ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ಅವರ ದೇವರ ಸೃಷ್ಟಿ ಹೇಳಿಕೆಗೆ ಇದೀಗ ಕಾಂಗ್ರೆಸ್ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಸಚಿವ ಮಹದೇವಪ್ಪ ನಂತರ ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಮೋದಿಗೆ ತಿರುಗೇಟು ನೀಡಿದ್ದಾರೆ. ಹಾಗಾದರೆ ಮೋದಿ ಹೇಳಿದ್ದೇನು? ಸಿದ್ದರಾಮಯ್ಯ ತಿರುಗೇಟೇನು? ಎಲ್ಲ ವಿವರ ಇಲ್ಲಿದೆ.
ಬೆಂಗಳೂರು, ಮೇ 27: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿಗೆ (BJP) ಸೋಲಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ಖಾತರಿಯಾಗಿದೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ಮಾಡಲು ದೇವರೇ ಕಳುಹಿಸಿದ್ದಾನೆ. 2047ರ ತನಕ ಸೇವೆ ಮಾಡಲು ದೇವರು ಕಳುಹಿಸಿದ್ದಾನೆ ಎಂದು ಮೋದಿ ಹೇಳುತ್ತಾರೆ. ಮತಕ್ಕಾಗಿ ಹಿಂದೂ, ಮುಸ್ಲಿಮರನ್ನು ವಿಭಜಿಸಿ ಮಾತನಾಡುತ್ತಾರೆ. ಚುನಾವಣಾ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಬಹುತ್ವದಲ್ಲಿ ನಂಬಿಕೆಯೇ ಇಲ್ಲ ಎಂದು ಟೀಕಿಸಿದರು.
ಹಿಂದೂ ರಾಷ್ಟ್ರ ಕನಸಿನ ಮಾತು
ಮೋದಿ ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುತ್ತಾರೆ. ಇದು ಕನಸಿನ ಮಾತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸೋಲಿನ ಭೀತಿಯಿಂದ ಮೋದಿ ಏನೇನೋ ಮಾತನಾಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು 60ನೇ ಪುಣ್ಯತಿಥಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಸಿದ್ದರಾಮಯ್ಯ ವಿಧಾನಸೌಧ ಆವರಣದಲ್ಲಿ ಪಂಡಿತ್ ನೆಹರೂ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಏನು ಹೇಳಿದ್ದರು ಮೋದಿ?
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ, ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುದು ನನಗೆ ಮನವರಿಕೆಯಾಗಿದೆ. ಆ ಉದ್ದೇಶವನ್ನು ಸಾಧಿಸಿದ ನಂತರ, ನನ್ನ ಕೆಲಸ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ. ದೇವರು ನನಗೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಾಮರ್ಥ್ಯ, ಸ್ಫೂರ್ತಿ ಮತ್ತು ಶಕ್ತಿ ನೀಡಿದ್ದಾನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ದೇವದೂತ ಬಂದ ನಂತರ ಏನೇನಾಯ್ತು? ಮೋದಿಗೆ ಮಹದೇವಪ್ಪ ಟಾಂಗ್
ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಈ ತಿಂಗಳ ಆರಂಭದಲ್ಲಿ ಭೇಟಿ ನೀಡಿದ್ದ ಮೋದಿ, ದೂರದರ್ಶನಕ್ಕೆ ನೀಡಿದ್ದ ಸಂದರ್ಶನದಲ್ಲಿಯೂ ದೇವರ ಬಗ್ಗೆ ಪ್ರಸ್ತಾಪಿಸಿದ್ದರು. ನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದಷ್ಟೇ ನಾನು ಭಾವಿಸಿದ್ದೆ. ಅವರು ತೀರಿಕೊಂಡ ನಂತರದಲ್ಲಿ ದೇವರು ನನ್ನನ್ನು ಕಳುಹಿಸಿದ್ದಾನೆ ಎಂಬುದು ನನಗೆ ಮನವರಿಕೆಯಾಯಿತು ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Mon, 27 May 24