ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು

Official launch of Bharat Taxi: ಗೃಹ ಸಚಿವ ಅಮಿತ್ ಶಾ ಅವರು ಫೆಬ್ರುವರಿ 5ರಂದು ದೆಹಲಿ ಎನ್​ಸಿಆರ್​ನಲ್ಲಿ ಭಾರತ್ ಟ್ಯಾಕ್ಸಿಗೆ ಅಧಿಕೃತ ಚಾಲನೆ ಕೊಡುತ್ತಿದ್ದಾರೆ. ಸಹಕಾರಿ ತತ್ವದಲ್ಲಿ ನಿರ್ಮಿತವಾಗಿರುವ ಭಾರತ್ ಟ್ಯಾಕ್ಸಿಯನ್ನು ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆ ನಿರ್ವಹಿಸುತ್ತದೆ. ಓಲಾ, ಊಬರ್ ರೀತಿ ಭಾರತ್ ಟ್ಯಾಕ್ಸಿಯು ಚಾಲಕರಿಂದ ಕಮಿಷನ್ ಪಡೆಯುವುದಿಲ್ಲ.

ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು
ಭಾರತ್ ಟ್ಯಾಕ್ಸಿ

Updated on: Feb 05, 2026 | 12:21 PM

ನವದೆಹಲಿ, ಫೆಬ್ರುವರಿ 5: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿಯ (Bharat Taxi) ಸೇವೆ ಇಂದು ಗುರುವಾರ ಅಧಿಕೃತವಾಗಿ ಚಾಲನೆಗೊಳ್ಳುತ್ತಿದೆ. ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್​ಸಿಆರ್ (Delhi-NCR) ಪ್ರದೇಶದಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಗುರುವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಭಾರತ್ ಟ್ಯಾಕ್ಸಿ ಸರ್ವಿಸ್​ಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಊಬರ್​ನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಭಾರತ್ ಟ್ಯಾಕ್ಸಿ ಅಖಾಡಕ್ಕೆ ಇಳಿಯುತ್ತಿದೆ.

ಓಲಾ, ಊಬರ್​ಗಿಂತ ಭಾರತ್ ಟ್ಯಾಕ್ಸ್ ಹೇಗೆ ಭಿನ್ನ?

ಭಾರತ್ ಟ್ಯಾಕ್ಸಿ ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಸೇವೆ. ಈ ಟ್ಯಾಕ್ಸಿ ಸರ್ವಿಸ್​ಗೆ ಸರ್ಕಾರದಿಂದ ನೇರ ಬೆಂಬಲ ಇಲ್ಲವಾದರೂ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಎನ್ನುವ ಸಹಕಾರಿ ಸಂಸ್ಥೆ ಈ ಕ್ಯಾಬ್ ಸರ್ವಿಸ್ ಅನ್ನು ನಿರ್ವಹಿಸುತ್ತದೆ. ಈ ಸಹಕಾರಿ ಸಂಸ್ಥೆಯು ಲಾಭದ ಉದ್ದೇಶ ಹೊಂದಿಲ್ಲ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್​ಗಳೇ ಮಾಲೀಕರು. ಪ್ಲಾಟ್​ಫಾರ್ಮ್ ಶುಲ್ಕ ತೆರಬೇಕಿಲ್ಲ. ಓಲಾ, ಊಬರ್​ಗಳು ಚಾಲಕರಿಂದ ಶೇ. 30-40ರಷ್ಟು ಕಮಿಷನ್ ಪಡೆಯುತ್ತವೆ. ಭಾರತ್ ಟ್ಯಾಕ್ಸಿಯಲ್ಲಿ ಈ ಶುಲ್ಕ ಇರುವುದಿಲ್ಲ. ಹೀಗಾಗಿ, ಇದು ಕ್ಯಾಬ್ ಚಾಲಕರು ಹಾಗು ಗ್ರಾಹಕರು ಇಬ್ಬರಿಗೂ ವಿನ್-ವಿನ್ ಸ್ಥಿತಿ. ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಗ್ರಾಹಕರಿಗೆ ಬೆಲೆಯೂ ಸ್ವಲ್ಪ ಕಡಿಮೆ ಆಗುತ್ತದೆ.

ಭಾರತ್ ಟ್ಯಾಕ್ಸಿಯಲ್ಲಿ ಚಾಲಕರನ್ನು ಸಾರಥಿಗಳೆಂದು ಕರೆಯಲಾಗುತ್ತದೆ. ಈ ಕ್ಯಾಬ್ ಸರ್ವಿಸ್​ಗೆ ಸೇರಬಯಸುವ ಸಾರಥಿಗಳು ಕೆಲ ಷೇರುಗಳನ್ನು ಖರೀದಿಸಬಹುದು. ಕನಿಷ್ಠ ಐದು ಷೇರುಗಳನ್ನು ಖರೀದಿಸಬಹುದು. ಸುಮಾರು 500 ರೂ ಆಗುತ್ತದೆ. ಆದರೆ, ಸಂಸ್ಥೆಯು ವೃದ್ಧಿಸಿದಂತೆಲ್ಲಾ ಈ ಷೇರುಗಳಿಂದ ಚಾಲಕರಿಗೆ ಡಿವಿಡೆಂಡ್ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: ವಿದೇಶದಿಂದ ಬರುವಾಗ ತರುವ ಎಷ್ಟು ಲಗೇಜಿಗೆ ಸುಂಕ ವಿನಾಯಿತಿ ಇರುತ್ತೆ? ಎಷ್ಟು ಆಭರಣ ತರಬಹುದು?

ಸದ್ಯ, ಭಾರತ್ ಟ್ಯಾಕ್ಸಿಯಲ್ಲಿ ಎಸಿ, ನಾನ್-ಎಸಿ ಕ್ಯಾಬ್​ಗಳು, ಎಕ್ಸ್ ಎಲ್ ಕ್ಯಾಬ್​ಗಳು, ಆಟೊ, ಬೈಕ್ ಟ್ಯಾಕ್ಸಿ ಸೇವೆ ಲಭ್ಯ ಇವೆ. ಇದರ ಆ್ಯಪ್​ನ ಇಂಟರ್​ಫೇಸ್ ಕೂಡ ಅತ್ಯಾಧುನಿಕವಾಗಿದೆ ಎನ್ನಲಾಗಿದೆ. 2025ರ ಡಿಸೆಂಬರ್​ನಲ್ಲಿ ದೆಹಲಿ ಮತ್ತು ಗುಜರಾತ್​ನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿತ್ತು. ಸಾಕಷ್ಟು ರೈಡ್​ಗಳು ಈ ವೇಳೆ ಆಗಿವೆ. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಅಧಿಕೃತವಾಗಿ ಇದಕ್ಕೆ ಚಾಲನೆ ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತು ವರ್ಷಗಳಲ್ಲಿ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಇದರ ಸೇವೆ ವಿಸ್ತರಿಸುವ ಉದ್ದೇಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us