ಹಣಕಾಸು ಸಮೃದ್ಧಿಗೆ ಎರಡು ಪ್ರಮುಖ ಅಂಶಗಳಿವೆ. ಒಂದು, ಗಳಿಸಿದ ಹಣವನ್ನು ಸಾಧ್ಯವಾದಷ್ಟೂ ಉಳಿಸುವುದು. ಉಳಿಸಿದ ಹಣವನ್ನು ಸಾಧ್ಯವಾದಷ್ಟೂ ಹೂಡಿಕೆ ಮಾಡುವುದು. ಭಾರತೀಯರಲ್ಲಿ ದಿನೇ ದಿನೇ ಹೂಡಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಹೆಚ್ಚಿನ ಮಂದಿಗೆ ಈಗಲೂ ಎಫ್ಡಿ ಯೋಜನೆಯು ಪ್ರಮುಖ ಹೂಡಿಕೆ ಸಾಧನವಾಗಿದೆ. ವರದಿಗಳ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ 60 ಲಕ್ಷಕೋಟಿ ರೂನಷ್ಟು ಹೂಡಿಕೆಗಳಾಗುತ್ತಿವೆ. ಬ್ಯಾಂಕ್ ಠೇವಣಿಗಳಿಂದ ಹಿಡಿದು ಷೇರುಮಾರುಕಟ್ಟೆಯವರೆಗೂ ಹೂಡಿಕೆಗಳು (Investment) ಇದರಲ್ಲಿವೆ. ಈ ಪೈಕಿ ಎಫ್ಡಿ ಮತ್ತು ಚಿನ್ನದ ಮೇಲೆ ಶೇ. 15ರಷ್ಟು ಹೂಡಿಕೆಯಾಗುತ್ತವಂತೆ. ಎಫ್ಡಿ ವಿಚಾರಕ್ಕೆ ಬಂದರೆ ಬ್ಯಾಂಕುಗಳು, ಪೋಸ್ಟ್ ಆಫೀಸ್ ಇತ್ಯಾದಿಯಲ್ಲಿ ಠೇವಣಿ ಸ್ಕೀಮ್ಗಳುಂಟು. ಉತ್ತಮ ಬಡ್ಡಿ ಮತ್ತು ಸುರಕ್ಷತೆ ಹಾಗೂ ಸುಲಭ ನಿರ್ವಹಣೆ ಕಾರಣದಿಂದ ನಿಶ್ಚಿತ ಠೇವಣಿಗಳು ಜನಪ್ರಿಯವಾಗಿವೆ. ಈಗ ಸರ್ಕಾರದ್ದೇ ಟ್ರೆಷರಿ ಬಿಲ್ಗಳು (Treasury Bills) ಎಫ್ಡಿಗೆ ಉತ್ತಮ ಪರ್ಯಾಯ ಎನಿಸಿವೆ. ಇವು ಹೆಚ್ಚು ಬಡ್ಡಿ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ.
ಹೂಡಿಕೆದಾರರು ಅಥವಾ ಜನಸಾಮಾನ್ಯರಿಂದ ಸಾಲ ಪಡೆಯಲು ಸರ್ಕಾರ ನೀಡುವ ಬಿಲ್ ಅಥವಾ ಸಾಲ ಪತ್ರಗಳಿವು. ನಿಶ್ಚಿತ ಠೇವಣಿಗಳಂತೆ ನಿರ್ದಿಷ್ಟ ಅವಧಿಗೆ ಇವು ಮೆಚ್ಯೂರ್ ಆಗುತ್ತವೆ. ನಿಗದಿತ ಬಡ್ಡಿ ದರದಲ್ಲಿ ರಿಟರ್ನ್ ಸಿಗುತ್ತದೆ.
ಇದನ್ನೂ ಓದಿ: Youtube Income: ಫೇಸ್ಬುಕ್, ಇನ್ಸ್ಟಾ ರೀಲ್ಸ್, ಯೂಟ್ಯೂಬ್ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು? ಹೇಗೆ ಸಲ್ಲಿಸುವುದು?
ಟ್ರೆಷರಿ ಬಿಲ್ಗಳನ್ನು ಸರ್ಕಾರದ ಪರವಾಗಿ ಆರ್ಬಿಐ ಪ್ರತೀ ವಾರ ವಿತರಿಸುತ್ತದೆ. 91 ದಿನ, 182 ದಿನ ಮತ್ತು 364 ದಿನಗಳ ಮೆಚ್ಯೂರಿಟಿ ಇರುವ ವಿವಿಧ ಟ್ರೆಷರಿ ಬಿಲ್ಗಳ ಆಯ್ಕೆ ಹೂಡಿಕೆದಾರರಿಗೆ ಇರುತ್ತದೆ. ಇವುಗಳಿಗೆ ಶೇ. 6.7 ರಷ್ಟು ವಾರ್ಷಿಕ ಬಡ್ಡಿ ದರ ಇರುತ್ತದೆ. ಇದೇ ಅವಧಿಗೆ ಬೇರೆ ಸಾಮಾನ್ಯ ಎಫ್ಡಿಗಳಲ್ಲಿ ಸಿಗುವ ಬಡ್ಡಿ ಶೇ. 4.5ರಿಂದ ಶೇ. 6ರಷ್ಟು ಮಾತ್ರ.
ಸರ್ಕಾರವೇ ವಿತರಿಸುವ ಸಾಲಪತ್ರವಾದ್ದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಉತ್ತಮ ಬಡ್ಡಿಯನ್ನೂ ಕೊಡುತ್ತದೆ. ಎಫ್ಡಿಯಲ್ಲಿ ಎಷ್ಟು ಬೇಕಾದರೂ ಹಣವನ್ನು ಠೇವಣಿಗೆ ಇಡಬಹುದು. ಆದರೆ, ಟ್ರೆಷರಿ ಬಿಲ್ನಲ್ಲಿ ಕನಿಷ್ಠ ಹೂಡಿಕೆ 25,000 ರೂ ಇರಬೇಕು.
ಆದರೆ ಎಫ್ಡಿಯಲ್ಲಿ ಟಿಡಿಎಸ್ ಮುರಿದುಕೊಳ್ಳುವಂತೆ ಟ್ರೆಷರಿ ಬಿಲ್ನಿಂದ ಬರುವ ಆದಾಯವನ್ನು ಅಲ್ಪಾವಧಿ ಲಾಭ ಹೆಚ್ಚಳ ಎಂದು ಪರಿಗಣಿಸಿ ಅದಕ್ಕೆ ತೆರಿಗೆ ಹಾಕಲಾಗುತ್ತದೆ.
ಇದನ್ನೂ ಓದಿ: LIC Loan: ಎಲ್ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ನೀವು ಟ್ರೆಷರಿ ಬಿಲ್ ಪಡೆಯಬೇಕಾದರೆ ಡೀಮ್ಯಾಟ್ ಅಕೌಂಟ್ ಹೊಂದಿರಬೇಕು. ಆರ್ಬಿಐ ಪ್ರತೀ ವಾರ ನಡೆಸುವ ಹರಾಜಿನಲ್ಲಿ ಇದನ್ನು ಖರೀದಿಸಬಹುದು. ಹೂಡಿಕೆದಾರ ನೇರವಾಗಿ ಹರಾಜಿನಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಬ್ಯಾಂಕ್ ಅಥವಾ ಬ್ರೋಕರ್ ಮೂಲಕ ಈ ಬಾಂಡ್ಗಳನ್ನು ಪಡೆಯಬಹುದು. ನಂತರ ಬೇಕಾದರೆ ಈ ಟ್ರೆಷರಿ ಬಿಲ್ಗಳನ್ನು ಎನ್ಎಸ್ಇ, ಬಿಎಸ್ಇ ಇತ್ಯಾದಿ ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು. ಈ ಬಿಲ್ಗಳು ಮೆಚ್ಯೂರ್ ಆಗುವ ಮುನ್ನ ಅವನ್ನು ಮಾರಿ ಹಣ ಪಡೆದುಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ