ಆರ್ಬಿಐ (RBI) ಇತ್ತೀಚೆಗೆ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ (Digital Rupee) ಬಿಡುಗಡೆ ಮಾಡಿದ್ದು, ಆಯ್ದ ಬ್ಯಾಂಕ್ಗಳಲ್ಲಿ ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಡಿಜಿಟಲ್ ರೂಪಾಯಿ ದೊರೆಯಲಿದೆ. ಸದ್ಯ ಡಿಜಿಟಲ್ ರೂಪಾಯಿಯನ್ನು ಟೋಕನ್ ರೂಪದಲ್ಲಿ ನೀಡಲಾಗುತ್ತಿದೆ. ಡಿಜಿಟಲ್ ವಾಲೆಟ್ ಮೂಲಕ ಇ-ರೂಪಾಯಿ ವಹಿವಾಟು ನಡೆಯುತ್ತಿದೆ. ಡಿಜಿಟಲ್ ರೂಪಾಯಿಯ ಚಿಲ್ಲರೆ ವಹಿವಾಟನ್ನು ಆರ್ಬಿಐ ಪರಿಶೀಲಿಸುತ್ತಿದೆ. ಪಾವತಿ ಮತ್ತು ಹಣ ವರ್ಗಾವಣೆಗೆ ಬಳಕೆಯಾಗಲಿರುವ ಈ ಡಿಜಿಟಲ್ ರೂಪಾಯಿ ಮುಂದಿನ ದಿನಗಳಲ್ಲಿ ಠೇವಣಿ ಉದ್ದೇಶಕ್ಕೂ ಬಳಕೆಯಾಗಲಿದೆಯೇ? ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಉತ್ತರದ ವಿವರ ಇಲ್ಲಿದೆ.
ಇ-ರೂಪಾಯಿ ಬಳಸಿ ಎಫ್ಡಿ ಖಾತೆ ತೆರೆಯಬಹುದೇ?
ಬ್ಯಾಂಕ್ನಲ್ಲಿ ಇಟ್ಟ ಹಣಕ್ಕೆ ಬಡ್ಡಿ ಪಡೆಯುವಂತೆ ಭವಿಷ್ಯದಲ್ಲಿ ಡಿಜಿಟಲ್ ರೂಪಾಯಿಗೂ ಬಡ್ಡಿ ಪಡೆಯುವ ಅವಕಾಶ ದೊರೆಯಬಹುದು. ಡಿಜಿಟಲ್ ರೂಪಾಯಿಯನ್ನೂ ಇತರ ಕರೆನ್ಸಿಗಳಂತೆ ಪರಿವರ್ತಿಸಲು ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದು ನಿಜವಾದಲ್ಲಿ ಡಿಜಿಟಲ್ ರೂಪಾಯಿ ಬಳಸಿಕೊಂಡು ಎಫ್ಡಿ ಠೇವಣಿ ಇಡುವುದೂ ಸಾಧ್ಯವಾಗಲಿದೆ ಎಂದು ‘ಫೈನಾನ್ಶಿಯಲ್ ಎಕ್ಸ್ಪ್ರೆಸ್ ಡಾಟ್ಕಾಂ’ ವರದಿ ತಿಳಿಸಿದೆ.
ಇದನ್ನೂ ಓದಿ: Digital Rupee: ಆರ್ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ
ಸದ್ಯ ಬಳಕೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖ ಬೆಲೆಯಲ್ಲೇ ಡಿಜಿಟಲ್ ಟೋಕನ್ಗಳನ್ನು ನೀಡಲಾಗುತ್ತಿದೆ. ಇವುಗಳ ವಿತರಣೆ ಬ್ಯಾಂಕ್ಗಳ ಮೂಲಕ ನಡೆಯುತ್ತಿದೆ. ಡಿಜಿಟಲ್ ವಾಲೆಟ್ ಮೂಲಕ ಗ್ರಾಹಕರು ಡಿಜಿಟಲ್ ರೂಪಾಯಿ ಮೂಲಕ ಪಾವತಿ, ಹಣ ವರ್ಗಾವಣೆ ಮಾಡಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ವ್ಯಾಪಾರಿಗೆ ಹಣ ಪಾವತಿ, ವರ್ಗಾವಣೆಗೆ ಅವಕಾಶವಿದೆ ಎಂದು ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಬಳಕೆದಾರರಿ ಅಭಿಪ್ರಾಯ ಪಡೆದುಕೊಂಡು ಡಿಜಿಟಲ್ ರೂಪಾಯಿಯ ಕಾರ್ಯವ್ಯಾಪ್ತಿ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಹಂತ ಹಂತವಾಗಿ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗ ಡಿಜಿಟಲ್ ರೂಪಾಯಿಗೇಕಿಲ್ಲ ಬಡ್ಡಿ?
ಡಿಜಿಟಲ್ ರೂಪಾಯಿ ಸದ್ಯ ಡಿಜಿಟಲ್ ಟೋಕನ್ಗಳ ರೂಪದಲ್ಲಿ ಬಿಡುಗಡೆಯಾಗಿದೆ. ಡಿಜಿಟಲ್ ವಾಲೆಟ್ ಮೂಲಕ ಇದರ ವ್ಯವಹಾರ ನಡೆಯುತ್ತಿದೆ. ಅಂದರೆ ನಮ್ಮ ಜೇಬಿಲ್ಲಿರುವ ಪರ್ಸ್ನಲ್ಲಿ ಹಣ ಇದ್ದಂತೆಯೇ ಇದು ಡಿಜಿಟಲ್ ರೂಪದಲ್ಲಿರುತ್ತದೆ. ನಮ್ಮ ಪರ್ಸ್ನಲ್ಲಿರುವ ಹಣಕ್ಕೆ ಹೇಗೆ ಬಡ್ಡಿ ದೊರೆಯುವುದಿಲ್ಲವೋ ಅದೇ ರೀತಿ ಡಿಜಿಟಲ್ ವಾಲೆಟ್ನಲ್ಲಿರುವ ಇ-ರೂಪಾಯಿಗೂ ಬಡ್ಡಿ ದೊರೆಯದು.
ಪ್ರಾಯೋಗಿಕ ಡಿಜಿಟಲ್ ರೂಪಾಯಿ ನೀಡುತ್ತಿರುವ ಬ್ಯಾಂಕ್ಗಳು
ಡಿಜಿಟಲ್ ರೂಪಾಯಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್ಎಸ್ಬಿಸಿ ಬ್ಯಾಂಕ್ಗಳಲ್ಲಿ ಸದ್ಯ ಪ್ರಾಯೋಗಿಕವಾಗಿ ಚಲಾವಣೆಯಲ್ಲಿವೆ. ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಡಿಜಿಟಲ್ ರೂಪಾಯಿ ಚಲಾವಣೆಯಲ್ಲಿದೆ.
ಇದನ್ನೂ ಓದಿ: eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ
ನವೆಂಬರ್ 1ರಂದು ಹೋಲ್ಸೇಲ್ ಅಥವಾ ಸಗಟು ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿದ್ದ ಆರ್ಬಿಐ ಡಿಸೆಂಬರ್ 1ರಂದು ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ