ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ
Registered sale deed and tax notice: ಆಸ್ತಿ ಮಾರಿ ಬಂದ ಸ್ವಲ್ಪ ಕ್ಯಾಷ್ ಹಣದಲ್ಲಿ 13 ಲಕ್ಷ ರೂ ಅನ್ನು ಬ್ಯಾಂಕ್ ಅಕೌಂಟ್ಗೆ ಡೆಪಾಸಿಟ್ ಮಾಡಿದ್ದ ಮಹಿಳೆಗೆ ಟ್ಯಾಕ್ಸ್ ನೋಟೀಸ್ ಬಂದಿತ್ತು. ಆ ವರ್ಷ ಮಹಿಳೆ ಐಟಿಆರ್ ಫೈಲ್ ಮಾಡದ್ದರಿಂದ 13 ಲಕ್ಷ ರೂ ಕ್ಯಾಷ್ ಅನ್ನು ಅಘೋಷಿತ ಆಸ್ತಿ ಎಂದು ಪರಿಗಣಿಸಲಾಗಿತ್ತು. ಆದರೆ, ಮುಂಬೈನ ಐಟಿ ಟ್ರಿಬ್ಯುನಲ್ ಆ ಮಹಿಳೆ ಪರವಾಗಿ ತೀರ್ಪು ಕೊಟ್ಟಿದೆ.

ಮುಂಬೈ, ಡಿಸೆಂಬರ್ 30: ಚಿರಾಸ್ತಿ ಮಾರಿ ಬಂದ ಹಣದಲ್ಲಿ ಒಂದಷ್ಟು ಕ್ಯಾಷ್ ಸಿಕ್ಕು, ಅದರಲ್ಲಿ ಸ್ವಲ್ಪವನ್ನು ಅಕೌಂಟ್ಗೆ ಡೆಪಾಸಿಟ್ ಮಾಡಿದ್ದ ಮಹಿಳೆಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟೀಸ್ ಬಂದಿದೆ. ಅಘೋಷಿತ ಆದಾಯ ಇದೆ ಎಂದು ವಿವರ ಕೇಳಿ ನೋಟೀಸ್ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆ ಮಹಿಳೆಯ ಪರವಾಗಿ ತೀರ್ಪು ಕೊಟ್ಟಿದೆ. ಆಸ್ತಿ ಮಾರುವವರಿಗೆ ಈ ಪ್ರಕರಣ ಕೆಲ ಕಾನೂನು ಅರಿವು ಪಡೆಯಲು ಸಹಾಯವಾಗಬಹುದು.
ಏನಿದು ಪ್ರಕರಣ?
ಮಹಿಳೆಯೊಬ್ಬರು (ಶ್ರೀಮತಿ ಚವಾಣ್) ಎಂಬುವವರು ತಮ್ಮ ಆಸ್ತಿಯೊಂದನ್ನು 94.06 ಲಕ್ಷ ರೂಗೆ ಮಾರಿದ್ದಾರೆ. ಇದರಲ್ಲಿ 38,15,000 ರೂ ಅನ್ನು ಕ್ಯಾಷ್ ರೂಪದಲ್ಲಿ ಪಡೆದಿದ್ದಾರೆ. ಅದು ನೊಂದಾಯಿತ ಕ್ರಯವಾಗಿತ್ತು. ಅಂದರೆ ರಿಜಿಸ್ಟರ್ಡ್ ಸೇಲ್ ಡೀಡ್. ಇದರಲ್ಲಿ ಕ್ಯಾಷ್ ರೂಪದಲ್ಲಿ ಹಣ ಪಡೆಯಲಾಗಿದ್ದನ್ನೂ ನಮೂದಿಸಲಾಗಿರುತ್ತದೆ.
ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?
ಚವಾಣ್ ಅವರು ತಮಗೆ ಬಂದ 38.15 ಲಕ್ಷ ರೂ ಕ್ಯಾಷ್ ಹಣದಲ್ಲಿ 13,00,500 ರೂ ಅನ್ನು ತಮ್ಮ ಐಸಿಐಸಿಐ ಬ್ಯಾಂಕ್ ಅಕೌಂಟ್ಗೆ ಡೆಪಾಸಿಟ್ ಮಾಡಿದ್ದಾರೆ. ಆದರೆ, ಆ ವರ್ಷ ಇವರು ಐಟಿ ರಿಟರ್ನ್ ಸಲ್ಲಿಸಿಲ್ಲ. ಇವರ ಬ್ಯಾಂಕ್ ಖಾತೆಗೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಆಗಿರುವ ಬಗ್ಗೆ ಎಐಎಂಎಸ್ ಮಾಡ್ಯೂಲ್ ಮೂಲಕ ಆದಾಯ ತೆರಿಗೆ ಅಧಿಕಾರಿಗೆ ತಿಳಿಯುತ್ತದೆ. ಈ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಎಲ್ಲಿಂದ ಬಂತು, ಅದರ ಆದಾಯ ಮೂಲ ಏನು ಎಂದು ಹೇಳಿ ಅಸೆಸ್ಮೆಂಟ್ ಆಫೀಸರ್ ನೋಟೀಸ್ ಕೊಟ್ಟಿದ್ದಾರೆ. ಇದಾಗಿದ್ದು 2022 ಏಪ್ರಿಲ್ 28ರಂದು.
ಇದಾದ ಬಳಿಕ ಮಹಿಳೆಯು ಆ ವರ್ಷಕ್ಕೆ ಐಟಿಆರ್ ಸಲ್ಲಿಸಿದ್ದಾರೆ. ಅದರಲ್ಲಿ ನೊಂದಾಯಿತ ಸೇಲ್ ಡೀಡ್, ರೆಸಿಪ್ಟ್, ಬ್ಯಾಂಕ್ ಸ್ಟೇಟ್ಮೆಂಟ್, ಕ್ಯಾಷ್ ಡೆಪಾಸಿಟ್ ಇವೆಲ್ಲದಕ್ಕೂ ದಾಖಲೆಗಳು ಮತ್ತು ವಿವರಣೆಗಳನ್ನು ಕೊಟ್ಟಿದ್ದಾರೆ.
ಇಷ್ಟಕ್ಕೆ ಐಟಿ ಇಲಾಖೆ ಸಮಾಧಾನಗೊಳ್ಳಬೇಕಿತ್ತು. ಆದರೆ, ಮಹಿಳೆ ಸಲ್ಲಿಸಿದ್ದ ಐಟಿಆರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ಅಸಿಂಧು ಎಂದು ಪರಿಗಣಿಸಲಾಗಿದೆ. ಅವರು ಕೊಟ್ಟಿದ್ದ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನೂ ಪರಿಗಣಿಸಲಾಗಿಲ್ಲ. ವಿಚಿತ್ರ ಎಂದರೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಅಷ್ಟೇ ಅಲ್ಲ, ಆಸ್ತಿ ಮಾರಾಟದಲ್ಲಿ ಬಂದ 94 ಲಕ್ಷ ರೂ ಇಡೀ ಹಣವನ್ನೇ ಅಘೋಷಿತ ಆದಾಯ ಎಂದು ವಾದಿಸಿದೆ.
ಇದನ್ನೂ ಓದಿ: ಷೇರು, ಚಿನ್ನ, ಎಫ್ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
ಈ ಪ್ರಕರಣವು ಮುಂಬೈನ ಇನ್ಕಮ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿಯ ಮೆಟ್ಟಿಲೇರಿದೆ. ಮಹಿಳೆ ಒದಗಿಸಿರುವ ದಾಖಲೆಗಳನ್ನು ಕೋರ್ಟ್ ಮಾನ್ಯ ಮಾಡಿ 2025ರ ನವೆಂಬರ್ 13ರಂದು ಆಕೆಯ ಪರವಾಗಿ ತೀರ್ಪು ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




