
ನವದೆಹಲಿ, ನವೆಂಬರ್ 25: ಈ ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳಾಗಿರುವ ಡಿಸೆಂಬರ್ನಲ್ಲಿ ಕೆಲ ಮಹತ್ವದ ಹಣಕಾಸು ಕ್ರಮಗಳು ಜಾರಿಗೆ ಬರಲಿವೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟು ಶುಲ್ಕ ಬದಲಾವಣೆ, ಸೆಬಿ ಕಮಾಡಿಟಿ ಮಾರ್ಜಿನ್ ನಿಯಮ, ಅನಿವಾಸಿ ಹೂಡಿಕೆದಾರರಿಗೆ ಡಿಜಿಟಲ್ ಕೆವೈಸಿ, ಆಧಾರ್ ಇಮೇಲ್ ಅಪ್‌ಡೇಟ್ ಶುಲ್ಕ ವಿನಾಯಿತಿ ಮತ್ತು ಆರ್‌ಬಿಐ ಹಣಕಾಸು ನೀತಿ ಸಭೆ ಸೇರಿದಂತೆ ಹಲವು ಪ್ರಮುಖ ಹಣಕಾಸು ಬೆಳವಣಿಗೆಗಳು ಜಾರಿಗೆ ಬರಲಿವೆ.
2026ರ ಡಿಸೆಂಬರ್ 1 ರಿಂದ ಎಸ್‌ಬಿಐ ಕಾರ್ಡ್ ಬಳಕೆದಾರರು ಕೆಲವು ಹೆಚ್ಚಿನ ಮೌಲ್ಯದ ಸಾರಿಗೆ ಮತ್ತು ಇಂಧನ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
30,000 ರೂ ಮೀರಿದ ಪ್ರತಿ ಅರ್ಹ ಸಾರಿಗೆ ವಹಿವಾಟಿಗೆ ಶೇ. 1ರಷ್ಟು ಶುಲ್ಕ ಅನ್ವಯವಾಗಲಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಭಾಗಕ್ಕಲ್ಲದೆ ಸಂಪೂರ್ಣ ವಹಿವಾಟಿನ ಮೊತ್ತದ ಮೇಲೆ ಇದನ್ನು ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, 40,000 ರೂ ಸಾರಿಗೆ ಪಾವತಿಗೆ ತೆರಿಗೆ ಹೊರತುಪಡಿಸಿ 400 ರೂ ಶುಲ್ಕ ಹಾಕಲಾಗುತ್ತದೆ.
ಬಿಲ್ಲಿಂಗ್ ಸೈಕಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಅರ್ಹ ಇಂಧನ ವಹಿವಾಟುಗಳ ಒಟ್ಟು ಮೊತ್ತ 50,000 ರೂ ಮೀರಿದರೆ, ಆ ಅವಧಿಯ ಸಂಪೂರ್ಣ ಇಂಧನ ಖರ್ಚಿನ ಮೇಲೆ ಶೇ. 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ನಿಗದಿತ ಮರ್ಚಂಟ್ ಕೆಟಗರಿ ಕೋಡ್‌ಗಳಿಗೆ (MCC) ಇದು ಅನ್ವಯವಾಗಲಿದ್ದು, ಹೆಚ್ಚಿನ ಮೊತ್ತದ ವಹಿವಾಟಿಗೆ ಮುನ್ನ ಎಸ್‌ಬಿಐ ಕಾರ್ಡ್ ವೆಬ್‌ಸೈಟ್‌ನಲ್ಲಿನ ನಿಯಮಗಳನ್ನು ಪರಿಶೀಲಿಸುವುದು ಸೂಕ್ತ.
ಇದನ್ನೂ ಓದಿ: ಜೆನ್ಸೆನ್ ಹುವಾಂಗ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದು, ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಮಹತ್ವದ ನಿರ್ಧಾರ: ಉದಯ್ ಕೋಟಕ್
ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿಯು (MPC) ಡಿಸೆಂಬರ್ 2ರಿಂದ 4 ರವರೆಗೆ ಸಭೆ ಸೇರಿ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದು, ಮಾನದಂಡ ಬಡ್ಡಿದರಗಳಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲಿದೆ.
ಅಕ್ಟೋಬರ್ನಲ್ಲಿನ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿ ಶೇ. 5.50ಕ್ಕೆ ನಿಗದಿಪಡಿಸಲಾಗಿತ್ತು. ಈ ಬಾರಿಯೂ ರೆಪೋ ದರ ಏರಿದರೆ ಅಚ್ಚರಿ ಇಲ್ಲ. ಹಣದುಬ್ಬರ ದರವು ಶೇ. 6 ಅನ್ನು ದಾಟಿರುವುದು, ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿಸಿರುವುದು, ಭಾರತದಲ್ಲಿ ರೆಪೋ ದರ ಏರಿಕೆಗೆ ಅನುವು ಮಾಡಿಕೊಡಬಹುದು. ಇದರಿಂದ ಡೆಪಾಸಿಟ್, ಸಾಲಗಳಿಗೆ ಬಡ್ಡಿ ದರ ಹೆಚ್ಚುವಂತೆ ಮಾಡಬಹುದು.
ನವೆಂಬರ್ 17ರ ಸೆಬಿ ಸುತ್ತೋಲೆಯಂತೆ ಡಿಸೆಂಬರ್ 1ರಿಂದ ಕೃಷಿ ಮತ್ತು ಕೃಷಿಯೇತರ ಕಮಾಡಿಟಿ ಡೆರಿವೇಟಿವ್ಸ್‌ಗಳಿಗೆ ಪರಿಷ್ಕೃತ ಆರಂಭಿಕ ಮಾರ್ಜಿನ್ ನಿಯಮಗಳು ಜಾರಿಗೆ ಬರಲಿವೆ.
ಸರಕುಗಳ ಏರಿಳಿತದ (volatility) ವರ್ಗಕ್ಕೆ ಅನುಗುಣವಾಗಿ ಕನಿಷ್ಠ ಆರಂಭಿಕ ಮಾರ್ಜಿನ್ ನಿಗದಿಪಡಿಸಲಾಗಿದ್ದು, ಕಡಿಮೆ ಏರಿಳಿತದ ವರ್ಗಕ್ಕೆ ಶೇ. 6, ಮಧ್ಯಮ ಏರಿಳಿತಕ್ಕೆ ಶೇ. 8 ಮತ್ತು ಹೆಚ್ಚಿನ ಏರಿಳಿತದ ವರ್ಗಕ್ಕೆ ಶೇ. 10ರಷ್ಟು ಕನಿಷ್ಠ ಮಾರ್ಜಿನ್ ಅನ್ವಯವಾಗುತ್ತದೆ. ಕನಿಷ್ಠ ಮಾರ್ಜಿನ್ ಪಿರಿಯಡ್ ಆಫ್ ರಿಸ್ಕ್ (MPOR) ಕಡಿಮೆ ಮತ್ತು ಮಧ್ಯಮ ಏರಿಳಿತದ ಸರಕುಗಳಿಗೆ ಎರಡು ದಿನ ಹಾಗೂ ಹೆಚ್ಚಿನ ಏರಿಳಿತದ ಸರಕುಗಳಿಗೆ ಮೂರು ದಿನಗಳಾಗಿರುತ್ತದೆ.
ಡಿಸೆಂಬರ್ 3 ರಿಂದ ಅರ್ಹ ವೈಯಕ್ತಿಕ ಅನಿವಾಸಿ ಹೂಡಿಕೆದಾರರು (PROIs — ಎನ್‌ಆರ್‌ಐ, ಒಸಿಐ ಕಾರ್ಡ್‌ದಾರರು ಮತ್ತು ವಿದೇಶಿ ಪ್ರಜೆಗಳು) ಸೆಬಿ ನೋಂದಾಯಿತ ಮಧ್ಯವರ್ತಿಗಳೊಂದಿಗೆ ದೂರದಿಂದಲೇ ಡಿಜಿಟಲ್ ಕೆವೈಸಿ (KYC) ಪೂರ್ಣಗೊಳಿಸಬಹುದು.
ಡಿಜಿಟಲ್ ಕೆವೈಸಿ ವೇಳೆ ವ್ಯಕ್ತಿಯು ಭಾರತದಲ್ಲೇ ದೈಹಿಕವಾಗಿ ಹಾಜರಿರಬೇಕು ಎಂಬ ಹಿಂದಿನ ನಿಯಮವನ್ನು ತೆಗೆದುಹಾಕಲಾಗಿದ್ದು, ನಿಗದಿತ ಪರಿಶೀಲನೆ ಮತ್ತು ಅರ್ಹತಾ ಷರತ್ತುಗಳಿಗೆ ಒಳಪಟ್ಟು ಈ ಸೌಲಭ್ಯ ದೊರೆಯಲಿದೆ.
ಇದನ್ನೂ ಓದಿ: ಅಕ್ಟೋಬರ್‌ನಲ್ಲಿ ಎಂಜಿನಿಯರಿಂಗ್ ರಫ್ತು ಶೇ.36 ಏರಿಕೆ: 12.74 ಶತಕೋಟಿ ಡಾಲರ್ ತಲುಪಿದ ರಫ್ತು ಮೌಲ್ಯ
ಪಿಂಚಣಿ ಪಾವತಿಯಲ್ಲಿ ವ್ಯತ್ಯಯ ಅಥವಾ ವಿಳಂಬ ತಪ್ಪಿಸಲು ಪಿಂಚಣಿದಾರರು ನವೆಂಬರ್ 30ರೊಳಗೆ ತಮ್ಮ ವಾರ್ಷಿಕ ಜೀವನ್ ಪ್ರಮಾಣ್ / ಜೀವನ ಪ್ರಮಾಣಪತ್ರವನ್ನು (Life Certificate) ಸಲ್ಲಿಸಬೇಕು. ಇದು ಡಿಸೆಂಬರ್ 1ರ ಹೊಸ ನಿಯಮವಲ್ಲದಿದ್ದರೂ, ಡಿಸೆಂಬರ್ ನಂತರದ ಪಿಂಚಣಿ ವಿತರಣೆಗೆ ಅತ್ಯಗತ್ಯವಾದ ನಿಯಮವಾಗಿದೆ.
ಯುಐಡಿಎಐ (UIDAI) ತನ್ನ ಅಧಿಕೃತ ಆಧಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇಮೇಲ್ ವಿಳಾಸ ಸೇರಿಸಲು ಅಥವಾ ನವೀಕರಿಸಲು ವಿಧಿಸುತ್ತಿದ್ದ 75 ರೂ ಶುಲ್ಕಕ್ಕೆ ನೀಡಿದ ವಿನಾಯಿತಿಯು ಡಿಸೆಂಬರ್ 31 ರವರೆಗೆ ಉಚಿತವಾಗಿ ಲಭ್ಯವಿರಲಿದೆ. ಈ ವಿನಾಯಿತಿಯು ಮೊಬೈಲ್ ಆ್ಯಪ್ ಮೂಲಕದ ಇಮೇಲ್ ನವೀಕರಣಕ್ಕೆ ಮಾತ್ರ ಸೀಮಿತವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ