Nepal: ದುಬಾರಿ ವ್ಯಾಟ್ ತೆರಿಗೆ: ಭಾರತದಿಂದ ತರಕಾರಿ, ಈರುಳ್ಳಿ ಖರೀದಿ ನಿಲ್ಲಿಸಿದ ನೇಪಾಳಿ ವರ್ತಕರು
13% VAT For Imported Vegetables In Nepal: ನೇಪಾಳ ಸರ್ಕಾರ ಆಮದಿತ ತರಕಾರಿ, ಹಣ್ಣು ಮತ್ತಿತರ ವಸ್ತುಗಳಿಗೆ ಶೇ. 13ರಷ್ಟು ವ್ಯಾಟ್ ವಿಧಿಸಿದೆ. ಇದರ ಪರಿಣಾಮವಾಗಿ ಅಲ್ಲಿನ ವರ್ತಕರು ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಾರೆ.
ಕಠ್ಮಂಡು: ನೇಪಾಳದಲ್ಲಿ ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರ ಹಣಕಾಸು ದುಸ್ಥಿತಿಗೆ ಗಾಯದ ಮೇಲೆ ಬರೆ ಎಳೆದಂತೆ ಅಲ್ಲಿನ ಸರ್ಕಾರ ಕೆಲ ಪ್ರಮುಖ ಆಹಾರವಸ್ತುಗಳ ಆಮದಿಗೆ ವ್ಯಾಟ್ ತೆರಿಗೆ (VAT) ವಿಪರೀತ ಏರಿಸಿದೆ. ತರಕಾರಿ ಮತ್ತು ಈರುಳ್ಳಿ ವಸ್ತುಗಳ ಆಮದು (Import of Vegetables) ಮೇಲೆ ಕಳೆದ ತಿಂಗಳು ನೇಪಾಳ ಸರ್ಕಾರ ಶೇ. 13ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು (ವಿಎಟಿ) ವಿಧಿಸಿದೆ. ಇದರ ಪರಿಣಾಮವಾಗಿ ಭಾರತದಿಂದ ನೇಪಾಳಕ್ಕೆ ರಫ್ತಾಗುತ್ತಿದ್ದ ತರಕಾರಿ ಮತ್ತು ಈರುಳ್ಳಿಯನ್ನು ನೇಪಾಳಿ ವರ್ತಕರು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಈ ವಿಚಾರವನ್ನು ನೇಪಾಳಿ ವ್ಯಾಪಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ಹಂಚಿಕೊಂಡಿದ್ದಾರೆ.
ಆಮದಾದ ಈರುಳ್ಳಿ, ಆಲೂಗಡ್ಡೆ ಮತ್ತಿತರ ವಿವಿಧ ತರಕಾರಿಗಳು ಹಾಗೂ ಹಣ್ಣುಗಳ ಮೇಲೆ ಶೇ. 13ರಷ್ಟು ವ್ಯಾಟ್ ವಿಧಿಸಲು ಅವಕಾಶ ಇರುವ ಹಣಕಾಸು ಮಸೂದೆಯು ಮೇ 29ರಂದು ನೇಪಾಳ ಸಂಸತ್ತಿನಲ್ಲಿ ಮಂಡನೆಯಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ: WPI Inflation: ಸಗಟು ಬೆಲೆ ಹಣದುಬ್ಬರ ಮೈನಸ್ 3.48 ಪ್ರತಿಶತಕ್ಕೆ ಕುಸಿತ; ಆರ್ಥಿಕತೆಗೆ ಅನುಕೂಲವೋ, ಅಪಾಯವೋ?
ನೇಪಾಳದಲ್ಲಿ ವಿಪರೀತವಾಗಿರುವ ಹಣದುಬ್ಬರದ ಪರಿಸ್ಥಿತಿ ಈಗ ಇನ್ನಷ್ಟು ಹದಗೆಡುತ್ತದೆ. ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರ ಬವಣೆ ಇನ್ನೂ ತಾರಕಕ್ಕೇರುತ್ತದೆ. ಅದರಲ್ಲೂ ಕಡಿಮೆ ಆದಾಯದ ಕುಟುಂಬಗಳಿಗೆ ಆಹಾರ ಅಭದ್ರತೆ ಹೆಚ್ಚುತ್ತದೆ ಎಂದು ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ನೇಪಾಳದಲ್ಲಿ 2023ರ ಮೇ ತಿಂಗಳಲ್ಲಿ ಹಣದುಬ್ಬರ ಶೇ. 7.41ರಷ್ಟಿದೆ. ಭಾರತದಿಂದ ಬಹಳಷ್ಟು ಆಹಾರವಸ್ತುಗಳನ್ನು ನೇಪಾಳ ಆಮದು ಮಾಡಿಕೊಳ್ಳುತ್ತದೆ. ಈಗ ವ್ಯಾಟ್ ತೆರಿಗೆ ಏರಿಕೆಯಿಂದ ಹಣ್ಣು ಮತ್ತು ತರಕಾರಿಗಳ ಬೆಲೆ ತುಸು ಹೆಚ್ಚಬಹುದು. ಏಪ್ರಿಲ್ಗಿಂತ ಮೇ ತಿಂಗಳಲ್ಲಿ ಕಡಿಮೆ ಆಗಿದ್ದ ಹಣದುಬ್ಬರ ಮತ್ತೆ ಏರಿಕೆಯ ಹಾದಿಗಿಳಿದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಅಲ್ಲಿನ ಹಣಕಾಸು ತಜ್ಞರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Wed, 14 June 23