ಹೂಡಿಕೆ ನಿರ್ಧಾರಗಳ ಮೇಲೆ ಯಾರ ಪ್ರಭಾವವೂ ಇಲ್ಲ: ವಾಷಿಂಗ್ಟನ್ ಪೋಸ್ಟ್ ವರದಿ ಸುಳ್ಳೆಂದ ಎಲ್​ಐಸಿ

ಎಲ್ಐಸಿಯ ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂಬ ‘ವಾಷಿಂಗ್ಟನ್ ಪೋಸ್ಟ್’ ವರದಿ ಸುಳ್ಳು ಎಂದು ಎಲ್ಐಸಿ ಸ್ಪಷ್ಟಪಡಿಸಿದೆ. ಅದಾನಿ ಗ್ರೂಪ್​ನಲ್ಲಿನ ಹೂಡಿಕೆ ಕುರಿತ ಆರೋಪಗಳು ಆಧಾರರಹಿತ. ಎಲ್ಲಾ ನಿರ್ಧಾರಗಳು ನೀತಿ-ನಿಯಮಗಳ ಪ್ರಕಾರ ಸ್ವತಂತ್ರವಾಗಿರುತ್ತವೆ. ಈ ವರದಿ ಭಾರತದ ಹಣಕಾಸು ಅಡಿಪಾಯ ಹಾಳು ಮಾಡುವ ಹುನ್ನಾರ ಎಂದು ಎಲ್ಐಸಿ ಟೀಕಿಸಿದೆ.

ಹೂಡಿಕೆ ನಿರ್ಧಾರಗಳ ಮೇಲೆ ಯಾರ ಪ್ರಭಾವವೂ ಇಲ್ಲ: ವಾಷಿಂಗ್ಟನ್ ಪೋಸ್ಟ್ ವರದಿ ಸುಳ್ಳೆಂದ ಎಲ್​ಐಸಿ
ಎಲ್​ಐಸಿ

Updated on: Oct 25, 2025 | 1:30 PM

ನವದೆಹಲಿ, ಅಕ್ಟೋಬರ್ 25: ಭಾರತೀಯ ಜೀವ ವಿಮಾ ನಿಗಮದ (LIC) ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂಬ ‘ವಾಷಿಂಗ್ಟನ್ ಪೋಸ್ಟ್’ ವರದಿಯ ಕುರಿತು ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಈ ವರದಿ ಸುಳ್ಳಿನಿಂದ ಅಥವಾ ತಪ್ಪು ಮಾಹಿತಿ ಯಿಂದ ಕೂಡಿದೆ ಎಂದು ಎಲ್ಐಸಿ ಸ್ಪಷ್ಟಪಡಿಸಿದೆ. ಈ ವಿಚಾರವಾಗಿ ಎಲ್ಐಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಎಲ್​ಐಸಿ ಪ್ರಕಟಣೆಯಲ್ಲೇನಿದೆ?

ಎಲ್‌ಐಸಿಯ ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಮಾಡಿರುವ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ವರದಿಯಲ್ಲಿ ಉಲ್ಲೇಖಿಸಿರುವಂತೆ, ಅದಾನಿ ಗ್ರೂಪ್​ನಲ್ಲಿ ಹೂಡಿಕೆ ಮಾಡುವ ಸಂಬಂಧ ಎಲ್​ಐಸಿ ಯಾವುದೇ ಮಾರ್ಗಸೂಚಿ ರೂಪಿಸಿಲ್ಲ. ದಾಖಲೆಗಳನ್ನೂ ಸಿದ್ಧಪಡಿಸಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಎಲ್​ಐಸಿ ಸ್ಪಷ್ಟನೆ


ವಿವರವಾದ ಪರಿಶೀಲನೆಯ ನಂತರವೇ, ಹೂಡಿಕೆ ನಿರ್ಧಾರಗಳನ್ನು ಎಲ್ಐಸಿ ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ. ಮಂಡಳಿಯ ಅನುಮೋದಿತ ನೀತಿಗಳ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂತಹ ನಿರ್ಧಾರಗಳಲ್ಲಿ ಹಣಕಾಸು ಸೇವೆಗಳ ಇಲಾಖೆ ಅಥವಾ ಯಾವುದೇ ಇತರ ಸಂಸ್ಥೆಯು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಇಂಥ ವಿಚಾರಗಳಲ್ಲಿ ಎಲ್‌ಐಸಿ ಅತ್ಯುನ್ನತ ಮಾನದಂಡಗಳನ್ನು ಹೊಂದಿದೆ ಮತ್ತು ಪಾಲಿಸುತ್ತಿದೆ. ಎಲ್ಲಾ ಹೂಡಿಕೆ ನಿರ್ಧಾರಗಳನ್ನು ಅಸ್ತಿತ್ವದಲ್ಲಿರುವ ನೀತಿಗಳು, ಕಾಯಿದೆಗಳಲ್ಲಿನ ನಿಬಂಧನೆಗಳು ಮತ್ತು ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಸಾರವಾಗಿ ತೆಗೆದುಕೊಳ್ಳಲಾಗಿದೆ. ಎಲ್ಲಾ ಪಾಲುದಾರರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದ ಹಣಕಾಸು ಅಡಿಪಾಯ ಹಾಳು ಮಾಡುವ ಹುನ್ನಾರ: ಎಲ್​ಐಸಿ ಟೀಕೆ

‘ವಾಷಿಂಗ್ಟನ್ ಪೋಸ್ಟ್’ ವರದಿಯಲ್ಲಿ ಉಲ್ಲೇಖಿಸಲಾದ ಅಂಶವು ಎಲ್​ಐಸಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಪೂರ್ವಾಗ್ರಹ ಹರಡುವ ಸಂಚಿನಿಂದ ಮಾಡಲಾಗಿದೆ. ಎಲ್​ಐಸಿಯ ಖ್ಯಾತಿ, ವರ್ಚಸ್ಸು ಹಾಗೂ ಭಾರತದಲ್ಲಿನ ಬಲವಾದ ಹಣಕಾಸು ವಲಯದ ಅಡಿಪಾಯವನ್ನು ಹಾಳು ಮಾಡುವ ಹುನ್ನಾರದಿಂದ ಮಾಡಲಾಗಿದೆ ಎಂದು ತೋರುತ್ತಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಆರೋಪಿಸಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು

ಅದಾನಿ ಗ್ರೂಪ್ ಕೂಡ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಎಲ್‌ಐಸಿ ಹೂಡಿಕೆಗಳನ್ನು ನಿರ್ದೇಶಿಸುವಂಥ ಯಾವುದೇ ಯೋಜನೆಗಳಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಂಬಂಧದ ಆರೋಪಗಳು ಅನಗತ್ಯ ರಾಜಕೀಯ ಪ್ರತಿಪಾದನೆಗಳು ಮತ್ತು ಆಧಾರರಹಿತವಾಗಿವೆ ಎಂದು ಅದಾನಿ ಗ್ರೂಪ್ ಹೇಳಿದೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಅದಾನಿ ಗ್ರೂಪ್ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us