WAVES Index: ಷೇರುಮಾರುಕಟ್ಟೆಯಲ್ಲಿ ವೇವ್ಸ್ ಇಂಡೆಕ್ಸ್ ಸೇರ್ಪಡೆ; ವಿಶ್ವದರ್ಜೆ ಸ್ಟುಡಿಯೋ, ಯೂನಿವರ್ಸಿಟಿಗಳ ಸ್ಥಾಪನೆಗೆ ಕ್ರಮ
Nifty WAVES index at NSE: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಎನ್ಎಸ್ಇ ನಿಫ್ಟಿ ವೇವ್ಸ್ ಇಂಡೆಕ್ಸ್ ರಚನೆ ಮಾಡಲಾಗಿದೆ. ಮನರಂಜನೆ, ಮೀಡಿಯಾ ಮತ್ತು ಗೇಮಿಂಗ್ ಕ್ಷೇತ್ರದ ನಜಾರ ಟೆಕ್ನಾಲಜೀಸ್, ನೆಟ್ವರ್ಕ್ 18 ಮೀಡಿಯಾ, ಪಿವಿಆರ್ ಐನಾಕ್ಸ್ ಸೇರಿದಂತೆ 43 ಕಂಪನಿಗಳ ಷೇರುಗಳು ವೇವ್ಸ್ ಇಂಡೆಕ್ಸ್ನಲ್ಲಿ ಲಿಸ್ಟ್ ಆಗಿವೆ. ಮಹಾರಾಷ್ಟ್ರದಲ್ಲಿ ವಿಶ್ವದರ್ಜೆಯ ಸ್ಟುಡಿಯೋ ಮತ್ತು ಯೂನಿವರ್ಸಿಟಿಗಳ ಸ್ಥಾಪನೆಗೆ ಸರ್ಕಾರ ವಿವಿಧ ಎಂಒಯುಗಳನ್ನು ಮಾಡಿಕೊಂಡಿದೆ.

ಮುಂಬೈ, ಮೇ 2: ನಿನ್ನೆ ಆರಂಭಗೊಂಡಿರುವ ವೇವ್ಸ್ ಸಮಿಟ್ ಅಥವಾ ವರ್ಲ್ಡ್ ಆಡಿಯೋ ವಿಶುವಲ್ ಮತ್ತು ಎಂಟರ್ಟೈನ್ಮೆಂಟ್ ಸಮಿಟ್ (WAVES Summit 2025) ಭಾರತದ ಭವಿಷ್ಯದ ಕ್ರಿಯೇಟರ್ ಎಕನಾಮಿಯ ದೈತ್ಯ ಶಕ್ತಿಯ ಸಂಕೇತದಂತೆ ತೋರುತ್ತಿದೆ. ಬಾಲಿವುಡ್ ಅನ್ನು ಒಳಗೊಂಡಿರುವ ಮುಂಬೈ ಅನ್ನು ವಿಶ್ವದರ್ಜೆಯ ಮನರಂಜನಾ ಬ್ಯುಸಿನೆಸ್ ಹಬ್ ಆಗಿ ಬೆಳೆಸಲು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಪ್ರಯತ್ನಗಳನ್ನು ಮಾಡಿದ್ದಾರೆ. ವಿಶ್ವದರ್ಜೆಯ ಸ್ಟುಡಿಯೋಗಳು ಮತ್ತು ಯೂನಿವರ್ಸಿಟಿಗಳ ನಿರ್ಮಾಣಕ್ಕಾಗಿ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಮಹಾರಾಷ್ಟ್ರ ಸರ್ಕಾರ 8,000 ಕೋಟಿ ರೂ ಮೌಲ್ಯದ ವಿವಿಧ ಎಂಒಯು ಒಪ್ಪಂದಗಳಿಗೆ ಸಹಿ ಹಾಕಿದೆ. ವೇವ್ಸ್ ಸಮಿಟ್ನ ಎರಡನೇ ದಿನವಾದ ಶುಕ್ರವಾರ ದೇವೇಂದ್ರ ಫಡ್ನವಿಸ್ ಈ ವಿಷಯವನ್ನು ತಿಳಿಸಿದ್ದಾರೆ.
ಎನ್ಎಸ್ಇನಲ್ಲಿ ನಿಫ್ಟಿ ವೇವ್ಸ್ ಇಂಡೆಕ್ಸ್ ರಚನೆ
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಇಂದು ಶುಕ್ರವಾರ ನಿಫ್ಟಿ ಎನ್ಎಸ್ಇ ವೇವ್ಸ್ ಇಂಡೆಕ್ಸ್ ಎನ್ನುವ ಹೊಸ ಸೂಚ್ಯಂಕವನ್ನು ರಚಿಸಿರುವುದಾಗಿ ವೇವ್ಸ್ ಸಮಿಟ್ನಲ್ಲಿ ತಿಳಿಸಿದೆ. ಮಾಧ್ಯಮ, ಮನರಂಜನೆ ಮತ್ತು ಗೇಮಿಂಗ್ ಸೆಕ್ಟರ್ನಲ್ಲಿರುವ 43 ವಿವಿಧ ಕಂಪನಿಗಳ ಷೇರುಗಳನ್ನು ಈ ಇಂಡೆಕ್ಸ್ನಲ್ಲಿ ಲಿಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಎಫ್ಎಂಸಿಜಿ ಸೆಕ್ಟರ್ನಲ್ಲಿ ಸಂಚಲನ ಸೃಷ್ಟಿಸಿದ ಪತಂಜಲಿ ಫುಡ್ಸ್; ಇದೆಷ್ಟು ದೊಡ್ಡ ಗಾತ್ರದ ಕಂಪನಿ ನೋಡಿ…
ನಜಾರ ಟೆಕ್ನಾಲಜೀಸ್, ಪಿವಿಆರ್ ಐನಾಕ್ಸ್, ಹಾಥವೇ ಏಬಲ್, ಸನ್ ಟಿವಿ, ಝೀ ಎಂಟರ್ಟೈನ್ಮೆಂಟ್, ನೆಟ್ವರ್ಕ್ 18 ಮೀಡಿಯಾ, ಸರಿಗಮ ಇಂಡಿಯಾ ಇತ್ಯಾದಿ 43 ಷೇರುಗಳು ನಿಫ್ಟಿ ಎನ್ಎಸ್ಇ ವೇವ್ಸ್ ಇಂಡೆಕ್ಸ್ನಲ್ಲಿವೆ. ಈ ಇಂಡೆಕ್ಸ್ನಲ್ಲಿ ಪ್ರತಿ ಷೇರಿಗೂ ಶೇ. 5ರಷ್ಟು ವೈಟೇಜ್ ನೀಡಲಾಗಿದೆ.
2005ರ ಏಪ್ರಿಲ್ 1 ಅನ್ನು ಬೇಸ್ ಡೇಟ್ ಆಗಿ ನಿಗದಿ ಮಾಡಲಾಗಿದೆ. ಮೂರು ತಿಂಗಳಿಗೊಮ್ಮೆ ಈ ಇಂಡೆಕ್ಸ್ ಅನ್ನು ಪರಿಷ್ಕರಿಸಲಾಗುತ್ತದೆ.
8,000 ಕೋಟಿ ರೂ ಮೌಲ್ಯದ ವಿವಿಧ ಒಪ್ಪಂದಗಳಿಗೆ ಸಹಿ
ಮಹಾರಾಷ್ಟ್ರ ಸರ್ಕಾರ ಆಸ್ಟ್ರೇಲಿಯಾದ ಒಂದು ವಿವಿ ಜೊತೆ ಎಂಒಯುಗೆ ಸಹಿ ಹಾಕಿದೆ. ಹಾಗೂ ಬ್ರಿಟನ್ನ ಯಾರ್ಕ್ ಯೂನಿವರ್ಸಿಟಿ ಜೊತೆಗೂ ಒಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನೂ ಮೂರು ಯೂನಿವರ್ಸಿಟಿಗಳು ಒಪ್ಪಂದಕ್ಕೆ ಸಿದ್ಧ ಇವೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬೇರೆ ಇನ್ನೂ ಐದಕ್ಕೂ ಹೆಚ್ಚು ಯೂನಿವರ್ಸಿಟಿಗಳ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
‘ಸಿಡ್ಕೋ ಮೂಲಕ ಶೈಕ್ಷಣಿಕ ನಗರವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅಲ್ಲಿ 10-12 ವಿದೇಶೀ ಯೂನಿವರ್ಸಿಟಿಗಳು ಕ್ಯಾಂಪಸ್ ಸ್ಥಾಪಿಸಬಹುದು ಎಂದು ಭಾವಿಸಿದ್ದೇವೆ’ ಎಂದು ಫಡ್ನವಿಸ್ ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ನಿಂದ ಭಾರತೀಯರು ಗಳಿಸಿರುವ ಆದಾಯ ಎಷ್ಟು ಗೊತ್ತಾ? ವೇವ್ಸ್ ಸಮಿಟ್ನಲ್ಲಿ ಉತ್ತರ ಕೊಟ್ಟ ಸಿಇಒ
ವರ್ಲ್ಡ್ ಕ್ಲಾಸ್ ಫಿಲಂ ಸ್ಟುಡಿಯೋಗಳ ಸ್ಥಾಪನೆಗೆ ಯತ್ನ
ಮುಂಬೈನಲ್ಲಿ ವಿಶ್ವದರ್ಜೆಯ ಸ್ಟುಡಿಯೋಗಳ ನಿರ್ಮಾಣಕ್ಕೆ ಮಹಾ ಸರ್ಕಾರ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದೆ. ಹೊಸ ಸುಧಾರಿತ ಫಿಲಂ ಸಿಟಿ ನಿರ್ಮಾಣಕ್ಕೆ ಪ್ರೈಮ್ ಫೋಕಸ್ ಜೊತೆ ಎಂಒಯು ಮಾಡಿಕೊಳ್ಳಲಾಗಿದೆ. ಪನ್ವೇಲ್ನಲ್ಲಿ ಗೋದ್ರೇಜ್ನಿಂದ 2,000 ಕೋಟಿ ರೂ ಹೂಡಿಕೆಯಲ್ಲಿ ಮತ್ತೊಂದು ಸ್ಟುಡಿಯೋ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
4 ದಿನಗಳ ವೇವ್ಸ್ ಸಮಿಟ್
ಭಾರತವನ್ನು ವಿಶ್ವದ ಕ್ರಿಯೇಟರ್ಸ್ ಅಡ್ಡೆಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯತ್ನಿಸುತ್ತಿದ್ದು, ಆ ನಿಟ್ಟಿನಲ್ಲಿ ನಾಲ್ಕು ದಿನಗಳ ವೇವ್ಸ್ ಶೃಂಗಸಭೆಯನ್ನು ನಡೆಸಿದೆ. ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ನಿನ್ನೆ ಈ ಸಮಿಟ್ ಆರಂಭವಾಗಿದ್ದು, ಭಾನುವಾರ (ಮೇ 4) ಅಂತ್ಯಗೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








