ELSS Mutual Fund: ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Tax Saving Funds; ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ತೆರಿಗೆ ವಿನಾಯಿತಿ ಪಡೆಯಲು ಹಲವಾರು ಆಯ್ಕೆಗಳಿವೆ. ಅವುಗಳಲ್ಲಿ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ (ELSS Mutual Fund) ಮಾಡುವ ಹೂಡಿಕೆಯೂ ಪ್ರಮುಖವಾದದ್ದಾಗಿದೆ. ಇಎಲ್ಎಸ್ಎಸ್ ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ಅಂದರೆ ಷೇರು ಸಂಯೋಜಿತ ಉಳಿತಾಯ ಯೋಜನೆ ಎಂದಾಗಿದೆ. ಈ ಯೋಜನೆಯಲ್ಲಿ ಸ್ವತ್ತು ನಿರ್ವಹಣಾ ಕಂಪನಿಗಳು ತಮ್ಮ ಸ್ವತ್ತನ್ನು ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಸ್ವತ್ತು ನಿರ್ವಹಣಾ ಕಂಪನಿಗಳ ಮೂಲಕ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಎಂದರೇನು?
ವ್ಯಕ್ತಿಗಳು ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಉಳಿತಾಯ ಮಾಡಬಹುದಾದ ಮ್ಯೂಚುವಲ್ ಫಂಡ್ ಉಳಿತಾಯ ಯೋಜನೆಯೇ ಇಎಲ್ಎಸ್ಎಸ್. ಮೇಲೆ ತಿಳಿಸಿದಂತೆ, ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಅನೇಕ ಫಂಡ್ ಹೌಸ್ಗಳು ಈ ಸ್ಕೀಮ್ ಅನ್ನು ಒದಗಿಸುತ್ತವೆ. ಐಡಿಎಫ್ಸಿ ಟ್ಯಾಕ್ಸ್ ಅಡ್ವಾಂಟೇಜ್, ಕೆನರಾ ರೋಬಿಕೋ ಈಕ್ವಿಟಿ ಟ್ಯಾಕ್ಸ್ ಸೇವರ್, ಮಿರಾಯೆ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್, ಡಿಎಸ್ಪಿ ಟ್ಯಾಕ್ಸ್ ಸೇವರ್ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ಗಳಿಗೆ ಕೆಲವು ಉದಾಹರಣೆಗಳಾಗಿವೆ.
ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೂಡಿಕೆಗೆ 3 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. 3 ವರ್ಷಕ್ಕೂ ಮೊದಲೇ ಹೂಡಿಕೆದಾರರಿಗೆ ತಮ್ಮ ಹಣವನ್ನು ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಅಂದರೆ, ಯೂನಿಟ್ ಅಲೊಟ್ಮೆಂಟ್ ಆದ ನಂತರ ಮಾರಾಟ ಮಾಡಲು 3 ವರ್ಷಗಳಾಗಬೇಕು. ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಯೂನಿಟ್ಗಳನ್ನು ಹಂಚಿಕೆ ಮಾಡಲಾಗುತ್ತದೆ.
ಇಎಲ್ಎಸ್ಎಸ್ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಆದಾಯಕ್ಕೆ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ಮೂಲಕ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಉದಾಹರಣೆಗೆ; ವ್ಯಕ್ತಿಯೊಬ್ಬರು ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ 50,000 ರೂ. ಹೂಡಿಕೆ ಮಾಡಿದ್ದರೆ, ಒಟ್ಟು ತೆರಿಗೆ ವ್ಯಾಪ್ತಿಗೆ ಬರುವ ಆದಾಯದಿಂದ ಈ ಮೊತ್ತವನ್ನು ಕಳೆಯಲಾಗುತ್ತದೆ. ಇದರಿಂದ ತೆರಿಗೆ ಹೊರೆ ಕಡಿಮೆಯಾಗಲಿದೆ. ಈ ವಿಧಾನದಲ್ಲಿ ಹೂಡಿಕೆ ಮಾಡುವ ಮೂಲಕ ವಾರ್ಷಿಕವಾಗಿ 46,800 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ನೆನಪಿರಲಿ; ಮಾರುಕಟ್ಟೆ ರಿಸ್ಕ್ಗಳಿಂದ ಹೊರತಲ್ಲ
ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಮಾರುಕಟ್ಟೆ ರಿಸ್ಕ್ಗಳಿಂದ ಮುಕ್ತವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 3 ವರ್ಷಗಳ ವರೆಗೆ ಹಿಂಪಡೆಯಲಾಗುವುದಿಲ್ಲವಾದ ಕಾರಣ ಆ ಸಂದರ್ಭದಲ್ಲಿನ ಮಾರುಕಟ್ಟೆ ಏರಿಳಿತಗಳು ಹೂಡಿಕೆ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಇದು ಷೇರುಗಳ ಮೇಲೆ ಮಾಡುವ ಹೂಡಿಕೆಯಾಗಿದೆ. ಹಿಂಪಡೆಯುವ ಸಂದರ್ಭದಲ್ಲಿ ಮಾರುಕಟ್ಟೆ ಉತ್ತಮ ಗಳಿಕೆ ದಾಖಲಿಸುತ್ತಿದ್ದರೆ ಹೆಚ್ಚಿನ ಲಾಭವೂ ದೊರೆಯಬಹುದು. ಹಾಗೆಂದು ತೆರಿಗೆ ಉಳಿಸುವ ಸ್ಥಿರ ಠೇವಣಿಗಳಲ್ಲಿ (ಎಫ್ಡಿ) ಹೂಡಿಕೆ ಮಾಡುವುದಾದರೆ 5 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ ಎಂಬುದು ನೆನಪಿರಲಿ.
ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಹೇಗೆ?
ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಎಸ್ಐಪಿ (SIP) ವಿಧಾನದಲ್ಲಿ ಹಾಗೂ ಒಂದು ಬಾರಿಯ ಹೂಡಿಕೆ ಅಥವಾ ಲಂಸಮ್ (Lumpsum) ಹೂಡಿಕೆ ಮಾಡಲೂ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ ಅವಕಾಶವಿದೆ. ಎಸ್ಐಪಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಕನಿಷ್ಠ ಮಿತಿ ಮ್ಯೂಚುವಲ್ ಫಂಡ್ ಹೌಸ್ಗಳಲ್ಲಿ ಭಿನ್ನವಾಗಿರುತ್ತವೆ.
ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ
ಲಂಸಮ್ ಹೂಡಿಕೆ ಅಷ್ಟು ಉತ್ತಮವಲ್ಲ. ಇದರಲ್ಲಿ ಮಾರುಕಟ್ಟೆ ವಹಿವಾಟು ಕುಸಿದ ಸಂದರ್ಭದಲ್ಲಿ ನಷ್ಟ ಅನುಭವಿಸುವ ಆತಂಕ ಹೆಚ್ಚಿರುತ್ತದೆ. ಅದನ್ನು ಸರಿದೂಗಿಸಲು 5-7 ವರ್ಷಗಳ ದೀರ್ಘಾವಧಿ ಹೂಡಿಕೆ ಮಾಡಬೇಕಾಗಿ ಬರಬಹುದು ಎಂದು ‘ಕ್ಲಿಯರ್ ಟ್ಯಾಕ್ಸ್’ ಅಭಿಪ್ರಾಯಪಟ್ಟಿದೆ.