ಬೆಂಗಳೂರು: ಬೇಸಿಗೆ ಬಂತೆಂದರೆ ನೀರಿನ ಅಭಾವದಂತೆ ಮೊಟ್ಟೆಗಳಿಗೂ ಬರ ಎದುರಾಗುತ್ತದೆ. ಪ್ರತೀ ಬೇಸಿಗೆಯಂತೆ ಬೆಂಗಳೂರಿನಲ್ಲಿ ಈ ಬಾರಿಯೂ ಮೊಟ್ಟೆ ದುಬಾರಿಯಾಗಿದೆ. ಕೆಲವೊಂದು ಕಡೆ ಒಂದು ಮೊಟ್ಟೆ 7 ರೂವರೆಗೂ ಬೆಲೆಗೆ ಮಾರಾಟವಾಗುತ್ತಿದೆ. ಒಂದೆಡೆ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಬೇಸಿಗೆಯಲ್ಲಿ ಮೊಟ್ಟೆ ಲಭ್ಯತೆ ಕಡಿಮೆ ಆಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಕೋಳಿಫಾರ್ಮ್ಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಪರಿಣಾಮವಾಗಿ ಮೊಟ್ಟೆಯ ಬೇಡಿಕೆ ಪೂರೈಸಲು ಬೇರೆ ಬೆರೆ ಭಾಗಗಳಿಂದ ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ. ತಮಿಳುನಾಡಿನಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ.
ಬೇಸಿಗೆ ತಾಪಕ್ಕೆ ಬಹಳ ಮಂದಿ ಒದ್ದಾಡಿ ಹೋಗುತ್ತೇವೆ. ಸೌಕರ್ಯ ಇದ್ದವರು ಎಸಿ ಹಾಕಿಕೊಂಡು ಶೆಖೆ ನೀಗಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿ ಪಕ್ಷಿಗಳು ಏನು ಮಾಡಿಯಾವು…! ಅದರಲ್ಲೂ ಸೆರೆಯಲ್ಲಿ ಜೀವನ ಸವೆಸುವ ಕೋಳಿಯಂಥ ಪಕ್ಷಿಗಳ ಕಥೆ ಏನು ಯೋಚಿಸಿ..! ಕೋಳಿಫಾರ್ಮ್ನಲ್ಲಿರುವ ಕೋಳಿಗಳು ಬೇಸಿಗೆಯ ಬಿಸಿಲಿಗೆ ಅಕ್ಷರಶಃ ನಲುಗಿಹೋಗುತ್ತಿವಂತೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಾಗೂ ಅದರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ.
ಕೋಳಿಫಾರ್ಮ್ನಲ್ಲಿರುವ ಕೋಳಿಗಳಿಗೆ ಶೆಖೆ ಹೆಚ್ಚಾದಾಗ ಬೆವರಿಳಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಶೆಖೆ ಹೆಚ್ಚಾದಾಗ ಈ ಕೋಳಿಗಳು ಆಹಾರ ಸೇವಿಸುವುದನ್ನು ತೀರಾ ಕಡಿಮೆ ಮಾಡಿ, ನೀರು ಕುಡಿಯುವುದನ್ನು ಹೆಚ್ಚಿಸುತ್ತವೆ. ಇದರಿಂದ ಕೋಳಿ ಇಡುವ ಮೊಟ್ಟೆಯ ಸಂಖ್ಯೆ ಕಡಿಮೆ ಆಗುತ್ತದೆ. ಇಟ್ಟ ಮೊಟ್ಟೆಯ ಗುಣಮಟ್ಟವೂ ಕಳಪೆಯಾಗಿರುತ್ತದೆ. ಈ ಮೊಟ್ಟೆದ ಪದರ ತೆಳುವಾಗಿದ್ದು, ಗಾತ್ರವೂ ಸಣ್ಣದಿರುತ್ತದೆ. ಹೀಗಾಗಿ, ಮೊಟ್ಟೆ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Rs 75 Coin Rate: ಒಂದು 75 ರೂ ನಾಣ್ಯ ತಯಾರಿಕೆಗೆ ಎಷ್ಟು ವೆಚ್ಚ? ಎಲ್ಲಿ ಮತ್ತು ಎಷ್ಟಕ್ಕೆ ಸಿಗುತ್ತೆ ಈ ಕಾಯಿನ್?
ಒಟ್ಟಾರೆ ಮೊಟ್ಟೆಯ ಉತ್ಪಾದನೆ ಕುಸಿದುಹೋಗಿದೆ. ಕರ್ನಾಟಕದ ಕುಕ್ಕುಟ ಉದ್ಯಮದ ಸಂಘಟನೆ ಕೆಪಿಎಫ್ಬಿಎ ಪ್ರಕಾರ ಏಪ್ರಿಲ್ ತಿಂಗಳಲ್ಲಿ ದಿನಕ್ಕೆ 1.8 ಕೋಟಿ ಮೊಟ್ಟೆಗಳ ಉತ್ಪಾದನೆ ಆಗುತ್ತಿತ್ತು. ಇದು ಮೇ ತಿಂಗಳಲ್ಲಿ 1.6 ಕೋಟಿಗೆ ಬಂದು ಇಳಿದಿದೆ ಎಂದು ಹೇಳಲಾಗಿದೆ. ಅದೇನೇ ಇದ್ದರೂ ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಎಂಬುದು ನಿಜ. ಬೇಸಿಗೆಯ ವಿದ್ಯಮಾನ ಎಂದು ಈ ಉದ್ಯಮದವರು ಸುಮ್ಮನಾಗುತ್ತಾರೆ. ಜೂನ್ನಿಂದ ಮಳೆ ಆರಂಭವಾಗುವುದರಿಂದ ಕುಕ್ಕುಟೋದ್ಯಮ ಮತ್ತೆ ಗರಿಗೆದರಿಕೊಂಡು ಮಿಂಚುತ್ತದೆ ಎಂಬ ಆಸೆಯಲ್ಲಿ ಮತ್ತು ನಿರೀಕ್ಷೆಯಲ್ಲಿ ಇದ್ದಾರೆ ಮೊಟ್ಟೆ ವ್ಯಾಪಾರಿಗಳು.