Mukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ

|

Updated on: Apr 19, 2023 | 4:08 PM

RIL Chairman's Birthday: ಮುಕೇಶ್ ಅಂಬಾನಿ ಜನ್ಮದಿನ: ಯೆಮೆನ್ ದೇಶದ ಏಡನ್ ನಗರದಲ್ಲಿ ಹುಟ್ಟಿದ ಮುಕೇಶ್ ಅಂಬಾನಿ ಇದೀಗ ವಿಶ್ವದ 13ನೇ ಅತೀ ಶ್ರೀಮಂತ ವ್ಯಕ್ತಿ ಎನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ರೋಚಕ ಪ್ರಯಾಣದ ಪ್ರಮುಖ ಮಾಹಿತಿ ಇಲ್ಲಿದೆ.

Mukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ
ಮುಕೇಶ್ ಅಂಬಾನಿ
Follow us on

Mukesh Ambani Birthday Special April 19th:  ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ (Mukesh Ambani) ಹೆಸರು ಈಗ ಯಾರು ತಾನೆ ಕೇಳಿಲ್ಲ? ರಿಲಾಯನ್ಸ್ ಜಿಯೋ ಮೂಲಕ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಮತ್ತು ಡಿಜಿಟಲ್ ಕ್ರಾಂತಿಗೆ ಪುಷ್ಟಿ ಕೊಟ್ಟಿದ್ದ ಮುಕೇಶ್ ಅಂಬಾನಿ ಇದೀಗ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಅಂಬಾನಿ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಇಂದು ಏಪ್ರಿಲ್ 19, ಮುಕೇಶ್ ಅಂಬಾನಿಯ ಜನ್ಮದಿನ. 1957 ಏಪ್ರಿಲ್ 19ರಂದು ಜನಿಸಿದ ಮುಕೇಶ್ ಅಂಬಾನಿ ಹುಟ್ಟುತ್ತಲೇ ಶ್ರೀಮಂತಿಕೆ ಪಡೆದವರಲ್ಲ. ಇವರ ಮತ್ತು ಕುಟುಂಬದ ಶ್ರಮ ಇಂದು ಮುಕೇಶ್ ಅಂಬಾನಿಗೆ ಸಕಲ ಸಂಪತ್ತು ಒಲಿದುಬಂದಿದೆ. ಅಪ್ಪ ಏಡನ್​ನ ಗ್ಯಾಸ್ ಸ್ಟೇಷನ್​ನಲ್ಲಿ ಕೆಲಸ ಮಾಡುವ ಕಾಲಘಟ್ಟದಲ್ಲಿ ಹುಟ್ಟಿದ ಮುಕೇಶ್ ಅಂಬಾನಿ ಇಂದು ಮುಗಿಲೆತ್ತರಕ್ಕೆ ಬೆಳೆದಿದ್ದಾರೆ. ಅವರ ಜೀವನದ ಮಹತ್ವದ ಮೈಲಿಗಲ್ಲು ಮತ್ತು ಮುಖ್ಯವಿಚಾರಗಳು ಇಲ್ಲಿವೆ:

ಮುಕೇಶ್ ಅಂಬಾನಿ ಹುಟ್ಟಿದ ಸ್ಥಳ ಬಹಳ ವಿಶೇಷವಾದುದು:

ಮುಕೇಶ್ ಅಂಬಾನಿ ಹುಟ್ಟಿದ್ದು ಅರಬ್ ನಾಡಿಗೆ ಸೇರಿದ ಯೆಮೆನ್ ದೇಶದ ಏಡನ್ ನಗರದಲ್ಲಿ. ಈ ನಗರ ಆಫ್ರಿಕಾ ಖಂಡಕ್ಕೆ ಬಹಳ ಸಮೀಪ ಬರುತ್ತದೆ. ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯವಹಾರಕ್ಕೆ ಸಮುದ್ರ ಮಾರ್ಗ ಇದೇ ಏಡನ್ ಗಲ್ಫ್ ಮೂಲಕ ಸಾಗುತ್ತದೆ.

ಏಡನ್ ನಗರದ ಇತಿಹಾಸ ಮನುಷ್ಯ ಸಂತತಿಯ ಆರಂಭದಿಂದಲೇ ಶುರುವಾಗುತ್ತದೆ ಎಂಬ ನಂಬಿಕೆ ಇದೆ. ಕ್ರೈಸ್ತರು ಮತ್ತು ಮುಸ್ಲಿಮರ ಪ್ರಕಾರ ಮೊದಲ ಆದಿ ಮಾನವರೆನ್ನಲಾದ ಆಡಂ ಮತ್ತು ಈವ್ ಅವರ ಇಬ್ಬರು ಮಕ್ಕಳಾದ ಕೇನ್ ಮತ್ತು ಆಬೆಲ್ ಅವರನ್ನು ಇದೇ ಏಡನ್​ನಲ್ಲಿ ಮಣ್ಣು ಮಾಡಲಾಗಿದೆಯಂತೆ. ಹೀಗಾಗಿ, ಏಡನ್ ನಗರ ಮನುಷ್ಯನ ಇತಿಹಾಸದಲ್ಲಿ ಮುಖ್ಯಸ್ಥಾನ ಪಡೆದುಕೊಳ್ಳುತ್ತದೆ. ಮುಕೇಶ್ ಅಂಬಾನಿ ಹುಟ್ಟಿದ್ದು ಇದೇ ನಗರದಲ್ಲಿ ಎಂಬುದು ವಿಶೇಷ.

ಇದನ್ನೂ ಓದಿHurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್​ಗಳೂ ಭಾರತದಲ್ಲಿ ಹೆಚ್ಚಿವೆ

ಗ್ಯಾಸ್ ಸ್ಟೇಷನ್ ಕಾರ್ಮಿಕನ ಮಗ ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ ಅವರ ತಂದೆ ಧೀರೂಭಾಯ್ ಅಂಬಾನಿ ಎಂಬುದು ಬಹಳ ಮಂದಿಗೆ ಗೊತ್ತಿರುವ ಸಂಗತಿಯೇ. ಧೀರೂಭಾಯ್ ಅಂಬಾನಿ ಎಂಬತ್ತು, ತೊಂಬತ್ತರ ದಶಕದಲ್ಲಿ ದೇಶದ ದೊಡ್ಡ ಉದ್ಯಮಿ ಎನಿಸಿದ್ದವರು. ಹೀಗಾಗಿ, ಮುಕೇಶ್ ಅಂಬಾನಿಯನ್ನು ಹುಟ್ಟಾ ಶ್ರೀಮಂತ ಎಂದು ಹಲವರು ಎಣಿಸುತ್ತಾರೆ. ಆದರೆ, ವಾಸ್ತವದಲ್ಲಿ ಗುಜರಾತ್​ನವರಾದ ಧೀರೂಭಾಯ್ ಅಂಬಾನಿ ಕೆಲಸಕ್ಕೆಂದು ಯೆಮೆನ್ ದೇಶದ ಏಡನ್ ನಗರಕ್ಕೆ ಹೋಗುತ್ತಾರೆ. ಅಲ್ಲಿ ಒಂದು ಸಂದರ್ಭದಲ್ಲಿ ಅವರು ಪೆಟ್ರೋಲ್ ಬಂಕ್​ನಲ್ಲೂ ಕೆಲಸ ಮಾಡುತ್ತಾರೆ. ಆಗ ಹುಟ್ಟಿದ್ದೇ ಮುಕೇಶ್ ಅಂಬಾನಿ.

ಅಂಬಾನಿ ಹುಟ್ಟಿದ ಒಂದು ವರ್ಷದ ಬಳಿಕ ಧೀರೂಭಾಯ್ ಅಂಬಾನಿ ಏಡನ್ ನಗರದಿಂದ ವಾಪಸ್ ಭಾರತಕ್ಕೆ ಬಂದು ಜವಳಿ ಬ್ಯುಸಿನೆಸ್ ಆರಂಭಿಸುತ್ತಾರೆ. ಹಂತ ಹಂತವಾಗಿ ಬೆಳೆದು ರಿಲಾಯನ್ಸ್ ಇಂಡಸ್ಟ್ರೀಸ್ ಸ್ಥಾಪಿಸುತ್ತಾರೆ. ಆದರೆ, ಮುಕೇಶ್ ಅಂಬಾನಿ ಯೌವನಾವಸ್ಥೆಗೆ ಬಂದು ವ್ಯವಹಾರ ಆರಂಭಿಸುವ ಹೊತ್ತಿಗೆ ಅಪ್ಪನ ಬ್ಯುಸಿನೆಸ್ ಸಾಮ್ರಾಜ್ಯ ದೊಡ್ಡದಾಗಿತ್ತು ಎಂಬುದು ನಿಜ. ಆದರೆ, ಅಲ್ಲಿಯವರೆಗೂ ಅಂಬಾನಿ ಕುಟುಂಬ ವಾಸವಿದ್ದದ್ದು ಮುಂಬೈನ ಸಾಧಾರಣ ಮನೆಯಲ್ಲೇ.

ಅಪ್ಪನ ರಿಲಾಯನ್ಸ್ ಸಾಮ್ರಾಜ್ಯ ವಿಸ್ತರಿಸಿದವರು ಮುಕೇಶ್ ಅಂಬಾನಿ

ಮಕ್ಕಳು ಹುಟ್ಟುತ್ತಲೇ ಶ್ರೀಮಂತರಾದರೂ ಈ ಶ್ರೀಮಂತಿಕೆ ಕಾಪಾಡಿಕೊಳ್ಳಲು ಮತ್ತು ವೃದ್ಧಿಸಲು ಬುದ್ಧಿವಂತಿಕೆ ಬೇಕು. ಮುಕೇಶ್ ಅಂಬಾನಿ ಇದಕ್ಕೆ ನಿದರ್ಶನ. ಅಮೆರಿಕದ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಓದಿದ ಬಳಿಕ ಮುಕೇಶ್ ಅಂಬಾನಿ 1981ರಲ್ಲಿ ಭಾರತಕ್ಕೆ ವಾಪಸ್ ಬಂದು ಅಪ್ಪನ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು. ಸೀಮಿತವಾಗಿದ್ದ ಆರ್​ಐಎಲ್​ನ ವ್ಯವಹಾರವನ್ನು ಬೇರೆ ಬೇರೆ ಕ್ಷೇತ್ರಕ್ಕೆ ವಿಸ್ತರಿಸಲು ಮುಕೇಶ್ ಅಂಬಾನಿ ಪಾತ್ರ ಬಹಳ ಪ್ರಮುಖವಾದುದು. ಇನ್​ಫ್ರಾಸ್ಟ್ರಕ್ಚರ್, ಪೆಟ್ರೋಕೆಮಿಕಲ್ಸ್, ತೈಲ ಉತ್ಪಾದನೆ, ಪೆಟ್ರೋಲಿಯಂ ರಿಫೈನಿಂಗ್, ಪಾಲಿಯಸ್ಟರ್ ಫೈಬರ್ ಇತ್ಯಾದಿ ಕ್ಷೇತ್ರಗಳಿಗೆ ರಿಲಾಯನ್ಸ್ ಸಾಮ್ರಾಜ್ಯ ಬೆಳೆಯಿತು.

ಇದನ್ನೂ ಓದಿWindfall Tax: ದೇಶೀಯ ಕಚ್ಛಾ ತೈಲಕ್ಕೆ 6,400 ರೂ ವಿಂಡ್​ಫಾಲ್ ಟ್ಯಾಕ್ಸ್ ಹೇರಿಕೆ; ಡೀಸೆಲ್ ರಫ್ತು ಸುಂಕ ರದ್ದು; ಸರ್ಕಾರದ ಈ ಕ್ರಮದಿಂದ ಪ್ರಯೋಜನಗಳೇನು?

ಅಂಬಾನಿ ಅಣ್ಣ ತಮ್ಮಂದಿರ ವ್ಯಾಜ್ಯ; ಅನಿಲ್ ಫೇಲ್, ಮುಕೇಶ್ ಪಾಸ್

2002ರಲ್ಲಿ ಧೀರೂಭಾಯ್ ಅಂಬಾನಿ ನಿಧನರಾದಾಗ ರಿಲಾಯನ್ಸ್ ಸಂಸ್ಥೆಯನ್ನು ಮಕ್ಕಳಾದ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಜಂಟಿಯಾಗಿ ನಿಭಾಯಿಸತೊಡಗಿದರು. ಮುಕೇಶ್ ಅಂಬಾನಿ ರಿಲಾಯನ್ಸ್​ನ ಛೇರ್ಮನ್ ಮತ್ತು ಎಂಡಿ ಆದರು. ಅನಿಲ್ ಅಂಬಾನಿ ವೈಸ್ ಛೇರ್ಮನ್ ಮತ್ತು ಜಂಟಿ ಎಂಡಿ ಆದರು. ಆದರೆ, ಕಂಪನಿಯ ನಾಯಕತ್ವ ವಿಚಾರದಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬಂದು ಕೊನೆಗೆ ತಾಯಿ ಕೋಕಿಲಾಬೆನ್ ಅವರು ಇಬ್ಬರು ಮಕ್ಕಳಿಗೆ ವ್ಯವಹಾರಗಳನ್ನು ಪಾಲು ಮಾಡಬೇಕಾಯಿತು.

ಮುಕೇಶ್ ಅಂಬಾನಿಗೆ ಗ್ಯಾಸ್, ತೈಲ ಮತ್ತು ಪೆಟ್ರೋಕೆಮಿಕಲ್ ಯೂನಿಟ್​ಗಳು ಸಿಕ್ಕವು. ಅನಿಲ್ ಅಂಬಾನಿಗೆ ಟೆಲಿಕಮ್ಯೂನಿಕೇಶನ್ಸ್, ವಿದ್ಯುತ್ ಉತ್ಪಾದನೆ, ಹಣಕಾಸು ಸೇವೆಗಳ ವ್ಯವಹಾರ ಸಿಕ್ಕವು. ಮುಕೇಶ್ ಅಂಬಾನಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋದರು. ಅನಿಲ್ ಅಂಬಾನಿ ನಷ್ಟ ಮಾಡಿಕೊಳ್ಳುತ್ತಾ ಹೋದರು. ಒಂದು ಹಂತದಲ್ಲಿ ಅನಿಲ್ ಅಂಬಾನಿಯನ್ನು ಹಣಕಾಸು ಬಿಕ್ಕಟ್ಟಿನಿಂದ ರಕ್ಷಿಸಲು ಮುಕೇಶ್ ಅವರೇ ಮುಂದಾಗಬೇಕಾಯಿತು.

ಮುಕೇಶ್ ಅಂಬಾನಿ ಆಸ್ತಿ, ಐಶ್ವರ್ಯ, ಸಂಪತ್ತು ಅಬ್ಬಬ್ಬಾ…!

ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ ಸದ್ಯ 83.4 ಬಿಲಿಯನ್ ಡಾಲರ್ (ಸುಮಾರು 6.85 ಲಕ್ಷ ಕೋಟಿ ರೂ) ಇದೆ. ಏಷ್ಯಾದ ಅತಿ ಶ್ರೀಮಂತ ಹಾಗು ವಿಶ್ವದ 13ನೆ ಅತೀ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಇದನ್ನೂ ಓದಿMeta Layoffs: ವಾಟ್ಸಾಪ್, ಫೇಸ್​ಬುಕ್​ನಿಂದ 3ನೇ ಸುತ್ತಿನ ಲೇ ಆಫ್; ತಲೆ ಮೇಲೆ ಕೈಹೊತ್ತ ಮೆಟಾ ಉದ್ಯೋಗಿಗಳು

ಮುಂಬೈನಲ್ಲಿ ಇವರು 27 ಮಹಡಿಯ ಅಂಟಿಲಾ ಎಂಬ ಬಂಗಲೆ ಹೊಂದಿದ್ದಾರೆ. ಇದು ವಿಶ್ವದ ಅತಿ ದುಬಾರಿ ವಾಸದ ಕಟ್ಟಡ ಎಂದು ಪರಿಗಣಿತವಾಗಿದೆ. ತಾಂತ್ರಿಕವಾಗಿ ಆಂಟಿಲಾ 60 ಮಹಡಿಗಳನ್ನು ಹೊಂದಿದೆ. ಈ ಬಂಗಲೆಯ ಕೆಳಗಿನ 6 ಮಹಡಿಗಳು ಅಂಬಾನಿಯ ಲಕ್ಷುರಿ ಕಾರುಗಳ ಪಾರ್ಕಿಂಗ್​ಗೆಂದೇ ಮೀಸಲಿರಿಸಲಾಗಿದೆ. ರಾಲ್ಸ್ ರಾಯ್ಸ್ ಕುಲಿನನ್, ಬಿಎಂಡಬ್ಲ್ಯೂ 760ಎಲ್​ಐ, ಮೇಬ್ಯಾಚ್ ಮೊದಲಾದ ಐಷಾರಾಮಿ ಕಾರುಗಳು ಅಂಬಾನಿ ಬಳಿ ಇವೆ.

ಅಮೆರಿಕದ ನ್ಯೂಯಾರ್ಕ್​ನಲ್ಲಿ ಲಕ್ಷುರಿ ಹೊಟೆಲ್, ಲಂಡನ್ ನಗರದಲ್ಲಿ 900 ವರ್ಷದ ಹಳೆಯದಾದ ಸ್ಟೋಲ್ ಪಾರ್ಕ್ ಹೋಟೆಲ್​ಗಳ ಹೊಡೆಯ ಅಂಬಾನಿ. ಹಾಗೆಯೇ ಇವರ ಬಳಿ ಮೂರು ಐಷಾರಾಮಿ ಪ್ರೈವೇಟ್ ಜೆಟ್​ಗಳಿವೆ. ಒಂದೊಂದು ಜೆಟ್​ನ ಬೆಲೆ ಏನಿಲ್ಲವೆಂದರೂ 100 ಕೋಟಿ ರೂನದ್ದು.

ಮುಂಬೈನಲ್ಲಿ ಪ್ರತಿಷ್ಠಿತ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಜಿಯೋ ವರ್ಲ್ಡ್ ಡ್ರೈವ್ ಕಟ್ಟಡವನ್ನು ಅಂಬಾನಿ ಹೊಂದಿದ್ದಾರೆ. ಇದೇ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಆ್ಯಪಲ್ ಬಿಕೆಸಿ ಸ್ಟೋರ್ ಇರುವುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Wed, 19 April 23