ನವದೆಹಲಿ: ದೇಶದ 2022ರ ಜಿಡಿಪಿ ಬೆಳವಣಿಗೆ ದರ (GDP growth) ಅಂದಾಜನ್ನು ಮೂಡೀಸ್ (Moody’s) ಸಂಸ್ಥೆಯು ಶೇಕಡಾ 7.7ರಿಂದ 7ಕ್ಕೆ ಇಳಿಕೆ ಮಾಡಿದೆ. ಜಾಗತಿಕ ಆರ್ಥಿಕತೆಯು ಕುಂಠಿತಗೊಂಡಿರುವುದು, ದೇಶೀಯ ಬಡ್ಡಿ ದರದಲ್ಲಿ ಹೆಚ್ಚಳವು ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ. ಮೂಡೀಸ್ ಹೂಡಿಕೆದಾರರು ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜಿನಲ್ಲಿ ಕಡಿತ ಮಾಡಿರುವುದು ಇದು ಎರಡನೇ ಬಾರಿಯಾಗಿದೆ. ಸೆಪ್ಟೆಂಬರ್ನಲ್ಲಿ, ಜಿಡಿಪಿ ಬೆಳವಣಿಗೆ ದರ ಅಂದಾಜು ಶೇಕಡಾ 8.8ರಿಂದ 7.7ಕ್ಕೆ ಕುಸಿದಿದೆ ಎಂದು ಮೂಡೀಸ್ ಹೇಳಿತ್ತು.
ಹಣದುಬ್ಬರ ಏರಿಕೆ, ಬಡ್ಡಿ ದರ ಹೆಚ್ಚಳ ಕಾರಣ
ಭಾರತದಲ್ಲಿ 2022ರ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 7ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಇದು ಶೇಕಡಾ 7.7ರಷ್ಟು ಇರಬಹುದು ಎಂದು ಅಂದಾಜಿಸಲಾಗಿತ್ತು. ಹೆಚ್ಚಿದ ಹಣದುಬ್ಬರ, ಅತಿಯಾದ ಬಡ್ಡಿ ದರ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆ ದರ ಕುಠಿತವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಿದ್ದೇವೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಾವು ಈ ಹಿಂದೆ ಅಂದಾಜಿಸಿದಷ್ಟು ಜಿಡಿಪಿ ಬೆಳವಣಿಗೆ ಹೊಂದುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ‘ಗ್ಲೋಬಲ್ ಮ್ಯಾಕ್ರೋ ಔಟ್ಲುಕ್ 2023-24’ ವರದಿಯಲ್ಲಿ ಮೂಡೀಸ್ ತಿಳಿಸಿದೆ.
2023ರಲ್ಲಿ ಶೇಕಡಾ 4.8, 2024ರಲ್ಲಿ ಶೇಕಡಾ 6.4ರ ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿದೆ ಎಂದು ಮೂಡೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕುಸಿತದ ಅಂಚಿನಲ್ಲಿ ಜಾಗತಿಕ ಆರ್ಥಿಕತೆ
ಜಾಗತಿಕ ಆರ್ಥಿಕತೆಯು ಕುಸಿತದ ಅಂಚಿನಲ್ಲಿದೆ. ಅನಿಶ್ಚಿತತೆ ಉನ್ನತ ಮಟ್ಟದಲ್ಲಿದೆ. ಹಣದುಬ್ಬರ ಏರಿಕೆ, ಹಣಕಾಸು ನೀತಿಗಳಲ್ಲಿ ಬಿಗಿ ಹಿಡಿತ, ವಿತ್ತೀಯ ಸವಾಲುಗಳು, ರಾಜಕೀಯ ಬದಲಾವಣೆಗಳು ಮತ್ತು ಹಣಕಾಸು ಮಾರುಕಟ್ಟೆಯ ಚಂಚಲತೆ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತಿದೆ ಎಂದು ವರದಿ ಹೇಳಿದೆ.
2023 ಹಾಗೂ 2024ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಲಿದೆ. ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್ಗಳು ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ 2024ರಿಂದ ಆರ್ಥಿಕತೆಯು ಸ್ಥಿರವಾಗುತ್ತಾ ಸಾಗಬಹುದು ಎಂದು ಮೂಡೀಸ್ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ