LIC IPO: ಎಲ್​ಐಸಿ ಐಪಿಒದಿಂದ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚ ಎಂದು ಎಚ್ಚರಿಸಿದ ಕಾರ್ಮಿಕ ಒಕ್ಕೂಟ

| Updated By: Srinivas Mata

Updated on: Sep 07, 2021 | 8:09 PM

ಭಾರತೀಯ ಜೀವ ವಿಮಾ ನಿಗಮದ ಐಪಿಒದ ಕಾರಣಕ್ಕೆ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚವಾಗುತ್ತದೆ ಎಂದು ಕಾರ್ಮಿಕ ಒಕ್ಕೂಟವು ಎಚ್ಚರಿಕೆ ನೀಡಿದೆ.

LIC IPO: ಎಲ್​ಐಸಿ ಐಪಿಒದಿಂದ ಉದ್ಯೋಗ ನಷ್ಟ, ಸಾಮಾಜಿಕ ವೆಚ್ಚ ಎಂದು ಎಚ್ಚರಿಸಿದ ಕಾರ್ಮಿಕ ಒಕ್ಕೂಟ
ಸಾಂದರ್ಭಿಕ ಚಿತ್ರ
Follow us on

ಭಾರತದ ಅತಿದೊಡ್ಡ ಸರ್ಕಾರ ಬೆಂಬಲಿತ ಜೀವ ವಿಮಾ ನಿಗಮದ (Life Insurance Corporation) ಮೆಗಾ ಆರಂಭಿಕ ಸಾರ್ವಜನಿಕ ಕೊಡುಗೆಯಿಂದ (IPO) ಉದ್ಯೋಗ ನಷ್ಟಕ್ಕೆ ಕಾರಣ ಆಗಬಹುದು ಮತ್ತು ಕಂಪೆನಿಯ ಸಾಮಾಜಿಕ ಮೂಲಸೌಕರ್ಯ ಖರ್ಚು ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಅದರ ಅತಿದೊಡ್ಡ ಕಾರ್ಮಿಕರ ಒಕ್ಕೂಟವು ತಿಳಿಸಿದೆ. ಜೀವ ವಿಮಾ ನಿಗಮವು “ಗ್ರಾಮೀಣ ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ವಿಮೆ ಒದಗಿಸಲು ರೂಪುಗೊಂಡಿದೆ,” ಎಂದು ಅಖಿಲ ಭಾರತ ಎಲ್ಐಸಿ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಮಂಗಳವಾರ ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಬಂಡವಾಳ ಹೆಚ್ಚು ಅಗತ್ಯ ಇರುವ ಮೂಲಸೌಕರ್ಯ ಯೋಜನೆಗಳಾದ ರಸ್ತೆಗಳು, ರೈಲ್ವೆ ಮತ್ತು ವಿದ್ಯುತ್‌ ಯೋಜನೆಗಳಿಗೆ ಆರು ದಶಕಗಳಿಗೂ ಹೆಚ್ಚು ಕಾಲ ಧನಸಹಾಯ ನೀಡುತ್ತಿರುವ ಕಂಪೆನಿಯು ಐಪಿಒ ನಂತರ “ಲಾಭ ಗರಿಷ್ಠಗೊಳಿಸುವ ಹೂಡಿಕೆಗಳ” ಮೇಲೆ ಗಮನ ಹರಿಸಬಹುದು ಎಂದು ಕುಮಾರ್ ಹೇಳಿದ್ದಾರೆ.

ಬಜೆಟ್ ಅಂತರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಲ್ಐಸಿಯಲ್ಲಿನ ಶೇ 10ರಷ್ಟು ಪಾಲುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಮಾರಾಟವು ಅತಿ ದೊಡ್ಡದಾಗಿದೆ. ಜೆಫರೀಸ್ ಇಂಡಿಯಾದ ವಿಶ್ಲೇಷಕರ ಪ್ರಕಾರ, ಈ ಮಾರಾಟದ ಮೂಲಕವಾಗಿ ಎಲ್​ಐಸಿ ಮೌಲ್ಯವು 261 ಬಿಲಿಯನ್​ ಅಮೆರಿಕನ್ ಡಾಲರ್ ಮೌಲ್ಯದ ಕಂಪೆನಿ ಆಗಲಿದ್ದು, ಸದ್ಯಕ್ಕೆ ದೇಶದ ಅತ್ಯಂತ ಮೌಲ್ಯಯುತ ಕಂಪೆನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್​ ಅನ್ನು ಮೀರಿಸಲಿದೆ.​

ಎಲ್‌ಐಸಿಯ ಸುಮಾರು 1,14,000 ಉದ್ಯೋಗಿಗಳಲ್ಲಿ ಸುಮಾರು 4,000 ಪ್ರತಿನಿಧಿಸುವ ಒಕ್ಕೂಟವು ಲಿಸ್ಟಿಂಗ್​ ಬಗ್ಗೆ ಪ್ರತಿಭಟಿಸಲು ಪ್ರಧಾನಿ ಮತ್ತು ಸಂಸದರಿಗೆ ಪತ್ರ ಬರೆದಿದೆ ಮತ್ತು ಷೇರು ಮಾರಾಟದ ಬಗ್ಗೆ ಕಾಳಜಿ ಮೂಡಿಸಲು ಪ್ರಚಾರವನ್ನು ಯೋಜಿಸುತ್ತಿದೆ ಎಂದು ಕುಮಾರ್ ಹೇಳಿದ್ದಾರೆ. “ರಾಷ್ಟ್ರೀಯ ಆಸ್ತಿಯನ್ನು ಮಾರಾಟ ಮಾಡುವುದು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ನೀತಿ ಎಂದು ನಾವು ನಂಬುತ್ತೇವೆ,” ಎಂದು ಅವರು ಹೇಳಿದ್ದಾರೆ. “ನೇಮಕಾತಿ ಕಡಿಮೆ ಆಗಿ, ಹೊರಗುತ್ತಿಗೆ ಆಗುತ್ತದೆ ಮತ್ತು ಉದ್ಯೋಗ ನಷ್ಟಗಳು ನಡೆಯುತ್ತವೆ.” 2022ರ ಜನವರಿ ಮತ್ತು ಮಾರ್ಚ್ ನಡುವೆ ಮಾರಾಟ ಮಾಡಲು ಸರ್ಕಾರ ಕಳೆದ ತಿಂಗಳು 10 ಬ್ಯಾಂಕ್​ಗ​ಳನ್ನು ಆಯ್ಕೆ ಮಾಡಿದೆ.

ಇದನ್ನೂ ಓದಿ: LIC Credit Card: ಎಲ್​ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್​ ಕಾರ್ಡ್​ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?

(LIC IPO Could Cause Job Loss Social Spending Trade Union Warns )