ಭಾರತ ಸದ್ಯ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯುಳ್ಳ (Big Economy) ದೇಶವಾಗಿದೆ. ಆದರೂ ಕೂಡ ಭಾರತ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ (Developing nation) ಇದೆ. ಅಮೆರಿಕ, ಬ್ರಿಟನ್ ಇತ್ಯಾದಿಯಂತೆ ಮುಂದುವರಿದ ದೇಶವಾಗಬೇಕಾದರೆ ಬೇರೆ ಮಾನದಂಡಗಳಿವೆ. ದೇಶದ ಒಟ್ಟು ಸಂಪತ್ತು ಎಷ್ಟು ಎಂಬುದು ಮುಖ್ಯವಾದರೂ ಅದು ಮುಂದುವರಿದ ದೇಶವೆಂದು ಪರಿಗಣಿಸಬೇಕಾದರೆ ತಲಾದಾಯ (Per Capita Income) ಸೇರಿದಂತೆ ವಿವಿಧ ಮಾನವ ಅಭಿವೃದ್ಧಿ ಸೂಚಿಗಳು ಉಚ್ಚತಮವಾಗಿರಬೇಕು. ವಿಶ್ವ ಬ್ಯಾಂಕ್ ನಿಗದಿಪಡಿಸಿರುವ ಮಾನದಂಡದ ಪ್ರಕಾರ ದೇಶದ ವಾರ್ಷಿಕ ತಲಾದಾಯ 21,664 ಡಾಲರ್ (18 ಲಕ್ಷ ರೂ) ಇರಬೇಕು. ಭಾರತಕ್ಕೆ ಈ ಮಟ್ಟದ ತಲಾದಾಯ ಮಟ್ಟ ಮುಟ್ಟಲು ಸಾಧ್ಯವಾ?
ಭಾರತದ ಈಗಿನ ಸರಾಸರಿ ವಾರ್ಷಿಕ ತಲಾದಾಯ 2,500 ಡಾಲರ್ (2.07 ಲಕ್ಷ ರೂ) ಇದೆ. ಮುಂದುವರಿದ ದೇಶವಾಗಲು 21,664 ಡಾಲರ್ ಮಟ್ಟಕ್ಕೆ ಅದು ಹೋಗಬೇಕು. ಅಂದರೆ, ತಲಾದಾಯ 10 ಪಟ್ಟು ಹೆಚ್ಚಾಗಬೇಕು. 2047ಕ್ಕೆ, ಅಂದರೆ ಇನ್ನು 25 ವರ್ಷಕ್ಕೆ ಭಾರತದ ಜಿಡಿಪಿ ವಿಶ್ವದ 3ನೇ ಸ್ಥಾನಕ್ಕೆ ಹೋಗುವ ನಿರೀಕ್ಷೆಯನ್ನು ಹಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಈ 25 ವರ್ಷದಲ್ಲಿ ಭಾರತ ಮುಂದುವರಿದ ದೇಶವಾಗಲು ಸಾಧ್ಯವಾ ಎಂಬ ಪ್ರಶ್ನೆಗೆ ಇತ್ತೀಚೆಗೆ ಬಿಡುಗಡೆ ಆದ ಆರ್ಬಿಐನ ಸಂಶೋಧನಾ ವರದಿ ಉತ್ತರ ನೀಡಿದೆ.
2047ಕ್ಕೆ ಭಾರತದ ತಲಾದಾಯ ವಿಶ್ವ ಬ್ಯಾಂಕ್ ನಿಗದಿ ಮಾಡಿದ ಪ್ರಮಾಣವನ್ನು ತಲುಪಲು ಸಾಧ್ಯ. ಆದರೆ, ಆದು ಸಾಧ್ಯವಾಗಬೇಕಾದರೆ ಭಾರತದ ಆರ್ಥಿಕತೆ ಪ್ರತೀ ವರ್ಷ ಸರಾಸರಿಯಾಗಿ 7.8ರಷ್ಟು ಬೆಳೆಯಬೇಕು. ಭಾರತದ ರಿಯಲ್ ಜಿಡಿಪಿಯ ಸಿಎಜಿಆರ್ ಶೇ 7.6 ಇರಬೇಕು ಎಂದು ಆರ್ಬಿಐನ ಎಕನಾಮಿಕ್ ರಿಸರ್ಚ್ ಡಿಪಾರ್ಟ್ಮೆಂಟ್ನ ಅಧ್ಯಯನ ವರದಿಯೊಂದು ಹೇಳಿದೆ.
ಈ ಮಟ್ಟಕ್ಕೆ ಸ್ಥಿರ ಬೆಳವಣಿಗೆಯನ್ನು ಭಾರತ ಸಾಧಿಸಲು ಸಾಧ್ಯವಾ ಎಂಬುದು ಪ್ರಶ್ನೆ. ಭಾರತ ಈ ಹಿಂದೆ ಇಂಥದ್ದೊಂದು ಅಮೋಘ ಬೆಳವಣಿಗೆಯ ಹಂತವನ್ನು ಕಂಡಿದೆ ಎನ್ನುವುದು ಸಕಾರಾತ್ಮಕವಾದ ಸಂಗತಿ. 1993-94ರಿಂದ 2017-18ರವರೆಗಿನ 25 ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 8.1ರ ಸಿಎಜಿಆರ್ ದರದಲ್ಲಿ ಬೆಳೆದಿದ್ದಿದೆ.
ಇದನ್ನೂ ಓದಿ: England: ಇಂಗ್ಲೆಂಡ್ನಲ್ಲಿ ಬಡ್ಡಿದರ 25 ಬೇಸಿಸ್ ಅಂಕಗಳಷ್ಟು ಹೆಚ್ಚು; ಕಳೆದ 15 ವರ್ಷದಲ್ಲೇ ಗರಿಷ್ಠ ಮಟ್ಟ
ಆ ಮಟ್ಟದ ಬೆಳವಣಿಗೆಯನ್ನು ಭಾರತ ಈಗ ಸತತವಾಗಿ ಕಾಣಬೇಕಾದರೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳಾಗಬೇಕು. ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಇನ್ಫ್ರಾಸ್ಟ್ರಕ್ಚರ್, ಆರೋಗ್ಯ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಸುಧಾರಣಾ ಕ್ರಮಗಳಾಗಬೇಕು. ಅಗಣಿತವಾದ ಬಂಡವಾಳ ಹೂಡಿಕೆಯಾಗಬೇಕು ಎಂದು ಆರ್ಬಿಐನ ಅಧ್ಯಯನಾ ವರದಿ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ