ನೇರ ಸೆಬಿಯಿಂದಲೇ ಹೂಡಿಕೆ ವಿದ್ಯೆ ಕಲಿಯಿರಿ; ಪರೀಕ್ಷಾ ಶುಲ್ಕ ಇಲ್ಲ, ಸ್ಟಡಿ ಮೆಟೀರಿಯಲ್ ಕೂಡ ಉಚಿತ
SEBI free trading course and exam: ಷೇರು ಮಾರುಕಟ್ಟೆ, ಹಣಕಾಸು ನಿರ್ವಹಣೆ ಇತ್ಯಾದಿ ಬಗ್ಗೆ ಸೆಬಿ ಸಂಸ್ಥೆಯೇ ಸಾರ್ವತ್ರಿಕವಾಗಿ ತರಬೇತಿ ಕೊಡಲಿದೆ. ಸೆಬಿ ನಡೆಸುತ್ತಿರುವ ಆನ್ಲೈನ್ ಕೋರ್ಸ್ ಮತ್ತು ಪರೀಕ್ಷೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಕೋರ್ಸ್ ಮೆಟೀರಿಯಲ್ ಮತ್ತು ಪರೀಕ್ಷಾ ಶುಲ್ಕ ಎಲ್ಲವೂ ಉಚಿತವಾಗಿರುತ್ತದೆ. ಹೂಡಿಕೆಯಲ್ಲಿ ಇರುವ ರಿಸ್ಕ್ ಇವೆಲ್ಲವನ್ನೂ ಈ ಕೋರ್ಸ್ನಲ್ಲಿ ತಿಳಿಸಿಕೊಡಲಾಗುತ್ತದೆ.
ನವದೆಹಲಿ, ಜೂನ್ 12: ಷೇರು ಮಾರುಕಟ್ಟೆ ಬಹಳಷ್ಟು ಜನರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಸಾಕಷ್ಟು ಏರುತ್ತಿರುವ ಕಾರಣಕ್ಕೆ ಷೇರುಪೇಟೆಯಲ್ಲಿ (stock market) ಲಾಭ ಮಾಡಿಕೊಂಡವರ ಸಂಖ್ಯೆ ಬಹಳ ಹೆಚ್ಚಿದೆ. ಲಾಭದ ಆಸೆಯಲ್ಲಿ ಮಾರುಕಟ್ಟೆ ಬರುವವರೇ ಹೆಚ್ಚು. ಇಲ್ಲಿ ನಷ್ಟದ ಸಾಧ್ಯತೆಯೂ ಇರುವುದರಿಂದ ಹೂಡಿಕೆದಾರರಿಗೆ ಸರಿಯಾದ ತಿಳಿವಳಿಕೆ ಇರುವುದು ಅವಶ್ಯಕ. ಪರಿಣಿತರ ಸಹಾಯವಿಲ್ಲದೇ ಸ್ವಯಂ ಆಗಿ ಹೂಡಿಕೆ ಮಾಡುವವರಿಗೆ ಹೆಚ್ಚು ರಿಸ್ಕ್ ಇದ್ದೇ ಇರುತ್ತದೆ. ಇವರಿಗೆ ಷೇರು ಮಾರುಕಟ್ಟೆ ಹಾಗೂ ಅದರಲ್ಲಿ ಹೂಡಿಕೆ ಮಾಡುವ ಬಗ್ಗೆ ಅರಿವು ಮೂಡಿಸಲು ಸೆಬಿ ಸಂಸ್ಥೆಯೇ ತರಬೇತಿ ನೀಡುತ್ತಿದೆ. ಅದೂ ಸಂಪೂರ್ಣ ಉಚಿತವಾಗಿ.
ಷೇರು ಮಾರುಕಟ್ಟೆ ಮತ್ತು ಹೂಡಿಕೆ ಬಗ್ಗೆ ಸರ್ಟಿಫಿಕೇಶನ್ ಕೋರ್ಸ್ ಅನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ (NISM) ಸಹಯೋಗದಲ್ಲಿ ಸೆಬಿ ಆಫರ್ ಮಾಡಿದೆ. ಇದರ ಕೋರ್ಸ್ ಮೆಟೀರಿಯಲ್ ಪೂರ್ಣ ಉಚಿತವಾಗಿ ಸಿಗುತ್ತದೆ. ಶುಲ್ಕ ರಹಿತವಾಗಿ ಆನ್ಲೈನ್ನಲ್ಲಿ ಪರೀಕ್ಷೆ ಇರಲಿದ್ದು, ಅದರಲ್ಲಿ ತೇರ್ಗಡೆಯಾದರೆ ಸೆಬಿಯಿಂದ ಸರ್ಟಿಫಿಕೇಟ್ ಸಿಗುತ್ತದೆ.
ಇದನ್ನೂ ಓದಿ: ಝೀರೋಧದಲ್ಲಿ ಈಕ್ವಿಟಿ ಹೂಡಿಕೆದಾರರು ನಾಲ್ಕು ವರ್ಷದಲ್ಲಿ ಪಡೆದ ಲಾಭ 50,000 ಕೋಟಿ ರೂ: ನಿತಿನ್ ಕಾಮತ್
ಷೇರು ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರವಾಗಿರುವ ಸೆಬಿ ನಿನ್ನೆ (ಜೂನ್ 11) ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಇದರ ಕೋರ್ಸ್ ಮೆಟೀರಿಯಲ್ ಮತ್ತು ಪರೀಕ್ಷೆಗಳಿಗೆ ಲಿಂಕ್ ಈ ಕೆಳಕಾಣಿಸಿದಂತೆ ಇವೆ:
www.nism.ac.in/sebi-investor-certification-examination/
‘ಹೂಡಿಕೆ ಪ್ರಕ್ರಿಯೆಗಳು ಹೇಗೆ ಇರುತ್ತವೆ, ಸೆಕ್ಯೂರಿಟೀಸ್ ಮಾರ್ಕೆಟ್ನಲ್ಲಿ ಸಂಭಾವ್ಯ ಅಪಾಯಗಳೇನು ಎಂಬ ತಿಳಿವಳಿಕೆ ಹೂಡಿಕೆದಾರರಿಗೆ ಸಿಗುತ್ತದೆ. ಸರಿಯಾದ ಕ್ರಮದಲ್ಲಿ ಹೂಡಿಕೆ ಮಾಡಲು ಸಹಾಯವಾಗುತ್ತದೆ,’ ಎಂದು ಈ ಸರ್ಟಿಫಿಕೇಟ್ ಕೋರ್ಸ್ ಮತ್ತು ಆನ್ಲೈನ್ ಎಕ್ಸಾಂ ಬಗ್ಗೆ ಸೆಬಿ ಸದಸ್ಯ ಅನಂತನಾರಾಯಣ್ ಜಿ ಹೇಳಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ
ಸೆಬಿ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಏನೆಲ್ಲಾ ಕಲಿಯಬಹುದು?
- ಉಳಿತಾಯ, ಹೂಡಿಕೆ, ಬಜೆಟಿಂಗ್, ಇನ್ಫ್ಲೇಷನ್ ಇತ್ಯಾದಿ ಹಣಕಾಸು ಮೂಲ ತತ್ವಗಳನ್ನು ತಿಳಿಯಬಹುದು
- ಸರ್ಕಾರದ ವಿವಿಧ ಸ್ಕೀಮ್ಗಳ ಬಗ್ಗೆ ಅರಿವು ಬರಲಿದೆ
- ಸೆಕ್ಯೂರಿಟೀಸ್ ಮಾರ್ಕೆಟ್ಗಳ ಸ್ವರೂಪ ಏನು ಎಂಬ ತಿಳಿವಳಿಕೆ ಸಿಗುತ್ತದೆ. ಪ್ರೈಮರಿ ಮಾರ್ಕೆಟ್, ಸೆಕೆಂಡರಿ ಮಾರ್ಕೆಟ್ ಇತ್ಯಾದಿ ಏನು ಎಂದು ತಿಳಿಯಬಹುದು.
- ಷೇರು ವಿನಿಮಯ ಕೇಂದ್ರಗಳು, ಡೆಪಾಸಿಟರಿ ಸಂಸ್ಥೆಗಳು, ಬ್ರೋಕರ್ ಸಂಸ್ಥೆಗಳು, ರೆಗ್ಯುಲೇಟರಿ ಸಂಸ್ಥೆ ಇತ್ಯಾದಿ ಬಗ್ಗೆ
- ಷೇರು ಮಾರುಕಟ್ಟೆಯಲ್ಲಿ ಬಳಸಲಾಗುವ ಹೆಡ್ಜಿಂಗ್, ಡೈವರ್ಸಿಫಿಕೇಶನ್ ಇತ್ಯಾದಿ ತಂತ್ರಗಳು
- ಹೂಡಿಕೆ ಕ್ರಮಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯ ಮಹತ್ವ.
- ಹೂಡಿಕೆದಾರರಿಗೆ ಇರುವ ಜವಾಬ್ದಾರಿ, ಹಕ್ಕು, ವ್ಯಾಜ್ಯ ಪರಿಹಾರ ವ್ಯವಸ್ಥೆ ಮೊದಲಾದವನ್ನು ತಿಳಿಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ