ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಯೋಜನೆ (EPFO) ಉದ್ಯೋಗಿಗಳ ಭವಿಷ್ಯಕ್ಕೆಂದು ರೂಪಿಸಿದೆ. ವೇತನ ಪಡೆಯುವ ನೌಕರರಿಗೆ ಕಂಪನಿ ವತಿಯಿಂದ ಇಪಿಎಫ್ಒನಲ್ಲಿ ಖಾತೆ ತೆರೆಯಲಾಗುತ್ತದೆ. ಇದರಲ್ಲಿ ವೇತನದ ಶೇ. 12ರಷ್ಟು ಹಣವನ್ನು ಕಡಿತ ಮಾಡಿ ಈ ಖಾತೆಗೆ ವರ್ಗಾಯಿಸಲಾಗುತ್ತದೆ. ಕಂಪನಿಯೂ ಕೂಡ ಶೇ. 12ರಷ್ಟು ಹಣವನ್ನು ಪ್ರತ್ಯೇಕವಾಗಿ ಈ ಖಾತೆಗೆ ತುಂಬುತ್ತದೆ. ಇದು ಆ ಉದ್ಯೋಗಿ ಅಲ್ಲಿ ಕೆಲಸ ಮಾಡುವವರೆಗೂ ಪ್ರತೀ ತಿಂಗಳು ನಡೆಯುವ ಕ್ರಿಯೆ. ಈ ಖಾತೆಗೆ ಕೇಂದ್ರ ಸರ್ಕಾರ ಪ್ರತೀ ವರ್ಷ ಅಷ್ಟೂ ಮೊತ್ತಕ್ಕೆ ಬಡ್ಡಿ ಹಣ ಸೇರಿಸುತ್ತದೆ. ಒಂದು ವೇಳೆ ಉದ್ಯೋಗಿ ಬೇರೆ ಕೆಲಸಕ್ಕೆ ಸೇರಿದರೆ ಅಲ್ಲಿ ಇನ್ನೊಂದು ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಹೀಗೆ ಒಬ್ಬ ಉದ್ಯೋಗಿ ತನ್ನ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಬಹುದು. ಯುಎಎನ್ ನಂಬರ್ ಅಡಿಯಲ್ಲಿ ಈ ಎಲ್ಲಾ ಖಾತೆಗಳು ಇರುತ್ತವೆ.
ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಹೊಂದಿರುವವರು ಒಂದು ವಿಷಯ ಗಮನದಲ್ಲಿರಿಸಿಕೊಳ್ಳಬೇಕು. ಸರ್ಕಾರ ವರ್ಷಕ್ಕೊಮ್ಮೆ ಸೇರಿಸುವ ಬಡ್ಡಿ ಎಲ್ಲಾ ಖಾತೆಗಳಿಗೂ ಅನ್ವಯ ಆಗುವುದಿಲ್ಲ. ಒಂದು ಪಿಎಫ್ ಖಾತೆಗೆ 3 ವರ್ಷ ಕಾಲ ಯಾವುದೇ ಕೊಡುಗೆ ಇರದೇ ಇದ್ದರೆ ಆಗ ಬಡ್ಡಿ ಬರುವುದು ನಿಂತು ಹೋಗುತ್ತದೆ. ಅಂದರೆ ನೀವು ಕೆಲಸ ಬಿಟ್ಟು 3 ವರ್ಷಗಳವರೆಗೂ ನಿಮ್ಮ ಖಾತೆಗೆ ಬಡ್ಡಿ ಜಮೆ ಆಗುತ್ತದೆ. ಅದಾದ ಬಳಿಕ ಬಡ್ಡಿ ನಿಂತುಹೋಗುತ್ತದೆ.
ನೀವು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಾಯಿಸಿದಾಗ ಹೊಸ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆ ಸಮಯದಲ್ಲಿ ನೀವು ಹಿಂದಿನ ಕಂಪನಿಯ ಪಿಎಫ್ ಖಾತೆಯನ್ನು ಹೊಸ ಪಿಎಫ್ ಖಾತೆಯೊಂದಿಗೆ ವಿಲೀನಗೊಳಿಸಬೇಕು. ಆಗ ನಿಮಗೆ ಬಡ್ಡಿ ಹಣ ಕೈತಪ್ಪುವುದಿಲ್ಲ.
ಇದನ್ನೂ ಓದಿ: EPF Interest Rate: ಇಪಿಎಫ್ ಹಣಕ್ಕೆ ಶೇ. 8.15 ಬಡ್ಡಿ ಜಮೆ ಆಗುವುದು ಯಾವಾಗ? ಬಡ್ಡಿ ಲೆಕ್ಕಾಚಾರ ಹೇಗೆ?
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ