ಬೊಜ್ಜು, ಶುಗರ್ ಇದ್ದರೆ ಅಮೆರಿಕಕ್ಕೆ ಇಲ್ಲ ಪ್ರವೇಶ? ಇಲ್ಲಿದೆ ಹೊಸ ವೀಸಾ ಪಾಲಿಸಿ

No US visa for people with health problems: ಅಮೆರಿಕ ಸರ್ಕಾರ ಈಗ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಮೆರಿಕದ ವೀಸಾಗೆ ಅರ್ಜಿ ಹಾಕುವ ವ್ಯಕ್ತಿಗಳ ಮೆಡಿಕಲ್ ಸ್ಕ್ರೀನಿಂಗ್ ಕಟ್ಟುನಿಟ್ಟಾಗಿ ನಡೆಯಬಹುದು. ಡಯಾಬಿಟಿಸ್, ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವವರ ವೀಸಾ ಅರ್ಜಿ ತಿರಸ್ಕಾರಗೊಳ್ಳಬಹುದು.

ಬೊಜ್ಜು, ಶುಗರ್ ಇದ್ದರೆ ಅಮೆರಿಕಕ್ಕೆ ಇಲ್ಲ ಪ್ರವೇಶ? ಇಲ್ಲಿದೆ ಹೊಸ ವೀಸಾ ಪಾಲಿಸಿ
ಅಮೆರಿಕ ವೀಸಾ

Updated on: Nov 07, 2025 | 7:02 PM

ವಾಷಿಂಗ್ಟನ್, ನವೆಂಬರ್ 7: ವಲಸಿಗರ ಸ್ವರ್ಗ ಎನಿಸಿದ್ದ ಅಮೆರಿಕ ಈಗ ವಿದೇಶಿಗರಿಗೆ ಸಾಲು ಸಾಲಾಗಿ ನಿರ್ಬಂಧಗಳನ್ನು ಹಾಕಲು ಹೊರಟಿದೆ. ಎಚ್​1ಬಿ ವೀಸಾ ಮೇಲೆ ನಿರ್ಬಂಧ ಹಾಕಿದ ಅಮೆರಿಕ ಈಗ ಇತರ ವೀಸಾಗಳಲ್ಲೂ (US visa) ವಿವಿಧ ನಿರ್ಬಂಧಗಳನ್ನು ಹೊರಡಿಸಿದೆ. ಡಯಾಬಿಟಿಸ್, ಬೊಜ್ಜು, ಹೃದಯ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ವಿದೇಶೀ ನಾಗರಿಕರಿಗೆ ವೀಸಾ ನೀಡದಿರಲು ನಿರ್ಧರಿಸಲಾಗಿದೆ. ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಬೇರೆ ಬೇರೆ ದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಕಳುಹಿಸಿಕೊಡಲಾಗಿದೆ.

ಈ ಹಿಂದೆಯೂ ವೈದ್ಯಕೀಯ ತಪಾಸಣೆ ಇತ್ತು…

ಅಮೆರಿಕದ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ನಡೆಸುವುದು ಈ ಮುಂಚಿನಿಂದಲೂ ಇರುವ ನಿಯಮವೇ. ಆದರೆ, ವೀಸಾ ಗೈಡೆನ್ಸ್​ನಲ್ಲಿ ಅದನ್ನು ಎಲ್ಲಿಯೂ ನಮೂದಿಸಿರಲಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದಾಗ ಅದನ್ನು ನಿರ್ಲಕ್ಷಿಸಿ ವೀಸಾ ನೀಡುವುದು ವಾಡಿಕೆಯಾಗಿತ್ತು. ಈಗ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುವುದರಿಂದ ರಾಯಭಾರ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವೀಸಾ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ: ಕ್ಲೌಡ್ ಕಿಚನ್ ಐಡಿಯಾ; ಹೋಟೆಲ್ ಬೇಕಿಲ್ಲ, ಇದು ಟ್ರೆಂಡಿ ಬ್ಯುಸಿನೆಸ್

ಆರೋಗ್ಯ ಸಮಸ್ಯೆಗಳಿರುವ ಜನರು ಹೋದರೆ ಅಮೆರಿಕಕ್ಕೆ ಏನು ಕಷ್ಟ?

ಅಮೆರಿಕ ಸರ್ಕಾರ ತನ್ನ ನಿವಾಸಿಗಳ ಆರೋಗ್ಯ ಪಾಲನೆಗೆ ಸಾಕಷ್ಟು ಹಣ ವ್ಯಯಿಸುತ್ತದೆ. ಅಲ್ಲಿ ಇನ್ಷೂರೆನ್ಸ್ ಪ್ಲಾನ್​ಗಳಿದ್ದು ಸರ್ಕಾರದಿಂದ ಸಬ್ಸಿಡಿ ಹೋಗುತ್ತದೆ. ಹೀಗಾಗಿ, ಜನರ ಆರೋಗ್ಯ ಸಮಸ್ಯೆ ಹೆಚ್ಚಾದರೆ ಸರ್ಕಾರಕ್ಕೆ ವೆಚ್ಚದ ಹೊರೆ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಅನಾರೋಗ್ಯವಂತ ವಲಸಿಗರನ್ನು ಒಳಗೆ ಸೇರಿಸಿಕೊಳ್ಳದಿರಲು ಅಮೆರಿಕ ನಿರ್ಧರಿಸಿರಬಹುದು.

‘ನೀವು ಅರ್ಜಿದಾರರ ಆರೋಗ್ಯವನ್ನು ಪರಿಗಣಿಸಲೇಬೇಕು. ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ, ಕ್ಯಾನ್ಸರ್, ಡಯಾಬಿಟಿಸ್, ನರರೋಗ, ಮಾನಸಿಕ ಆರೋಗ್ಯ ಮೊದಲಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರನ್ನು ನೋಡಿಕೊಳ್ಳಲು ಸಾವಿರಾರು ಡಾಲರ್​ಗಳು ವ್ಯಯವಾಗುತ್ತದೆ…. ಬೊಜ್ಜು ಆಸ್ತಮಾ, ಬಿಪಿ ಇತ್ಯಾದಿ ಕಾಯಿಲೆಗೆ ಎಡೆ ಮಾಡಿಕೊಡುತ್ತದಾದ್ದರಿಂದ ಅದನ್ನೂ ಪರಿಶೀಲಿಸಿ’ ಎಂದು ಅಮೆರಿಕದ ಹೊಸ ವೀಸಾ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಬುಲ್ಸ್ ಐ, ಯುಪಿಸಿ ಬಾರ್​ಕೋಡ್​ನಿಂದ ಕ್ಯುಆರ್ ಕೋಡ್​ವರೆಗೆ, ಕುತೂಹಲಕಾರಿ ಕಥೆ

ವೀಸಾ ಸಿಗಲು ಹಣಬಲವಾದರೂ ಇರಬೇಕು

ಒಂದು ವೇಳೆ ಅರ್ಜಿದಾರರಿಗೆ ಆರೋಗ್ಯ ಸಮಸ್ಯೆಗಳಿದ್ದು, ಆ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತಗೊಳ್ಳುವಂತಿದ್ದರೆ, ಅಂಥ ಅರ್ಜಿದಾರರ ಬಳಿ ಹಣ ಬಲ ಇದೆಯಾ ಎನ್ನುವುದನ್ನೂ ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಸರ್ಕಾರದ ನೆರವಿಲ್ಲದೆ ಚಿಕಿತ್ಸೆಯನ್ನು ತಾವೇ ಭರಿಸುವಷ್ಟು ಹಣ ಇದ್ದರೆ ಅಂಥವರಿಗೆ ವೀಸಾ ಕೊಡಲು ಅವಕಾಶ ಇರುತ್ತದೆ. ಅಮೆರಿಕದಲ್ಲಿ ಖಾಸಗಿಯಾಗಿ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಹಳ ಖರ್ಚು ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us