ನವದೆಹಲಿ, ಡಿಸೆಂಬರ್ 13: ಕಳೆದ ಹಣಕಾಸು ವರ್ಷದ (2022-23ರದ್ದು) ಆದಾಯ ತೆರಿಗೆ ರಿಟರ್ನ್ಸ್ ಅನ್ನು (Income tax return) ಇನ್ನೂ ಸಲ್ಲಿಸದೇ ಇರುವವರಿಗೆ ಕೊನೆಯ ಅವಕಾಶ ಸಮೀಪಿಸುತ್ತಿದೆ. 2023ರ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇದೆ. ಈ ಅಂತಿಮ ವಾಯಿದೆಯೊಳಗೆ (deadline) ಐಟಿಆರ್ ಸಲ್ಲಿಸದೇ ಹೋದರೆ ಹೆಚ್ಚಿನ ಮೊತ್ತದ ದಂಡ, ಶುಲ್ಕ, ಬಡ್ಡಿ ಇತ್ಯಾದಿಗಳನ್ನು ತೆರಬೇಕಾಗುತ್ತದೆ.
ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಅದಾದ ಬಳಿಕ ಡಿಸೆಂಬರ್ 31ರವರೆಗೂ ವಿಳಂಬವಾಗಿ ರಿಟರ್ನ್ ಫೈಲ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಐಟಿ ಪಾವತಿದಾರರಿಗೂ ಇದು ಡೆಡ್ಲೈನ್ ಆಗಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಎಫ್ ಪ್ರಕಾರ ಅಂತಿಮ ವಾಯಿದೆಯೊಳಗೆ ರಿಟರ್ನ್ಸ್ ಫೈಲ್ ಮಾಡದೇ ಹೋದರೆ ಲೇಟ್ ಫೈಲಿಂಗ್ ಶುಲ್ಕ ಪಾವತಿಸಬೇಕು. ಹಾಗೆಯೇ, 5,000 ರೂನಷ್ಟು ದಂಡ ತೆರಬೇಕಾಗುತ್ತದೆ. ಐದು ಲಕ್ಷ ರೂ ಒಳಗೆ ವಾರ್ಷಿಕ ಆದಾಯ ಹೊಂದಿರುವವರಿಗಾದರೆ ದಂಡದ ಮೊತ್ತ 1,000 ರೂ ಇರುತ್ತದೆ. ಉಳಿದವರು ಐದು ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ಆಧಾರ್ ಡೆಡ್ಲೈನ್ ವಿಸ್ತರಣೆ: 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆ ಅಪ್ಡೇಟ್ ಮಾಡಲು ಅವಕಾಶ
ಡಿಸೆಂಬರ್ 31ರೊಳಗೆ ಐಟಿ ರಿಟರ್ನ್ಸ್ ಫೈಲ್ ಮಾಡದೇ ಇರುವವರಿಗೆ ಐಟಿ ಕಾಯ್ದೆ ಸೆಕ್ಷನ್ 234ಎ ಅಡಿಯಲ್ಲಿ ಬಡ್ಡಿ ಕಟ್ಟಬೇಕಾಗುತ್ತದೆ. ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಪ್ರತೀ ತಿಂಗಳು ಶೇ. 1ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
ಇನ್ನೊಂದು ಮುಖ್ಯ ಸಂಗತಿ ಎಂದರೆ, ಐಟಿಆರ್ ಫೈಲ್ ಮಾಡದೇ ಹೋದರೆ ಈಗಿನ ಪ್ರಸಕ್ತ ಅಸೆಸ್ಮೆಂಟ್ ವರ್ಷದ ನಷ್ಟವನ್ನು ಮುಂದಿನ ವರ್ಷದಕ್ಕೆ ವರ್ಗಾಯಿಸಲು ಆಗುವುದಿಲ್ಲ. ತೆರಿಗೆ ಮೊತ್ತದ ಶೇ. 50ರಿಂದ ಶೇ. 200ರವರೆಗಿನ ಹಣವನ್ನು ದಂಡವಾಗಿ ಹೇರಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ