರಿಗಣಿಸಿ, ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾವಣೆ ಆಗುತ್ತಾ ಬರುತ್ತದೆ. ಕೆಲವು ಸಮೀಕ್ಷೆ ಪ್ರಕಾರ, ಭಾರತದ ಶೇಕಡಾ 96ರಷ್ಟು ಕುಟುಂಬಗಳಲ್ಲಿ ಸ್ವಲ್ಪವಾದರೂ ಚಿನ್ನ ಇದ್ದೇ ಇರುತ್ತದೆ.

ಈ ವಿಚಾರದಲ್ಲಿ ಅಚ್ಚರಿ ಪಡೋದಿಕ್ಕೆ ಏನಿಲ್ಲ, ಬಿಡಿ. ಏಕೆಂದರೆ, ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂದಾಜು ಮಾಡಿರುವ ಪ್ರಕಾರ, ಭಾರತೀಯ ಕುಟುಂಬಗಳ ಬಳಿ 25,000 ಟನ್​ಗೂ ಹೆಚ್ಚು ಚಿನ್ನವಿದ್ದರೆ, ಭಾರತ ಸರ್ಕಾರದ ಬಳಿ 700 ಟನ್​ಗೂ ಕಡಿಮೆ ಚಿನ್ನ ಇದೆ. ಒಂದು ಟನ್ ಅಂದರೆ 1000 ಕೇಜಿ. ಅಂಥ ಸಾವಿರ ಕೇಜಿಯನ್ನು 25,000ದಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ, ಅಂದರೆ 2,50,00,000 (2.50 ಕೋಟಿ) ಕೇಜಿಗೂ ಹೆಚ್ಚು ಚಿನ್ನ ಭಾರತದ ಕುಟುಂಬಗಳ ಬಳಿ ಇದೆ ಅಂತಾಯಿತು.

ಆದರೆ, ತಮ್ಮ ಪೋಷಕರು ಹೇಗೆ ಚಿನ್ನವನ್ನು ನೋಡುತ್ತಾರೋ ಅದೇ ರೀತಿಯಲ್ಲಿ ಭಾರತದ ಯುವಜನರೂ ಹಳದಿ ಲೋಹದ ಕಡೆ ನೋಡ್ತಾರಾ? ಈ ಬಗ್ಗೆ ಯಾವುದೇ ನಂಬಲರ್ಹ ಅಧ್ಯಯನಗಳು ಕಂಡುಬರುವುದಿಲ್ಲ. ಆದರೆ ಮೇಲ್ನೋಟಕ್ಕೆ ಕಂಡುಬರುವ ಸಾಕ್ಷ್ಯಗಳ ಪ್ರಕಾರ, ಚಿನ್ನದ ಬಗ್ಗೆ ತಮ್ಮ ಪೋಷಕರಿಗೆ ಇರುವಂಥ ಭಾವನೆ ಯುವಜನರಲ್ಲಿ ಕಂಡುಬರಲ್ಲ. ಯಾವಾಗಾದರೂ ನನ್ನ ಸುತ್ತ ಯುವ ಹೂಡಿಕೆದಾರರನ್ನು ನೋಡಿದಾಗ ಮತ್ತು ಅವರ ಜತೆಗೆ ಮಾತನಾಡುವ ಅವಕಾಶ ಸಿಕ್ಕಾಗ ಗಮನಿಸಿದಂತೆ- ಅದರಲ್ಲೂ ನಗರದ ಮಧ್ಯಮ ವರ್ಗದ ಯುವಜನರು ಚಿನ್ನವನ್ನು ಹೂಡಿಕೆ ಅಂತ ಪರಿಗಣಿಸುವುದೇ ಇಲ್ಲ.

ಉದಾಹರಣೆಗೆ, ನನ್ನ ಸೋದರ ಸಂಬಂಧಿಗಳ ಬಗ್ಗೆಯೇ ಹೇಳುವುದಾದರೆ, ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ ಚಿನ್ನದ ಮೇಲೆ ಬಹಳ ಕಡಿಮೆ ಹಣ ಹೂಡಿದ್ದಾರೆ. ಕಚೇರಿಗಳಿಗೆ ಹೋಗುವಾಗ ಸಣ್ಣ- ಪುಟ್ಟ ಆಭರಣಗಳನ್ನು ಹಾಕಿಕೊಳ್ಳುತ್ತಾರೆ. (ಅವೆಲ್ಲ ಅವರ ತಾಯಂದಿರಿಂದ ಮದುವೆ ಸಮಯದಲ್ಲಿ ಬಂದಂಥವು. ಒಂದು ಕಾಲಕ್ಕೆ ದೊಡ್ಡದಾಗಿದ್ದವು ಮತ್ತು ಡಿಸೈನ್​ನಿಂದ ಕೂಡಿತ್ತು.) ಉಳಿದಂತೆ ಅವರು ಖರ್ಚು ಮಾಡುವುದೆಲ್ಲ ಪ್ರವಾಸ, ಆಹಾರ, ಕಾರ್ಯಕ್ರಮಗಳು ಮುಂತಾದ ಅನುಭವಗಳಿಗೆ ಮಾತ್ರ.

ಚಿನ್ನದ ಬಗ್ಗೆ ಯುವ ತಲೆಮಾರಿನಲ್ಲಿ ಆಲೋಚನೆ ಬದಲಾಗುವುದಕ್ಕೆ ಇರುವ ಒಂದು ಕಾರಣ ಏನೆಂದರೆ, ಮದುವೆ ಬಗ್ಗೆ ಅವರಲ್ಲಿ ಸಾಂಪ್ರದಾಯಿಕ ದೃಷ್ಟಿಕೋನವಿಲ್ಲ. ತಮ್ಮ ಮಕ್ಕಳು ಪ್ರೀತಿಸಿ ಮದುವೆ ಆಗುವುದನ್ನು ಈಗಿನ ಪೋಷಕರು ಸಂತೋಷವಾಗಿ ಒಪ್ಪಿಕೊಳ್ಳುತ್ತಾರೆ, ಸಾಮಾಜಿಕ ವ್ಯವಸ್ಥೆಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗಬೇಕು ಎಂಬ ಕಟ್ಟಳೆ ಇಲ್ಲ. ಈಗಾಗಲೇ ಹಲವು ಯುವ ಜೋಡಿಗಳು ಡೆಸ್ಟಿನೇಷನ್ ವೆಡ್ಡಿಂಗ್ ಮಾಡುವಂತೆ ಕೇಳುತ್ತಿದ್ದಾರೆ (ಅವುಗಳ ಅನುಭವ ದೊಡ್ಡದು, ಹಾಗೆ ನೆನಪಿಸಿಕೊಳ್ಳಿ?). ಅವರಿಗೆ ವಜ್ರ, ಚಿನ್ನ ಮುಖ್ಯ ಅಲ್ಲವೇ ಅಲ್ಲ. ಅರೇಂಜ್ಡ್ ಮದುವೆಗಳಲ್ಲಿ ಚಿನ್ನ ಬಹಳ ಮುಖ್ಯವಾಗಿತ್ತು. ಆ ಜೋಡಿಯ ಆರ್ಥಿಕ ಭವಿಷ್ಯಕ್ಕೆ ಚಿನ್ನದಿಂದ ಅನುಕೂಲ ಆಗುತ್ತದೆ ಎಂಬ ಭಾವನೆ ಇತ್ತು. ಆದರೆ ಪ್ರೇಮವಿವಾಹದಲ್ಲಿ ಅಂಥದ್ದೊಂದು ಚಿಂತನೆಗೆ ಅವಕಾಶ ಇಲ್ಲ.

ಯುವಜನರಲ್ಲಿ ಚಿನ್ನದ ಆಕರ್ಷಣೆ ಕಡಿಮೆ ಆಗುವುದಕ್ಕೆ ಇನ್ನೊಂದು ಕಾರಣ ಏನು ಗೊತ್ತಾ? ಈಗಿನ ತಲೆಮಾರಿನವರಿಗೆ ತಮ್ಮ ಪೋಷಕರಿಗಿದ್ದ ಹೂಡಿಕೆ ಅವಕಾಶಗಳಿಗಿಂತ ಹೆಚ್ಚಿನದು ಇವೆ. ಐತಿಹಾಸಿಕವಾಗಿ ನೋಡಿಕೊಂಡು ಬಂದರೆ, ಭಾರತೀಯ ಕುಟುಂಬಗಳು ಹಣವನ್ನು ಇಡುತ್ತಿದ್ದುದು ಬ್ಯಾಂಕ್ ಡೆಪಾಸಿಟ್ ರೂಪದಲ್ಲಿ. ಆ ನಂತರದ ಸ್ಥಾನಗಳಲ್ಲಿ ಜೀವ ವಿಮೆ (ಲೈಫ್ ಇನ್ಷೂರೆನ್ಸ್), ಅಂಚೆ ಉಳಿತಾಯ (ಪೋಸ್ಟಲ್ ಸೇವಿಂಗ್ಸ್), ಬೆಲೆಬಾಳುವ ಲೋಹಗಳು, ಕೊನೆ ಆಯ್ಕೆಯಾಗಿ ರಿಯಲ್ ಎಸ್ಟೇಟ್ ಇರುತ್ತಿತ್ತು. ಈಕ್ವಿಟಿ ಎಂಬುದು ಅವರ ಆಯ್ಕೆ ಆಗಿರಲಿಲ್ಲ. ಏಕೆಂದರೆ, ಆ ಬಗ್ಗೆ ಸುರಕ್ಷತೆಯ ಚಿಂತೆ ಮತ್ತು ಅಗತ್ಯ ಪ್ರಮಾಣ ರಿಟರ್ನ್ಸ್ ಸಿಗಬಹುದಾ ಎಂಬ ಆತಂಕ ಅವರಲ್ಲಿತ್ತು.

ಈಗ ಕಣ್ಣೆದುರಿಗೇ ಆ ಆತಂಕದ ಬಲೂನ್​ಗೆ ಸೂಜಿ ಮೊನೆ ತಾಗಿದೆ. ಏಪ್ರಿಲ್ 1, 1979 (ಬೇಸ್ ವರ್ಷ) ಅಲ್ಲಿಂದ ಇಲ್ಲಿಯ ತನಕ ಈಕ್ವಿಟಿ 500 ಪಟ್ಟು ರಿಟರ್ನ್ ನೀಡಿದೆ. ಅದರರ್ಥ, ಸೂಚ್ಯಂಕದಲ್ಲಿ 1 ಲಕ್ಷ ರೂಪಾಯಿ ಎಂದು ಮಾಡಿದ್ದ ಹೂಡಿಕೆ ಈಗ ರೂ. 5 ಕೋಟಿ ಆಗಿದೆ. ಇನ್ನು ಯುವಜನರಾಗಿ, ಯಾವುದರ ಮೇಲೆ ಹಾಗೂ ವಿವಿಧೆಡೆಗಳಲ್ಲಿ ಹೂಡಿಕೆ ಮಾಡುವುದರ ಅಗತ್ಯವನ್ನು ಅರಿತು, ಹಣ ಹಾಕುತ್ತಿದ್ದಾರೆ. ಹೂಡಿಕೆ ಪೋರ್ಟ್​ಫೋಲಿಯೋ ದೃಷ್ಟಿಯಿಂದ ಚಿನ್ನವು ಅದರ ಸಣ್ಣ ಭಾಗ ಆಗುತ್ತಿದೆ. ಆಧುನಿಕ ಪೋರ್ಟ್​ಫೋಲಿಯೋ ದೃಷ್ಟಿಕೋನದಿಂದ ಚಿನ್ನದ ಮೇಲಿನ ಹೂಡಿಕೆಯನ್ನು ಶೇ 3ರಿಂದ ಶೇ 10ರ ಮಧ್ಯೆ ಮಿತಿಗೊಳಿಸಲಾಗುತ್ತಿದೆ.

ಈ ವರ್ಷದ ಜನವರಿಯಲ್ಲಿ ಒಂದು ಔನ್ಸ್​ಗೆ (28.3495 ಗ್ರಾಮ್) 1931 ಅಮೆರಿಕನ್ ಡಾಲರ್ ಇದ್ದ ಚಿನ್ನದ ಬೆಲೆ ಈಗ 1700 ಯುಎಸ್​ಡಿ ಇದೆ. ಹೆಚ್ಚುತ್ತಿರುವ ಯುಎಸ್ ಟ್ರೆಷರಿ ಬಾಂಡ್ ಯೀಲ್ಡ್ ಹಾಗೂ ಕೊರೊನಾ ಲಸಿಕೆಯಿಂದ ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆ ಕಾರಣಕ್ಕೆ ಚಿನ್ನದ ಬೆಲೆ ಇಳಿಕೆ ಆಗಿದೆ. ಹಾಗಿದ್ದರೆ ಯುವ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಬೇಕಾ? ಹೌದು ಎಂದಾದಲ್ಲಿ ಹೇಗೆ? ನನ್ನ ಸಲಹೆ ಏನೆಂದರೆ, ಹೂಡಿಕೆ ಮಾಡಬಹುದಾದ ಹೆಚ್ಚುವರಿಯಲ್ಲಿ ಶೇಕಡಾ 5ರಷ್ಟನ್ನು ಚಿನ್ನದ ಮೇಲೆ ಹೂಡಬಹುದು. ಚಿನ್ನದ ಆಭರಣ ಖರೀದಿ ಮಾಡುವ ಬದಲಿಗೆ ಚಿನ್ನ BeEs ಖರೀದಿಸಿ. ಚಿನ್ನದ BeEs ಅಂದರೆ ಮ್ಯೂಚುವಲ್ ಫಂಡ್ಸ್. ದೇಶೀ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏನಿರುತ್ತದೋ ಅದನ್ನೇ ಈ ಮ್ಯೂಚುವಲ್ ಫಂಡ್​ಗಳು ಅನುಸರಿಸುತ್ತವೆ.

ಆದರೆ, ಚಿನ್ನದ ಆಭರಣಕ್ಕೆ ಮಾಡುವಂತೆ ಮೇಕಿಂಗ್ ಚಾರ್ಜ್ ಇರೋದಿಲ್ಲ. ಇನ್ನು ನಿಮ್ಮ ಹಣಕ್ಕೆ ಸಿಗುವುದು 24 ಕ್ಯಾರಟ್ ಚಿನ್ನ. ಜತೆಗೆ ಎಲ್ಲಿ ಕಳುವಾಗುತ್ತದೋ ಎಂಬ ಆತಂಕ ಇರುವುದಿಲ್ಲ. ವರ್ಚುವಲ್ ಚಿನ್ನ ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ಇರುತ್ತದೆ. ಇದರ ಜತೆಗೆ, ಒಂದು ಯೂನಿಟ್ ಚಿನ್ನವನ್ನಾದರೂ ಖರೀದಿಸಬಹುದು. ಒಂದು ಯೂನಿಟ್ ಅಂದರೆ, 1 ಗ್ರಾಮ್ ಚಿನ್ನ.

ಒಂದು ಹಂತದ ನಂತರ ಚಿನ್ನ ಅನ್ನೋದು ಪ್ರಯೋಜನಕ್ಕೆ ಬಾರದ ಹೂಡಿಕೆ. ಒಂದು ವೇಳೆ ಭೌತಿಕವಾಗಿ (ಫಿಸಿಕಲ್) ಚಿನ್ನ ಹೊಂದಿದ್ದರೆ ಎಲ್ಲೋ ಒಂದು ಕಡೆ ಭದ್ರವಾಗಿ ಇರಲಿ ಎಂದು ಬೀಗ ಹಾಕಿಟ್ಟುಬಿಡುತ್ತೇವೆ. ಚಿನ್ನವನ್ನು ಹಣದುಬ್ಬರಕ್ಕೆ ವಿರುದ್ಧವಾದ ಹೆಡ್ಜ್ ಎಂದು ಪರಿಗಣಿಸಲಾಗುತ್ತದೆ. ದೀರ್ಘಾವಧಿ ರಿಟರ್ನ್ಸ್​ಗೆ ಚಿನ್ನ ಉತ್ತಮ ಆಯ್ಕೆ ಅಲ್ಲ. ಒಂದು ಒಳ್ಳೆ ಕಂಪೆನಿ ಷೇರಿನ ಮೇಲೆ ಹೂಡುವ ಹಣವು ಅತ್ಯುತ್ತಮ ರಿಟರ್ನ್ಸ್ ನೀಡುತ್ತದೆ ಎಂದು ನಾನು ಧೈರ್ಯವಾಗಿ ಹೇಳ್ತೀನಿ (ನಾವಿದನ್ನು ಸೂಚ್ಯಂಕದ ಪರ್ಫಾರ್ಮೆನ್ಸ್ ಜತೆ ನೋಡಿದ್ದೀವಿ). ಕಂಪೆನಿಗೆ ಅಗತ್ಯ ಇರುವ ಬಂಡವಾಳ ನೀಡಿದಾಗ ಅದರಿಂದ ಆರ್ಥಿಕ ಸಂಪತ್ತನ್ನೂ ಸೃಷ್ಟಿಸುತ್ತದೆ.

ಭಾರತ ಸರ್ಕಾರದ ಚಿನ್ನದ ಸವರನ್ ಬಾಂಡ್​ಗಳು ಸಹ ಒಳ್ಳೆ ಖರೀದಿಯೇ. ಇವುಗಳನ್ನು (ಸಿರೀಸ್ II) 2016ರಲ್ಲಿ ಖರೀದಿ ಮಾಡಿದ್ದರೆ, ಈಗ ಅವಧಿಗೆ ಪೂರ್ವವಾಗಿ (ಈ ಬಾಂಡ್ ಲಾಕ್-ಇನ್ ಅವಧಿ 8 ವರ್ಷ) ಹಿಂತೆಗೆದುಕೊಂಡರೆ, ಶೇ 54ರಷ್ಟು ರಿಟರ್ನ್ಸ್ ಸಿಗುತ್ತದೆ. ಇದು ಖಂಡಿತಾ ಕೆಟ್ಟ ರಿಟರ್ನ್ಸ್ ಅಲ್ಲ. ಚಿನ್ನದ ಅನಿಶ್ಚಿತತೆ ಮತ್ತು ಕರೆನ್ಸಿ ಮೌಲ್ಯದ ಕುಸಿತದ ಕಾರಣಗಳು ಜನರು ಚಿನ್ನವನ್ನು ಖರೀದಿಸಬೇಕಾ, ಬೇಡವಾ ಎಂಬುದನ್ನು ನಿರ್ಧರಿಸುತ್ತವೆ. ಈ ಎರಡೂ ನಮ್ಮ ಜಗತ್ತಿನಿಂದ ತಕ್ಷಣಕ್ಕೆ ದೂರ ಆಗುವುದಿಲ್ಲ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಿ, ಆದರೆ ಸಣ್ಣ ಪ್ರಮಾಣದಲ್ಲಿ ಮಾತ್ರ.

(ಕೃಪೆ: ಮನಿ9.ಕಾಮ್
ಮೂಲ ಲೇಖಕರು: ಆರ್. ಶ್ರೀಧರನ್, ಟಿವಿ9 ಕನ್ನಡ ಕಾರ್ಯನಿರ್ವಾಹಕ ಸಂಪಾದಕರು ಮತ್ತು ET ನೌ ಹಾಗೂ ಬಿಜಿನೆಸ್ ಟುಡೇ ಮಾಜಿ ಕಾರ್ಯನಿರ್ವಾಹಕ ಸಂಪಾದಕರು. ಇಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

ಇದನ್ನೂ ಓದಿ: Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು

ಇದನ್ನೂ ಓದಿ: ಜೂನ್​ 1ರಿಂದ ಹಾಲ್​ಮಾರ್ಕ್​ ಕಡ್ಡಾಯ.. ಚಿನ್ನದ ಪರಿಶುದ್ಧತೆ, ಗುಣಮಟ್ಟ ದೃಢೀಕರಿಸಲು ಹಾಲ್​ಮಾರ್ಕ್​ ಅತ್ಯವಶ್ಯಕ!

(Why young investors of India not considering gold as major investment instrument? Here is an analysis on the basis of youth perspective.)