ಮುಂಬೈ, ಮಾರ್ಚ್ 6: ನಿನ್ನೆ ನಡೆದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ (Money9 Financial Summit 2025) ದೇಶದ ಅತಿದೊಡ್ಡ ಹೂಡಿಕೆದಾರರಲ್ಲೊಬ್ಬರಾದ ವಿಜಯ್ ಕೇದಿಯಾ (Vijay Kedia) ಜೊತೆಗಿನ ಸಂವಾದ ಬಹಳ ಕುತೂಹಲ ಹುಟ್ಟಿಸಿತ್ತು. ಮಾರುಕಟ್ಟೆಯಲ್ಲಿ ಹೂಡಿಕೆಯ ಬಗ್ಗೆ ಇರುವ ಹಲವು ಅತಿಶಯೋಕ್ತಿ, ನಂಬಿಕೆಗಳ ಕಟ್ಟೆಗಳನ್ನು (myth busted) ಕೆದಿಯಾ ಒಡೆದುಹಾಕಿದರು. ತಮ್ಮ ಮೊನಚು ಮಾತುಗಳಿಂದ ಹಲವು ವಿಚಾರಗಳನ್ನು ಒರೆಗೆ ಹಚ್ಚಿ ವಾಸ್ತವ ಸಂಗತಿಯನ್ನು ತೋರಿಸಲು ಯತ್ನಿಸಿದರು. ಷೇರು ಮಾರುಕಟ್ಟೆ ಸತತ ಐದು ತಿಂಗಳು ಕುಸಿತ ಕಂಡ ಹಿನ್ನೆಲೆಯಲ್ಲಿ ವಿಜಯ್ ಕೆದಿಯಾ ಅವರ ವಿಚಾರಗಳು ಬಹಳಷ್ಟು ಹೂಡಿಕೆದಾರರಿಗೆ ಸಮಾಧಾನ ತರುವಂತಿದ್ದವು.
‘ಬುಲ್ ಮಾರ್ಕೆಟ್ಗಳಿಂದ ಮೂರ್ಖ ಹೂಡಿಕೆದಾರರು ಹುಟ್ಟುತ್ತಾರೆ. ಈ ಮೂರ್ಖ ಹೂಡಿಕೆದಾರರು ಬೇರ್ ಮಾರ್ಕೆಟ್ಗಳನ್ನು ಸೃಷ್ಟಿಸುತ್ತಾರೆ. ಈ ಬೇರ್ ಮಾರ್ಕೆಟ್ಗಳು ಜಾಣ ಹೂಡಿಕೆದಾರರನ್ನು ಸೃಷ್ಟಿಸುತ್ತವೆ. ಈ ಜಾಣ ಹೂಡಿಕೆದಾರರು ಬುಲ್ ಮಾರ್ಕೆಟ್ ನಿರ್ಮಿಸುತ್ತಾರೆ. ಇದು ಒಂದು ಲೈಫ್ ಸೈಕಲ್’ ಎಂದು ಹೇಳುತ್ತಾರೆ ವಿಜಯ್ ಕೆದಿಯಾ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಕೇಕಿ ಮಿಸ್ತ್ರಿ ಉತ್ತರ
ಬುಲ್ ಮಾರ್ಕೆಟ್ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಷೇರುಗಳ ಬೆಲೆ ಮೇಲೇರುತ್ತವೆ. ಸೂಚ್ಯಂಕಗಳು ನಾಗಾಲೋಟ ನಡೆಸುತ್ತವೆ. ಇದು ಗೂಳಿ ಓಟ. ಬೇರ್ ಮಾರ್ಕೆಟ್ ಎಂದರೆ ಕರಡಿ ನರ್ತನ. ಇಲ್ಲಿ ಮಾರುಕಟ್ಟೆ ಪತನದ ಹಾದಿಯಲ್ಲಿರುತ್ತದೆ. ಷೇರುಗಳ ಸತತ ಕುಸಿತ ಕಾಣಬಹುದು.
ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ವಿಜಯ್ ಕೆದಿಯಾ ಜೊತೆ ಮನಿ9 ಕನ್ಸಲ್ಟಿಂಗ್ ಎಡಿಟರ್ ಸುಮಿತ್ ಮೆಹ್ರೋತ್ರಾ ಸಂವಾದದಲ್ಲಿ ಪಾಲ್ಗೊಂಡಿದ್ದರು. ಇವರ ಸಂವಾದದಲ್ಲಿ ಕೆಲ ಖ್ಯಾತ ಇಂಗ್ಲೀಷ್ ಹಾಡುಗಳ ಝಲಕ ಕೇಳಿಬಂದಿತು. ಈ ಮಧ್ಯೆ ವಿಜಯ್ ಕೆದಿಯಾ ಅವರು ಕೆಲ ಮಿತ್ಗಳನ್ನು ಒಡೆಯಲು ಯತ್ನಿಸಿದರು. ಅವರ ಪ್ರಕಾರ ಮಾರ್ಕೆಟ್ ಟೈಮ್ ಮಾಡುತ್ತೇನೆ ಎನ್ನುವವರು ಮೂರ್ಖರು, ಸುಳ್ಳರು.
‘ನಿಖರವಾಗಿ ಮಾರುಕಟ್ಟೆಯ ಟೈಮಿಂಗ್ ಮಾಡುತ್ತೀನಿ ಎನ್ನುವುದೆಲ್ಲಾ ಸುಳ್ಳು. ಮಾರುಕಟ್ಟೆಯ ಒಳ ಹೊರಗು ನನಗೆ ತಿಳಿಯಲು ನಾನೇನು ದೇವರಲ್ಲ, ಅಥವಾ ಸುಳ್ಳನಲ್ಲ. ಅದು ಯಾರಿಗೂ ಗೊತ್ತಿರುವುದಿಲ್ಲ. ನೀವು ಹೂಡಿಕೆ ಮಾಡಿದ ಷೇರು ಕೆಳಗೆ ಬೀಳುವ ರಿಸ್ಕ್ ಇದ್ದೇ ಇರುತ್ತದೆ. ಈ ರಿಸ್ಕ್ ತೆಗೆದುಕೊಳ್ಳಲು ನೀವು ಸಿದ್ಧರಿದ್ದೀರಿ ಎಂದಾದರೆ ಹೂಡಿಕೆ ಮಾಡಬುದು. ಷೇರು ಕುಸಿತ ಕೊನೆಯಾಗುವವರೆಗೂ ಕಾದು ಹೂಡಿಕೆ ಮಾಡುತ್ತೀನಿ ಎಂದುಕೊಂಡರೆ, ಕಾಲ ಮಿಂಚಿಹೋಗಿರುತ್ತದೆ’ ಎಂದು ವಿಜಯ್ ಕೆದಿಯಾ ಹೇಳಿದರು.
ಇದನ್ನೂ ಓದಿ: ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್ನಲ್ಲಿ ಎನ್ಎಸ್ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು
ಮಾರ್ಕೆಟ್ ಟೈಮಿಂಗ್ ಮಾಡಲು ಆಗೊಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ ವಿಜಯ್ ಕೆದಿಯಾ, ಅದೇ ವೇಳೆ ಮಾರುಕಟ್ಟೆ ಪುಟಿದೇಳುವ ಸಾಧ್ಯತೆ ಬಗ್ಗೆ ಸುಳಿವು ಕೂಡ ಬಿಚ್ಚಿಟ್ಟರು. ಅವರ ಅಂದಾಜು ಪ್ರಕಾರ, ಮಾರುಕಟ್ಟೆ 9 ತಿಂಗಳ ಆವರ್ತನ ಹಾದಿ ಹೊಂದಿರುತ್ತದೆ. ಅಂದರೆ, 9 ತಿಂಗಳು ಕುಸಿದ ಬಳಿಕ ಮೇಲೇರಬಹುದು. ಸೆಪ್ಟೆಂಬರ್ನಿಂದ ಮಾರುಕಟ್ಟೆ ಕುಸಿತ ಆಗುತ್ತಿದೆ ಎಂದರೆ ಜೂನ್ನಿಂದ ಅದು ಪುಟಿದೇಳಬಹುದು ಎಂಬುದು ಅವರ ಅನಿಸಿಕೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ