Job Cut: ಚೀನಾದಲ್ಲಿ ಕಠಿಣ ವಾತಾವರಣ, ಪೂರ್ಣ ಕಾಲ್ತೆಗೆದ ಲಿಂಕ್ಡ್ಇನ್; ಜಾಗತಿಕವಾಗಿ 716 ಮಂದಿ ಲೇ ಆಫ್
LinkedIn Layoffs: 716 ಮಂದಿಯನ್ನು ಲೇ ಆಫ್ ಮಾಡುವುದಾಗಿ ಲಿಂಕ್ಡ್ಇನ್ ಘೋಷಿಸಿದೆ. ಇದರೊಂದಿಗೆ ಲಿಂಕ್ಡ್ಇನ್ನಲ್ಲಿ ಕೆಲಸ ಮಾಡುತ್ತಿರುವ 20,000 ಉದ್ಯೋಗಿಗಳಲ್ಲಿ ಬಹುತೇಕ ಎಲ್ಲರಿಗೂ ಅಭದ್ರತೆಯ ಭಾವನೆ ಆವರಿಸಿದೆ. ಚೀನಾದಲ್ಲಿದ್ದ ತನ್ನ ಇನ್ಕರಿಯರ್ಸ್ ಆ್ಯಪ್ ಅನ್ನೂ ಲಿಂಕ್ಡ್ಇನ್ ಪೂರ್ಣವಾಗಿ ನಿಲ್ಲಿಸಲಿದೆ.
ನವದೆಹಲಿ: ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Layoffs) ಕರ್ಮಕಾಂಡ ನಿಲ್ಲುತ್ತಿಲ್ಲ. ಇತ್ತೀಚೆಗೆ 10,000ಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಮೈಕ್ರೋಸಾಫ್ಟ್ ಇದೀಗ ಅದರ ಅಂಗಸಂಸ್ಥೆ ಲಿಂಕ್ಡ್ಇನ್ನ (LinkedIn) ಉದ್ಯೋಗಿಗಳಿಗೆ ಜಾಬ್ ಕಟ್ ಭೀತಿ ಆವರಿಸಿದೆ. 716 ಮಂದಿಯನ್ನು ಲೇ ಆಫ್ ಮಾಡುವುದಾಗಿ ಲಿಂಕ್ಡ್ಇನ್ ಘೋಷಿಸಿದೆ. ಇದರೊಂದಿಗೆ ಲಿಂಕ್ಡ್ಇನ್ನಲ್ಲಿ ಕೆಲಸ ಮಾಡುತ್ತಿರುವ 20,000 ಉದ್ಯೋಗಿಗಳಲ್ಲಿ ಬಹುತೇಕ ಎಲ್ಲರಿಗೂ ಅಭದ್ರತೆಯ ಭಾವನೆ ಆವರಿಸಿದೆ. ವರದಿಗಳ ಪ್ರಕಾರ ಕೆಲಸ ಕಳೆದುಕೊಳ್ಳಲಿರುವ ಹೆಚ್ಚಿನ ಉದ್ಯೋಗಿಗಳು ಲಿಂಕ್ಡ್ಇನ್ನ ಸೇಲ್ಸ್, ಅಪರೆಷನ್ಸ್ ಮತ್ತು ಸಪೋರ್ಟ್ ಟೀಮ್ಗಳಲ್ಲಿ ಕೆಲಸ ಮಾಡುವವರು ಎನ್ನಲಾಗಿದೆ.
ಲಿಂಕ್ಡ್ಇನ್ನಲ್ಲಿ ಜಾಬ್ ಕಟ್ ನಿರ್ಧಾರಕ್ಕೆ ಏನು ಕಾರಣ?
ಮೈಕ್ರೋಸಾಫ್ಟ್ ಮಾಲಕತ್ವದ ಲಿಂಕ್ಡ್ಇನ್ ಕಳೆದ ವರ್ಷ ಒಳ್ಳೆಯ ಲಾಭ ಹೆಚ್ಚಳ ಕಂಡಿದೆ. ಆದರೆ, ಭವಿಷ್ಯತ್ಕಾಲದ ಆಪತ್ತುಗಳನ್ನು ಎದುರಿಸುವ ಸಲುವಾಗಿ ಉದ್ಯೋಗಕಡಿತದ ನಿರ್ಧಾರಕ್ಕೆ ಲಿಂಕ್ಡ್ಇನ್ ಬಂದಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಕಂಪನಿಯ ರೂಪುರೇಖೆಯನ್ನು ಬದಲಿಸಬೇಕಾಗುತ್ತದೆ. ಇದರ ಭಾಗವಾಗಿ ಜಾಬ್ ಕಟ್ ಮಾಡಲಾಗುತ್ತಿದೆ ಎಂದು ಲಿಂಕ್ಡ್ ಇನ್ ಸಿಇಒ ರಯಾನ್ ರೋಸ್ಲಾನ್ಸ್ಕಿ ಹೇಳಿದ್ದಾಗಿ ಬಿಬಿಸಿ ವರದಿಯೊಂದು ಹೇಳಿದೆ.
ಲಿಂಕ್ಡ್ಇನ್ನಲ್ಲಿ 250 ಹೊಸ ನೇಮಕಾತಿ
716 ಮಂದಿಯನ್ನು ಲೇ ಆಫ್ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ ಲಿಂಕ್ಡ್ಇನ್ 250 ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಈಗ ಕೆಲಸ ಕಳೆದುಕೊಳ್ಳಲಿರುವ 716 ಮಂದಿ ಈ ಹೊಸ 250 ಉದ್ಯೋಗಗಳಿಗೆ ಪ್ರಯತ್ನಿಸಬಹುದು. ಮುಂಬರುವ ಮಾರುಕಟ್ಟೆ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ 250 ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆಯಂತೆ.
ಚೀನಾದಲ್ಲಿ ಲಿಂಕ್ಡ್ಇನ್ನ ಸ್ಥಳೀಯ ಆ್ಯಪ್ ಪರ್ಯವಸಾನ
ಲಿಂಕ್ಡ್ಇನ್ ಸಂಸ್ಥೆ ಚೀನಾದಲ್ಲಿ ಇನ್ಕರಿಯರ್ಸ್ (InCareers) ಎಂಬ ಆ್ಯಪ್ ಹೊಂದಿದೆ. ಇದು ಅಲ್ಲಿಯ ಸ್ಥಳೀಯ ಉದ್ಯೋಗಗಳ ಮಾಹಿತಿ ಮತ್ತು ಸೇವೆ ಹೊಂದಿರುವ ಅಪ್ಲಿಕೇಶನ್. ಚೀನಾದ ಕಠಿಣ ವಾತಾವರಣದ ಕಾರಣದಿಂದ ಇನ್ಕರಿಯರ್ಸ್ ಸೇವೆ ಬಹುತೇಕ ನಿಂತುಹೋಗಿದೆ. ಆಗಸ್ಟ್ 9ರೊಳಗೆ ಚೀನಾದಿಂದ ಇನ್ಕರಿಯರ್ಸ್ ಪೂರ್ಣವಾಗಿ ಹೊರಬೀಳಲಿದೆ. 2021ರಲ್ಲೇ ಇನ್ಕರಿಯರ್ಸ್ ಚೀನೀ ಮಾರುಕಟ್ಟೆ ಬಿಟ್ಟಾಗಿತ್ತು. ಈಗ ಚೀನಾದಲ್ಲಿರುವ ಕಂಪನಿಗಳಿಗೆ ಹೊರದೇಶಗಳಲ್ಲಿ ಜನರನ್ನು ನೇಮಿಸಿಕೊಳ್ಳುವ ಮತ್ತು ತರಬೇತಿ ಕೊಡುವ ಸೇವೆಯನ್ನು ಮಾತ್ರ ಲಿಂಕ್ಡ್ಇನ್ ಮುಂದುವರಿಸಲಿದೆ. ಅದು ಬಿಟ್ಟರೆ ಆಗಸ್ಟ್ 9ರೊಳಗೆ ಚೀನಾದಲ್ಲಿ ಲಿಂಕ್ಡ್ಇನ್ ಉಪಸ್ಥಿಗೆ ಪೂರ್ತಿ ಅಂತ್ಯವಾಗಲಿದೆ.
ಇದನ್ನೂ ಓದಿ: Cognizant Layoffs: ಆಗ ಅಕ್ಸೆಂಚರ್ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್ನಲ್ಲಿ 3,500 ಉದ್ಯೋಗಿಗಳ ಲೇ ಆಫ್
ಪಾಶ್ಚಿಮಾತ್ಯ ದೇಶಗಳ ಸೋಷಿಯಲ್ ಮೀಡಿಯಾಗಳ ಪೈಕಿ ಲಿಂಕ್ಡ್ಇನ್ ಮಾತ್ರವೇ ಚೀನಾದಲ್ಲಿ ಅಸ್ತಿತ್ವ ಹೊಂದಿದ್ದು. ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಪಶ್ಚಿಮದ ಯಾವ ಸಾಮಾಜಿಕ ಜಾಲತಾಣಗಳು ಚೀನಾದಲ್ಲಿಲ್ಲ. ಈಗ ಲಿಂಕ್ಡ್ಇನ್ ಕೂಡ ಅಲ್ಲಿಂದ ಕಾಲ್ತೆಗೆದಿದೆ.