ಹೊಸ ವಾತ್ಸಲ್ಯ ಎನ್ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ
NPS Vatsalya Scheme for minors: ನಿರ್ಮಲಾ ಸೀತಾರಾಮನ್ ಜುಲೈ 23ರಂದು ಮಂಡಿಸಿದ ಬಜೆಟ್ನಲ್ಲಿ ವಾತ್ಸಲ್ಯ ಎನ್ಪಿಎಸ್ ಸ್ಕೀಮ್ ಪ್ರಕಟಿಸಲಾಯಿತು. ಇದು ಅಪ್ರಾಪ್ತ ಮಕ್ಕಳ ಹೆಸರಲ್ಲಿ ಆರಂಭಿಸಬಹುದಾದ ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಾಗಿದೆ. ಮಗು ಹೆಸರಲ್ಲಿ ಆರಂಭಿಸುವ ಈ ಖಾತೆ ಆ ಮಗು 18 ವರ್ಷ ವಯಸ್ಸು ಪೂರ್ಣಗೊಂಡ ಬಳಿಕ ರೆಗ್ಯುಲರ್ ಎನ್ಪಿಎಸ್ ಆಗಿ ಪರಿವರ್ತಿತವಾಗುತ್ತದೆ.
ಬೆಂಗಳೂರು, ಜುಲೈ 24: ನಿನ್ನೆ ಬಜೆಟ್ನಲ್ಲಿ ಗಮನ ಸೆಳೆದ ಹೊಸ ಸ್ಕೀಮ್ಗಳಲ್ಲಿ ಎನ್ಪಿಎಸ್ ವಾತ್ಸಲ್ಯ (NPS Vatsalya) ಇದೆ. ಇದು ಎನ್ಪಿಎಸ್ನ ಇನ್ನೊಂದು ಅವತಾರ. ಯಾವುದೇ ವಯಸ್ಸಿನ ಸಣ್ಣ ಮಕ್ಕಳ ಹೆಸರಲ್ಲಿ ಅವರ ತಂದೆ ತಾಯಿ ಅಥವಾ ಪಾಲಕರು ಈ ವಾತ್ಸಲ್ಯ ಎನ್ಪಿಎಸ್ ಖಾತೆ ಆರಂಭಿಸಬಹುದು. ಆ ಮಗು ಪ್ರಾಪ್ತ ವಯಸ್ಸಿಗೆ ಬಂದಾಗ, ಅಂದರೆ 18 ವರ್ಷ ವಯಸ್ಸಿನ ಗಡಿ ದಾಟಿದಾರ ವಾತ್ಸಲ್ಯ ಎನ್ಪಿಎಸ್ ಖಾತೆಯು ರೆಗ್ಯುಲರ್ ಎನ್ಪಿಎಸ್ ಖಾತೆಯಾಗಿ ಪರಿವರ್ತನೆ ಆಗುತ್ತದೆ. ಅದಾದ ಬಳಿಕ ಆ ಮಗು ತಾನೇ ಎನ್ಪಿಎಸ್ ಖಾತೆಯನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶ ಇರುತ್ತದೆ. ಮಗು ದೊಡ್ಡದಾಗುವುದರೊಳಗೆ ಅದರ ಬಾಳಿಗೊಂದು ಹಣಕಾಸು ಬುನಾದಿ ಹಾಕಲು ಪೋಷಕರಿಗೆ ಇದರಿಂದ ಸಾಧ್ಯವಾಗುತ್ತದೆ. ಹಾಗೆಯೇ, ಮಗು ದೊಡ್ಡದಾದ ಬಳಿಕ ಬಹಳ ಬೇಗನೇ ಉಳಿತಾಯ ಇತ್ಯಾದಿ ಹಣಕಾಸು ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.
ಎನ್ಪಿಎಸ್ ಯೋಜನೆ ಏನು?
ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್ಪಿಎಸ್ ಎಂಬುದು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಪಿಂಚಣಿ ಯೋಜನೆ. ಮೊದಲಿಗೆ ಇದು ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಕಾರ್ಪೊರೇಟ್ ಸಂಸ್ಥೆಗಳೂ ಕೂಡ ತಮ್ಮ ಉದ್ಯೋಗಿಗಳನ್ನು ಎನ್ಪಿಎಸ್ಗೆ ಜೋಡಿಸಬಹುದು. ಹಾಗೆಯೇ ಸಾರ್ವತ್ರಿಕವಾಗಿ ಯಾರು ಬೇಕಾದರೂ ಎನ್ಪಿಎಸ್ ಪಡೆಯಬಹುದು.
ಇದನ್ನೂ ಓದಿ: Old or new tax regime: ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳದ ಬಳಿಕ ಹೊಸ ಟ್ಯಾಕ್ಸ್ ರೆಜಿಮೆ ಸೂಕ್ತ ಎನಿಸುತ್ತಾ?
ಈ ಮೊದಲು ಎನ್ಪಿಎಸ್ 18 ವರ್ಷದಿಂದ 70 ವರ್ಷ ವಯೋಮಾನದೊಳಗೆ ಇರಬೇಕು. ಎನ್ಆರ್ಐಗಳೂ ಕೂಡ ಈ ಸ್ಕೀಮ್ ಪಡೆಯಬಹುದು. ಈಗ ಅಪ್ರಾಪ್ತ ವಯಸ್ಕರ ಹೆಸರಲ್ಲೂ ಎನ್ಪಿಎಸ್ ಖಾತೆ ಆರಂಭಿಸಬಹುದು.
ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡುವ ಎನ್ಪಿಎಸ್ ಕೊಡುಗೆ ಮಿತಿ ಹೆಚ್ಚಳ
ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಎನ್ಪಿಎಸ್ ಖಾತೆಗೆ ಅವರ ಮೂಲ ವೇತನದ ಶೇ. 10ರಷ್ಟು ಹಣವನ್ನು ಜಮೆ ಮಾಡಲು ಅವಕಾಶ ಇದೆ. ಈಗ ಅದನ್ನು ಶೇ. 14ಕ್ಕೆ ಹೆಚ್ಚಿಸಲಾಗಿದೆ. ಉದಾಹರಣೆಗೆ, ಉದ್ಯೋಗಿಯ ಮೂಲವೇತನ ಮತ್ತು ಡಿಎ ಸೇರಿ ತಿಂಗಳಿಗೆ 30,000 ರೂ ಇದ್ದಲ್ಲಿ ಕಂಪನಿ 4,200 ರೂವರೆಗೆ ಕೊಡುಗೆ ನೀಡಲು ಅವಕಾಶ ಇರುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಕಂಪನಿ ಉದ್ಯೋಗಿಯ ಎನ್ಪಿಎಸ್ ಖಾತೆಗೆ ಶೇ. 14ರಷ್ಟು ಹಣವನ್ನು ಜಮೆ ಮಾಡುವುದು ಕಡ್ಡಾಯವಲ್ಲ. ಅದು ಕಂಪನಿಯ ಐಚ್ಛಿಕ ಮಾತ್ರ.
ಇದನ್ನೂ ಓದಿ: ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು? 10 ಗ್ರಾಮ್ಗೆ 6,000 ರೂವರೆಗೂ ಬೆಲೆ ಇಳಿಕೆ ಸಾಧ್ಯತೆ
ಎನ್ಪಿಎಸ್ ಸ್ಕೀಮ್ ಪಡೆಯುವುದು ಹೇಗೆ?
ನ್ಯಾಷನಲ್ ಪೆನ್ಷನ್ ಸ್ಕೀಮ್ಗೆಂದು ರೂಪಿಸಲಾಗಿರುವ ಪೋರ್ಟಲ್ನಲ್ಲಿ ಈ ಸ್ಕೀಮ್ ಆರಂಭಿಸಬಹುದು. ಪ್ರಮುಖ ಬ್ಯಾಂಕುಗಳಿಂದಲೂ ಎನ್ಪಿಎಸ್ ಖಾತೆ ಆರಂಭಿಸಬಹುದು.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ