ಚುನಾವಣೆಯಲ್ಲಿ ಯಾರು ಗೆದ್ದರೆ ಮಾರುಕಟ್ಟೆ ವರ್ತನೆ ಹೇಗಿರುತ್ತೆ? ನೊಮುರಾ ಸಂಸ್ಥೆಯಿಂದ ಇಂಟರೆಸ್ಟಿಂಗ್ ಲೆಕ್ಕಾಚಾರ

|

Updated on: May 27, 2024 | 7:01 PM

How market behaves after poll outcome: ಈ ಬಾರಿಯ ಲೋಕಸಭಾ ಚುನಾವಣೆ ಹಣಾಹಣಿಯಲ್ಲಿ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ. ಬಿಜೆಪಿಯ ಓಟವನ್ನು ತಡೆದು ನಿಲ್ಲಿಸಲು ವಿಪಕ್ಷಗಳೆಲ್ಲವೂ ಸೇರಿ ಇಂಡಿಯಾ ಕೂಟ ರಚಿಸಿ ಒಗ್ಗಟ್ಟಿನಿಂದ ಹೋರಾಡುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಒಂದು ನಿರ್ದಿಷ್ಟ ಮಾದರಿಯಲ್ಲಿ ಆರ್ಥಿಕ ವ್ಯವಸ್ಥೆ ಸಾಗುತ್ತಿದೆ. ಮಾರುಕಟ್ಟೆ ಕೂಡ ಇದೇ ಮಾದರಿ ಮುಂದುವರಿಯಲಿ ಎಂದು ಅಪೇಕ್ಷಿಸುತ್ತಿರಬಹುದು. ಗ್ಲೋಬಲ್ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ಕುತೂಹಲವೆನಿಸುವ ಲೆಕ್ಕಾಚಾರ ಹಾಕಿದೆ.

ಚುನಾವಣೆಯಲ್ಲಿ ಯಾರು ಗೆದ್ದರೆ ಮಾರುಕಟ್ಟೆ ವರ್ತನೆ ಹೇಗಿರುತ್ತೆ? ನೊಮುರಾ ಸಂಸ್ಥೆಯಿಂದ ಇಂಟರೆಸ್ಟಿಂಗ್ ಲೆಕ್ಕಾಚಾರ
ಮಾರುಕಟ್ಟೆ ವರ್ತನೆ
Follow us on

ಚುನಾವಣೆ ಮುಗಿಯಲು ಕೊನೆಯ ಹಂತದ ಮತದಾನ (lok sabha elections 2024) ಬಾಕಿ ಇದೆ. ಎನ್​ಡಿಎ ಸರಳ ಬಹುಮತ ಬರಬಹುದು ಎನ್ನುವಂತಹ ಸಾಮಾನ್ಯ ಅಭಿಪ್ರಾಯ ಮನೆಮಾಡಿದೆ. ಜನಸಾಮಾನ್ಯರಂತೆ ಮಾರುಕಟ್ಟೆ ಕೂಡ ಚುನಾವಣಾ ಫಲಿತಾಂಶದ ಬಗ್ಗೆ ಕುತೂಹಲದ ಕಣ್ಣಿಟ್ಟಿದೆ. ಮೇಲಾಗಿ ಇದು ಹಣಕಾಸು ಪ್ರಪಂಚ. ಜಾಗತಿಕ ವಿದ್ಯಮಾನದಲ್ಲಿ ಸ್ವಲ್ಪ ಏರುಪೇರಾದರೂ ಅದು ಭಾರತದ ಮಾರುಕಟ್ಟೆಯ (Indian market) ಮೇಲೆ ಪ್ರತಿಫಲಿಸುತ್ತದೆ. ಚುನಾವಣೆಯಲ್ಲಿ ಎನ್​ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಬಂದರೆ ಏನಾಗಬಹುದು, ಸರಳ ಬಹುಮತ ಬಂದರೆ ಏನಾಗಬಹುದು, ಇಂಡಿಯಾ ಒಕ್ಕೂಟ ಗೆದ್ದರೆ ಏನಾಗಬಹುದು ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ವಿಶ್ಲೇಷಣೆ ಮಾಡಿದೆ.

ಜೂನ್ 1ಕ್ಕೆ ಕೊನೆಯ ಹಂತದ ಚುನಾವಣೆ ಇದೆ. ಮತದಾನ ಪೂರ್ಣಗೊಂಡ ಬಳಿಕ, ಜೂನ್ 1ರ ಸಂಜೆ ಮತಗಟ್ಟೆ ಫಲಿತಾಂಶ ಹೊರಬರಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಮತಗಟ್ಟೆ ಸಮೀಕ್ಷೆ ಹೆಚ್ಚು ನಿಖರವಾಗಿರುತ್ತದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಯಾವ ಒಕ್ಕೂಟಕ್ಕೆ ಅಧಿಕಾರ ಒಲಿಯಬಹುದು ಎನ್ನುವುದು ಗೊತ್ತಾಗುತ್ತದೆ.

ಇದನ್ನೂ ಓದಿ: ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಎನ್​ಡಿಎಗೆ 400 ಸೀಟು ಸಮೀಪ ಸಿಕ್ಕರೆ…

ನೊಮುರಾ ಪ್ರಕಾರ ಎನ್​ಡಿಎ ಮೈತ್ರಿಕೂಟ ನಿರೀಕ್ಷಿಸಿದಂತೆ 400 ಸ್ಥಾನ ಸಿಕ್ಕರೆ ದೇಶೀಯ ವಲಯದ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅದರಲ್ಲೂ ಹಣಕಾಸು ಸಂಸ್ಥೆಗಳು, ಇನ್​ಫ್ರಾಸ್ಟ್ರಕ್ಚರ್, ಕೈಗಾರಿಕೆ ಮತ್ತು ಪಿಎಸ್​ಯುಗಳ ಸ್ಟಾಕ್​ಗಳಿಗೆ ಒಳ್ಳೆಯ ಬೇಡಿಕೆ ಬರುತ್ತದೆ. ಆದರೆ, ಹೆಲ್ತ್​ಕೇರ್, ಐಟಿ ಸರ್ವಿಸ್ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಹಿನ್ನಡೆ ಆಗಬಹುದು. ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಬಹುದು ಎಂದು ನೊಮುರಾ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಬಿಜೆಪಿಗೆ ಸರಳ ಬಹುಮತ ಮಾತ್ರವೇ ಬಂದರೆ…

ಎನ್​ಡಿಎಗೆ ದೊಡ್ಡ ಬಹುಮತ ಬರಲಿಲ್ಲವೆಂದರೆ ಮಾರುಕಟ್ಟೆ ವರ್ತನೆ ತುಸು ಭಿನ್ನವಾಗಿರುತ್ತದೆ. ದೊಡ್ಡ ಮೌಲ್ಯದ ದೇಶೀಯ ವಲಯದ ಕಂಪನಿಗಳ ಷೇರು ಮೌಲ್ಯ ಕುಸಿಯಬಹುದು. ಅದರಲ್ಲೂ ಪ್ರಮುಖವಾಗಿ ಇನ್​ಫ್ರಾಸ್ಟ್ರಕ್ಚರ್, ಪಿಎಸ್​ಯು, ಕೈಗಾರಿಕೆಗಳ ಮೇಲೆ ಪರಿಣಾಮ ಬೀರಬಹುದು. ಆದರೆ, ಬ್ಯಾಂಕ್, ಕನ್ಸಂಪ್ಷನ್, ಫಾರ್ಮಾ ಸೆಕ್ಟರ್​ನ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು. ಇನ್ನು ಫಾರೆಕ್ಸ್ ಮಾರುಕಟ್ಟೆ ಸ್ಪಂದನೆ ನಕಾರಾತ್ಮಕವಾಗಿರಬಹುದು. ರುಪಾಯಿ ಮೌಲ್ಯ ತುಸು ಕಡಿಮೆ ಆಗಬಹುದು.

ಇದನ್ನೂ ಓದಿ: ಆರ್ಥಿಕ ಸಂಕಷ್ಟಕ್ಕೊಳಗಾದ ಕೇರಳಕ್ಕೆ ಪ್ರಧಾನಿ ಸಹಾಯಹಸ್ತ; ಕೇಂದ್ರದಿಂದ 21,253 ಕೋಟಿ ರೂ ನೆರವು

ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಗೆಲುವು ಪಡೆದರೆ…

ಇಂಡಿ ಮೈತ್ರಿಕೂಟ ಅಚ್ಚರಿಯ ಫಲಿತಾಂಶ ಪಡೆದಲ್ಲಿ ಮಾರುಕಟ್ಟೆ ಬಹಳ ವಿಭಿನ್ನವಾಗಿ ವರ್ತಿಸಬಹುದು. ಹಣಕಾಸು, ಕೈಗಾರಿಕೆ, ಇನ್​ಫ್ರಾಸ್ಟ್ರಕ್ಚರ್, ಪಿಎಸ್​ಯು ಘಟಕದ ಕಂಪನಿಗಳ ಷೇರುಗಳ ಮೌಲ್ಯ ಗಣನೀಯವಾಗಿ ಕಡಿಮೆ ಆಗಬಹುದು. ಐಟಿ ಸರ್ವಿಸ್, ಪಾರ್ಮಾ ಸೆಕ್ಟರ್​ನ ಷೇರುಗಳಿಗೆ ಬೇಡಿಕೆ ಬರಬಹುದು ಎಂದು ಗ್ಲೋಬಲ್ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ