
ನವದೆಹಲಿ, ಜೂನ್ 07: ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಬೆಲೆ ಏರಿಕೆಯ ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಬಂದೊದಗಿದ್ದು, ಗೃಹಬಳಕೆಯ ಎಲ್ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್ಗೆ 29 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ. ಈ ಹೊಸ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಜೂನ್ 7 ರಿಂದಲೇ ಜಾರಿಗೆ ಬಂದಿವೆ ಎಂದು ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ (PTI) ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದಾಗಿ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.
ಇದಕ್ಕೂ ಮುನ್ನ, ಮಾರ್ಚ್ 7 ರಂದು ಪ್ರತಿ ಸಿಲಿಂಡರ್ ಬೆಲೆಯನ್ನು 60 ರೂ. ಹೆಚ್ಚಿಸಲಾಗಿತ್ತು. ಪ್ರಸ್ತುತ ಮಾಡಲಾದ ದರ ಏರಿಕೆಯು ತೈಲ ಕಂಪನಿಗಳಿಗೆ ದೇಶೀಯ ಎಲ್ಪಿಜಿ ಮಾರಾಟದಲ್ಲಿ ಆಗುತ್ತಿರುವ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.ಈ ದರ ಪರಿಷ್ಕರಣೆಯು ದೇಶಾದ್ಯಂತ ಅನ್ವಯವಾಗಲಿದ್ದರೂ, ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ವ್ಯತ್ಯಾಸದಿಂದಾಗಿ ಪ್ರತಿ ನಗರದಲ್ಲೂ ಸಿಲಿಂಡರ್ನ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿರಲಿದೆ.
ಗುರುವಾರದಂದು ನಡೆದ ಅಂತರ-ಸಚಿವಾಲಯದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆಮದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಎಲ್ಪಿಜಿ ಲಭ್ಯತೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ Commercial LPG cylinder Price Hike: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ
ಗೃಹಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ಗಳ ಮೇಲಿನ ಅಂಡರ್-ರಿಕವರಿ (ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟದ ಕೊರತೆ ಭರ್ತಿ ವೆಚ್ಚ) ಕುರಿತು ಹೇಳುವುದಾದರೆ, ಇದು ಇಂದಿಗೂ ಪ್ರತಿ ಸಿಲಿಂಡರ್ಗೆ ಸುಮಾರು 700 ರೂಪಾಯಿಗಳ ಆಸುಪಾಸಿನಲ್ಲೇ ಇದೆ ಎಂದು ಶರ್ಮಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:33 am, Sun, 7 June 26