ಮುಂಬೈ, ಜುಲೈ 25: ದೇಶ ತೊರೆದು ವಿದೇಶಗಳಲ್ಲಿ ನೆಲಸಲು ಹೋಗುವವರು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯಪಡಿಸಲಾಗಿದೆ. ಕಪ್ಪು ಹಣ ಕಾಯ್ದೆ ಅಡಿ ವ್ಯಕ್ತಿಗೆ ಯಾವುದೇ ತೆರಿಗೆ ಬಾಧ್ಯತೆ ಇಲ್ಲ ಎನ್ನುವಂತಹ ಪ್ರಮಾಣ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ. ಭಾರತವನ್ನು ಬಿಟ್ಟು ಹೋಗುತ್ತಿರುವವರಿಗೆ ಈ ಬಿಗಿ ಕಾನೂನು ರೂಪಿಸಲಾಗಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230 ಅಡಿಯಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಅದರ ಪ್ರಕಾರ ಯಾವುದೇ ತೆರಿಗೆ ಬಾಧ್ಯತೆ ಇಲ್ಲ ಎಂದು ತೆರಿಗೆ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಅಥವಾ ತೆರಿಗೆ ಬಾಕಿ ಇದ್ದರೆ ಅದನ್ನು ಪಾವತಿಸಲು ವ್ಯವಸ್ಥೆ ಮಾಡಿರುವುದಾಗಿ ಪ್ರಮಾಣಪತ್ರ ಪಡೆದಿರಬೇಕು. ಇವಿಲ್ಲದಿದ್ದರೆ ಅಂಥವರು ದೇಶ ಬಿಟ್ಟು ಹೋಗುವಂತಿಲ್ಲ.
ಈಗಿರುವ ಐಟಿ ಕಾಯ್ದೆ, ಈ ಹಿಂದೆ ಇದ್ದ ವೆಲ್ತ್ ಟ್ಯಾಕ್ಸ್ ಗಿಫ್ಟ್ ಟ್ಯಾಕ್ಸ್ ಕಾಯ್ದೆ ಮತ್ತು ಎಕ್ಸ್ಪೆಂಡಿಚರ್ ಟ್ಯಾಕ್ಸ್ ಕಾಯ್ದೆ ಅಡಿಯಲ್ಲೂ ಈ ನಿಯಮ ಅನ್ವಯ ಆಗುತ್ತದೆ.
ಈಗ ಇದೇ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗಿರುವುದು ತಿಳಿದು ಬಂದಿದೆ. ಮಂಗಳವಾರ ಮಂಡಿಸಲಾದ ಬಜೆಟ್ನಲ್ಲಿ ಈ ವಿಚಾರವನ್ನು ಪ್ರಕಟಿಸಲಾಗಿದೆ. ಆದರೆ, ಈ ಬಗ್ಗೆ ಬದಲಾವಣೆ ಮಾಡಲಾದ ಅಂಶಗಳೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ವರದಿ ಪ್ರಕಾರ ತೆರಿಗೆ ಇಲಾಖೆಯಿಂದ ಹೊಸ ನಿಯಮದ ಬಗ್ಗೆ ಇನ್ನೂ ಅಧಿಸೂಚನೆ ಬರಬೇಕಿದೆ. ಈ ನೋಟಿಫಿಕೇಶನ್ ಬಂದ ಬಳಿಕ ಒಂದು ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ
ವಿದೇಶೀ ಆಸ್ತಿಗಳನ್ನು ಘೋಷಿಸದೇ ಇದ್ದರೆ ಕಪ್ಪು ಹಣ ಕಾಯ್ದೆಯ ಸೆಕ್ಷನ್ 42 ಮತ್ತು 43 ಅಡಿಯಲ್ಲಿ 10 ಲಕ್ಷ ರೂ ದಂಡ ವಿಧಿಸುವ ಕಾನೂನು ಇದೆ. ಈ ನಿಯಮದಲ್ಲಿ ಸ್ವಲ್ಪ ರಿಯಾಯಿತಿ ಕೊಡಲಾಗಿದೆ. ಬಜೆಟ್ನಲ್ಲಿ ಘೋಷಿಸಿರುವ ಪ್ರಕಾರ, ರಿಯಲ್ ಎಸ್ಟೇಟ್ ಹೊರತುಪಡಿಸಿ 20 ಲಕ್ಷ ರೂವರೆಗಿನ ಇತರ ವಿದೇಶೀ ಆಸ್ತಿಗಳ ವಿವರವನ್ನು ಘೋಷಿಸದೇ ಹೋದರೆ ಅಂಥ ಅಪರಾಧವನ್ನು 10 ಲಕ್ಷ ರೂ ದಂಡದ ಶಿಕ್ಷೆಯಿಂದ ಹೊರತಪಡಿಸಲಾಗಿದೆ. ಆದರೆ, ವಿದೇಶದಲ್ಲಿನ ರಿಯಲ್ ಎಸ್ಟೇಟ್ ಆಸ್ತಿ ಯಾವುದೇ ಇದ್ದರೂ ಘೋಷಿಸಬೇಕು. ಹಾಗೆಯೇ 20 ಲಕ್ಷ ರೂ ಮೌಲ್ಯದ ಇತರ ಆಸ್ತಿಗಳಿದ್ದರೆ ಅದನ್ನೂ ಘೋಷಿಸಲೇ ಬೇಕು. ಇಲ್ಲದಿದ್ದರೆ ಬ್ಲ್ಯಾಕ್ ಮನಿ ಆ್ಯಕ್ಟ್ ಪ್ರಕಾರ ದಂಡ ವಿಧಿಸಲಾಗುತ್ತದೆ. ಅಕ್ಟೋಬರ್ 1ರಿಂದ ಈ ಕಾನೂನು ಜಾರಿಯಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ