ಮ್ಯೂಚುವಲ್ ಫಂಡ್ ಎಸ್ಐಪಿ ಆರಂಭಿಸಿ, ಮಧ್ಯದಲ್ಲಿ ನಿಲ್ಲಿಸಬಹುದಾ? ಕ್ರಮ, ದಂಡ ಇತ್ಯಾದಿ ವಿವರ
How To Cancel, Pause, Stop SIP Mid-way: ಮ್ಯುಚುವಲ್ ಫಂಡ್ ಎಸ್ಐಪಿಯಲ್ಲಿ ನಾವು ಪ್ರತೀ ತಿಂಗಳು ಹೂಡಿಕೆ ಮಾಡುತ್ತಿರುತ್ತೇವೆ. ಕೆಲವೊಮ್ಮೆ ನಾವು ಮಧ್ಯದಲ್ಲಿ ಸ್ಕೀಮ್ ಅನ್ನು ನಿಲ್ಲಿಸಬೇಕಾಗಬಹುದು. ಅದಕ್ಕೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಅವಕಾಶ ಕೊಡುತ್ತವೆ.
ಮ್ಯೂಚುವಲ್ ಫಂಡ್ ಎಸ್ಐಪಿಗಳು (Mutual Fund SIP) ಈಗ ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ. ಎಸ್ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಷೇರುಗಳಂತಹ ಈಕ್ವಿಟಿ ಮಾರುಕಟ್ಟೆ ಅಥವಾ ಗವರ್ನ್ಮೆಂಟ್ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗಳ ಮೇಲೆ ಹಣ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್ಗಳು ಎಸ್ಐಪಿ ಸ್ಕೀಮ್ಗಳನ್ನು ಆಫರ್ ಮಾಡುತ್ತವೆ. ನೀವು ಯಾವುದಾದರೂ ನಿರ್ದಿಷ್ಟ ಮೊತ್ತದ ಮತ್ತು ನಿರ್ದಿಷ್ಟ ಅವಧಿಗೆ ಎಸ್ಐಪಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ತಿಂಗಳಿಗೆ 10,000 ರೂನಂತೆ 20 ವರ್ಷದವರೆಗಿನ ಎಸ್ಐಪಿ ಪಡೆಯಬಹುದು.
ನೀವು ಮೇಲಿನ ಉದಾಹರಣೆಯಂತೆ ಎಸ್ಐಪಿ ಪಡೆದರೆ ಅಷ್ಟೂ ವರ್ಷ ನೀವು ಹೂಡಿಕೆ ಮಾಡುತ್ತಿರಬೇಕು. ಆರ್ಡಿಯಲ್ಲಿರುವಂತೆ ಇಲ್ಲಿಯೂ ಕೂಡ ನಿಮ್ಮ ಎಸ್ಐಪಿ ಹಣವು ಪ್ರತೀ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತ ಆಗುತ್ತಿರುತ್ತದೆ.
ಎಸ್ಐಪಿಯನ್ನು ರದ್ದಪಡಿಸುವುದು ಹೇಗೆ?
ಮ್ಯೂಚವಲ್ ಫಂಡ್ ಎಸ್ಐಪಿ ಸ್ಕೀಮ್ ಅನ್ನು ನೀವು ರದ್ದುಪಡಿಸಲು ಸಾಧ್ಯ. ಸ್ಕೀಮ್ನಲ್ಲಿ ನಿರ್ದಿಷ್ಟ ಲಾಕ್ ಇನ್ ಅವಧಿ ಇರುತ್ತದೆ. ಆ ಅವಧಿ ಕಳೆದ ಬಳಿಕ ನೀವು ಯಾವಾಗ ಬೇಕಾದರೂ ಸ್ಕೀಮ್ ರದ್ದು ಮಾಡಬಹುದು.
ಇದನ್ನೂ ಓದಿ: SIP: ಕ್ವಾಂಟ್ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ನಲ್ಲಿ 10,000 ರೂ ಎಸ್ಐಪಿ; 25 ವರ್ಷದಲ್ಲಿ 3 ಕೋಟಿ ಸಂಪತ್ತು
ನಿಮ್ಮ ಮ್ಯುಚುವಲ್ ಫಂಡ್ನ ವೆಬ್ಸೈಟ್ಗೆ ಲಾಗಿನ್ ಆಗಿ, ನಿಮ್ಮ ಎಸ್ಐಪಿಯನ್ನು ಆಯ್ದುಕೊಂಡು ‘ಕ್ಯಾನ್ಸಲ್ ಎಸ್ಐಪಿ’ ಅನ್ನು ಕ್ಲಿಕ್ ಮಾಡಿದರೆ ಎಸ್ಐಪಿ ರದ್ದಾಗುತ್ತದೆ.
ನೀವು ಎಸ್ಐಪಿ ರದ್ದು ಮಾಡಿದರೂ ಆವರೆಗಿನ ಹೂಡಿಕೆ ಹಾಗೆಯೇ ಮುಂದುವರಿಯುತ್ತದೆ. ಮುಂದಿನ ಕಂತು ಹಣ ನಿಮ್ಮ ಖಾತೆಯಿಂದ ಡೆಬಿಟ್ ಆಗುವುದು ಮಾತ್ರ ನಿಲ್ಲುತ್ತದೆ.
ಎಸ್ಐಪಿಯನ್ನೇ ಪೂರ್ತಿ ನಿಲ್ಲಿಸಲು ಸಾಧ್ಯವಿಲ್ಲವಾ?
ಎಸ್ಐಪಿ ಸ್ಕೀಮ್ ಅನ್ನು ಕ್ಯಾನ್ಸಲ್ ಮಾಡಿದರೆ ಭವಿಷ್ಯದ ಕಂತುಗಳನ್ನು ಕಟ್ಟುವುದು ನಿಂತುಹೋಗುತ್ತದೆ ಅಷ್ಟೇ. ಆದರೆ, ಎಸ್ಐಪಿಯನ್ನೇ ಪೂರ್ತಿಯಾಗಿ ನಿಲ್ಲಿಸಿ ನಾವು ಆವರೆಗೂ ಕಟ್ಟಿರುವ ಹಣವನ್ನೂ ಹಿಂಪಡೆಯಲು ಸಾಧ್ಯ. ನಿಮ್ಮ ಮ್ಯುಚುವಲ್ ಪಂಡ್ ಏಜೆಂಟ್ ಮುಖಾಂತರ ಕ್ಯಾನ್ಸಲೇಶನ್ ರಿಕ್ವೆಸ್ಟ್ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪರ್ಯಾಯವಾಗಿ, ನೀವು ಎಸ್ಐಪಿಗೆ ಇಸಿಎಸ್ ಮುಖಾಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ಸಕ್ರಿಯಗೊಳಿಸಿದ್ದರೆ ಆಗ ಬ್ಯಾಂಕ್ಗೆ ಮನವಿ ಮಾಡಿ, ಇಸಿಎಸ್ ಸೌಲಭ್ಯವನ್ನು ಡೀಆ್ಯಕ್ಟಿವೇಟ್ ಮಾಡಿಸಬೇಕು. ನಂತರ ಮ್ಯೂಚುವಲ್ ಫಂಡ್ ಸಂಸ್ಥೆಗೂ ಅದರ ಮಾಹಿತಿ ನೀಡಬೇಕು. ಅದಕ್ಕಾಗಿ ಮ್ಯೂಚುವಲ್ ಫಂಡ್ ಸಂಸ್ಥೆಯ ಬಳಿ ಇರುವ ಸೂಕ್ತ ಅರ್ಜಿಯೊಂದನ್ನು ಬರ್ತಿ ಮಾಡಿ ತುಂಬಿಸಿ ಸಲ್ಲಿಸಬೇಕು. ಮೂರು ತಿಂಗಳ ಕಾಲ ಎಸ್ಐಪಿಗೆ ಇಸಿಎಸ್ ಮುಖಾಂತರ ಹಣ ಬರದೇ ಹೋದಾಗ ಅದು ತನ್ನಂತಾನೆ ಟರ್ಮಿನೇಟ್ ಆಗುತ್ತದೆ.
ಎಸ್ಐಪಿ ರದ್ದುಗೊಳಿಸುವ ಬದಲು ತಾತ್ಕಾಲಿಕವಾಗಿ ವಿರಾಮ ಕೊಡಿ
ಮ್ಯುಚುವಲ್ ಫಂಡ್ ಎಸ್ಐಪಿಯನ್ನು ರದ್ದುಗೊಳಿಸಲು ಹಣಕಾಸು ಸಂಕಷ್ಟ, ತುರ್ತು ಅಗತ್ಯ ಇತ್ಯಾದಿ ಕಾರಣಗಳಿರಬಹುದು. ನಿರ್ದಿಷ್ಟ ಅವಧಿಯವರೆಗೆ ನಮಗೆ ಎಸ್ಐಪಿ ಕಟ್ಟಲು ಸಾಕಷ್ಟು ಹಣ ಇಲ್ಲ ಎಂದಿದ್ದರೆ ತಾತ್ಕಾಲಿಕವಾಗಿ ಎಸ್ಐಪಿ ನಿಲ್ಲಿಸಲು ಸಾಧ್ಯ.
ಅದಕ್ಕಾಗಿ ಮ್ಯೂಚುವಲ್ ಫಂಡ್ ವೆಬ್ಸೈಟ್ನಲ್ಲಿ ನೀವು ‘ಪೌಸ್ ಎಸ್ಐಪಿ’ ಅನ್ನು ಕಾಣಬಹುದು. ಆ ಮೂಲಕ ನೀವು 6 ತಿಂಗಳವರೆಗೆ ಸ್ಕೀಮ್ ಅನ್ನು ನಿಲ್ಲಿಸಬಹುದು. ನೀವು ನಮೂದಿಸಿದ ಅವಧಿಯ ಬಳಿಕ ಎಸ್ಐಪಿ ಮತ್ತೆ ಚಾಲನೆಗೊಳ್ಳುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Mon, 31 July 23