ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ (EPS- Employees Pension Scheme) ಅಡಿಯಲ್ಲಿ ನಿಗದಿಗಿಂತ ಹೆಚ್ಚು ಪಿಂಚಣಿಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ ಇದೆ. ಮೇ 3ರವರೆಗೆ ಮಾತ್ರ ಗಡುವು ಇದ್ದು, ಹಲವು ಉದ್ಯೋಗಿಗಳಲ್ಲಿ ಈಗಲೂ ಕೆಲ ಗೊಂದಲಗಳು ಮನೆ ಮಾಡಿವೆ. ಈ ಮಧ್ಯೆ ಅಧಿಕ ಪಿಂಚಣಿಗೆ (Higer Pension) ಉದ್ಯೋಗಿಗಳು ಹಾಗೂ ಅವರು ಕೆಲಸ ಮಾಡುವ ಸಂಸ್ಥೆಗಳು ಸಲ್ಲಿಸಿರುವ ವೇತನ ವಿವರ ಮತ್ತಿತರ ಮಾಹಿತಿಯನ್ನು ಪರಿಶೀಲಿಸುವ ಸಂಬಂಧ ಇಪಿಎಫ್ಒ ಹೊಸ ವಿಧಾನವನ್ನು ಕೆಲ ದಿನಗಳ ಹಿಂದೆ ಪ್ರಕಟಿಸಿದೆ. ಅದರಂತೆ, ಹೆಚ್ಚುವರಿ ಪಿಂಚಣಿಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಫೀಲ್ಡ್ ಆಫೀಸ್ನಿಂದ ಪರಿಶೀಲನೆ ಆಗಲಿದೆ. ಉದ್ಯೋಗದಾತರು (Employer) ಸಲ್ಲಿಸಿದ ವೇತನ ವಿವರ ಇತ್ಯಾದಿ ಮಾಹಿತಿಯನ್ನು ಫೀಲ್ಡ್ ಆಫೀಸ್ನಲ್ಲಿರುವ ದತ್ತಾಂಶದ ಜೊತೆ ಹೋಲಿಕೆ ಮಾಡಿ ಈ ಪರಿಶೀಲನೆ ಕಾರ್ಯ ನಡೆಯಲಿದೆ.
ಇಪಿಎಫ್ ಬೇರೆ ಮತ್ತು ಇಪಿಎಸ್ ಬೇರೆ. ಇಪಿಎಸ್ ಸ್ಕೀಮ್ ಪಡೆಯಬೇಕೆಂದರೆ ಇಪಿಎಫ್ ಸದಸ್ಯರಾಗಿರಬೇಕು. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣವನ್ನು (ಬೇಸಿಕ್ ಸಂಬಳದ ಶೇ. 12) ಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಕಂಪನಿಯೂ ಈ ಖಾತೆಗೆ ಹಾಕುತ್ತದೆ. ಆದರೆ, ಕಂಪನಿಯ ಕೊಡುಗೆಯಲ್ಲಿ ಒಂದಿಷ್ಟು ಭಾಗವು ಇಪಿಎಫ್ ಖಾತೆಗೆ ಹೋದರೆ, ಮಿಕ್ಕ ಭಾಗವು (ಶೇ. 8.33) ಆ ಉದ್ಯೋಗಿಯ ಪೆನ್ಷನ್ ಖಾತೆಗೆ (ಇಪಿಎಸ್) ಹೋಗುತ್ತದೆ.
ಇದನ್ನೂ ಓದಿ: EPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು
ಸದ್ಯ ಇಪಿಎಸ್ ಖಾತೆಗೆ ಗರಿಷ್ಠ ಸಂಬಳ ಮಿತಿ 15,000 ರೂ ಎಂದು ನಿಗದಿ ಮಾಡಲಾಗಿದೆ. ಅಂದರೆ 25,000 ರೂ ಸಂಬಳ ಇದ್ದರೂ 15,000 ರೂ ಸಂಬಳವನ್ನು ಮಾತ್ರ ಇಪಿಎಸ್ ಕೊಡುಗೆಗೆ ಪರಿಗಣಿಸಲಾಗುತ್ತದೆ. ಅಂದರೆ ಪ್ರತೀ ತಿಂಗಳು ಇಪಿಎಸ್ ಖಾತೆಗೆ ಗರಿಷ್ಠ 1,250ರವರೆಗೂ ಹಣ ಜಮೆ ಆಗುತ್ತದೆ. ಇಪಿಎಸ್ ಸ್ಕೀಮ್ ಅನ್ನು ಉದ್ಯೋಗಿಯ ನಿವೃತ್ತಿ ನಂತರ ಪಿಂಚಣಿಗೆಂದು ಮಾಡಿಸಲಾಗಿರುವ ಯೋಜನೆ.
ಈಗ 15,000 ರೂಗಿಂತ ಹೆಚ್ಚು ಮೂಲವೇತನ ಇರುವ ಉದ್ಯೋಗಿಯ ಇಪಿಎಸ್ ಖಾತೆಗೆ ಎಷ್ಟು ಹೆಚ್ಚುವರಿ ಹಣ ಹಾಕಬಹುದು ಎಂಬ ವಿಚಾರದ ಬಗ್ಗೆ ಗೊಂದಲ ಇದೆ. 20,000 ಸಂಬಳ ಇರುವ ಜನರಿಗೆ ಈಗ 15,000 ರೂ ಸಂಬಳದ ಲೆಕ್ಕದಲ್ಲಿ ಪಿಂಚಣಿ ಕೊಡುಗೆ ನೀಡಲಾಗುತ್ತಿದೆ. ಹೆಚ್ಚುವರಿ 5,000 ರೂಗೆ ಯಾವ ರೀತಿಯ ಗಣಿಸುವುದು ಎಂಬ ಗೊಂದಲ ಇದೆ. ಈ ಬಗ್ಗೆ ಇಪಿಎಫ್ಒದಿಂದ ಸ್ಪಷ್ಟ ನೀತಿ ಪ್ರಕಟವಾಗಿಲ್ಲ.
ಇನ್ನು, ಹೆಚ್ಚುವರಿ ಪಿಂಚಣಿ ಯೋಜನೆಗೆ ಎಲ್ಲಾ ಉದ್ಯೋಗಿಗಳೂ ಅರ್ಹರಲ್ಲ ಎಂಬುದನ್ನು ಮೊದಲು ನೆನಪಿನಲ್ಲಿಡಿ. 2014 ಸೆಪ್ಟೆಂಬರ್ 1ಕ್ಕೆ ಮುಂಚಿನಿಂದಲೇ ಇಪಿಎಫ್ ಖಾತೆಯನ್ನು ಹೊಂದಿರುವ ಉದ್ಯೋಗಿಗಳು ಮಾತ್ರ ಅಧಿಕ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ. 2014 ಸೆಪ್ಟೆಂಬರ್ 1ರ ಬಳಿಕ ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರು ಅಥವಾ ಅದೇ ಮೊದಲ ಬಾರಿಗೆ ಇಪಿಎಫ್ ಯೋಜನೆಗೆ ಬಂದವರು ಹೆಚ್ಚುವರಿ ಇಪಿಎಸ್ಗೆ ಅರ್ಹರಿರುವುದಿಲ್ಲ.
ಇದನ್ನೂ ಓದಿ: EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್ಗೂ ವಿಪಿಎಫ್ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ
ಮೇಲೆ ಹೇಳಿದ ಅರ್ಹತಾ ಮಾನದಂಡಕ್ಕೆ ತಾಳೆಯಾಗುವ ಉದ್ಯೋಗಿಗಳೆಲ್ಲರೂ ಇಪಿಎಫ್ಒ ಪೋರ್ಟಲ್ಗೆ ಹೋಗಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು. ಇದರ ಲಿಂಕ್ ಇಲ್ಲಿದೆ:
ಅರ್ಜಿ ಸಲ್ಲಿಸಿದ ಬಳಿಕ ಇಪಿಎಫ್ಒ ಅಧಿಕಾರಿಯಿಂದ ವೆರಿಫಿಕೇಶನ್ ಕಾರ್ಯ ಆಗುತ್ತದೆ. ಎಲ್ಲಾ ವಿವರ ಸರಿ ಇದ್ದರೆ ಅಧಿಕ ಪಿಂಚಣಿಗೆ ಎಷ್ಟು ಕೊಡುಗೆ ಬಾಕಿ ಇದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಈ ಬಾಕಿ ಹಣ ವರ್ಗಾವಣೆಗೆ ಆದೇಶ ಹೊರಡಿಸಲಾಗುತ್ತದೆ. ಮಾಹಿತಿಯಲ್ಲಿ ವ್ಯತ್ಯಾಸ ಇದ್ದರೆ ಉದ್ಯೋಗಿ ಹಾಗೂ ಸಂಸ್ಥೆಗೆ ಇದನ್ನು ಸರಿಪಡಿಸಲು ಒಂದು ತಿಂಗಳು ಗಡುವು ಕೊಡಲಾಗುತ್ತದೆ. ಈಗ ಅಧಿಕ ಪಿಂಚಣಿಗೆ ಎಷ್ಟು ಪ್ರತಿಶತದಷ್ಟು ಕೊಡುಗೆ ಇರಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಮೇ 3ರೊಳಗೆ ಅರ್ಜಿ ಸಲ್ಲಿಸುವ ಕೆಲಸ ಮುಗಿಯಬೇಕು.
ಸರ್ಕಾರಿಂದ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ನೋಡಬಹುದು. ಸುಕನ್ಯ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಹಲವು ಸ್ಕೀಮ್ಗಳಿವೆ. ಆದರೆ, ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಅತ್ಯಧಿಕ ಬಡ್ಡಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಉದ್ಯೋಗಿಯ ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸರ್ಕಾರ ಪ್ರತೀ ವರ್ಷ ಶೇ. 8.15ರಷ್ಟು ಬಡ್ಡಿ ಹಣವನ್ನು ತುಂಬುತ್ತದೆ.
Published On - 12:07 pm, Fri, 28 April 23