Petrol Diesel Price Hike: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ತೈಲ ಕಂಪನಿಗಳ ನಷ್ಟ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ದರಗಳು ಜಾರಿಗೆ ಬಂದಿದ್ದು, ಗ್ರಾಹಕರ ಮೇಲೆ ಮತ್ತಷ್ಟು ಹೊರಬಿದ್ದಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತವೇ ಪ್ರಮುಖ ಕಾರಣ.

Petrol Diesel Price Hike: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?
ಪೆಟ್ರೋಲ್
Image Credit source: PTI

Updated on: May 23, 2026 | 7:24 AM

ನವದೆಹಲಿ, ಮೇ 23: ದೇಶದಲ್ಲಿ ದೀರ್ಘಕಾಲದವರೆಗೆ ಸ್ಥಿರವಾಗಿದ್ದ ಇಂಧನ ದರಗಳಿಗೆ ಈಗ ಜಾಗತಿಕ ಮಾರುಕಟ್ಟೆಯ ಬಿಸಿ ತಟ್ಟಿದೆ. ಶನಿವಾರದ ತೈಲ ಕಂಪನಿಗಳ ನಿರ್ಧಾರದಂತೆ ಪೆಟ್ರೋಲ್(Petrol) ಬೆಲೆ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್(Diesel) ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಆಗಿದ್ದು ಡೀಸೆಲ್ ಬೆಲೆ 95.04 ರೂ. ಆಗಿದೆ.

ಮೇ ತಿಂಗಳಲ್ಲಿ ಮೂರನೇ ಬಾರಿ ಏರಿಕೆ
ಇತ್ತೀಚಿನ ದಿನಗಳಲ್ಲಿ ತೈಲ ಕಂಪನಿಗಳು ಗ್ರಾಹಕರ ಮೇಲೆ ಸತತವಾಗಿ ಇಂಧನ ಹೊರೆಯನ್ನು ಹಾಕುತ್ತಿವೆ. ಈ ವಾರದ ಆರಂಭದಲ್ಲಷ್ಟೇ ಲೀಟರ್ ಇಂಧನಕ್ಕೆ 90 ಪೈಸೆ ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ಲೀಟರ್‌ಗೆ ಒಮ್ಮೆಗೆ ಸುಮಾರು 3 ರೂ.ಗಳಷ್ಟು ದರಗಳನ್ನು ಹೆಚ್ಚಿಸುವ ಮೂಲಕ ದೀರ್ಘಾವಧಿಯ ಬೆಲೆ ಸ್ಥಿರತೆಗೆ ಬ್ರೇಕ್ ಹಾಕಿದ್ದವು. ಇತ್ತೀಚಿನ ಈ ಪರಿಷ್ಕರಣೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.77 ರೂ.ಗಳಿಂದ 98.64 ರೂ.ಗಳಿಗೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಏರಿಕೆಯಾಗಿ, 98.64 ರೂ.ಗಳಿಂದ 99.51 ರೂ.ಗಳಿಗೆ ತಲುಪಿದೆ. ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿ 91.58 ರೂ.ಗಳಿಂದ 92.49 ರೂ.ಗಳಿಗೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ. ಡೀಸೆಲ್ 96.04 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 107.56 ರೂ. ಡೀಸೆಲ್, 94.05 ರೂ.ಚೆನ್ನೈನಲ್ಲಿ ಪೆಟ್ರೋಲ್ 104.54 ರೂ. ಡೀಸೆಲ್ 96.16 ರೂ. ಆಗಿದೆ.

ದರ ಏರಿಕೆಗೆ ಅಸಲಿ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಯುದ್ಧದ ವಾತಾವರಣ ಮತ್ತು ಯುಎಸ್-ಇರಾನ್ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್‌ಗಿಂತ (USD) ಹೆಚ್ಚಾಗಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 97 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಪೂರೈಕೆಯ ಕಳವಳಗಳ ಮಧ್ಯೆ ಒಂದು ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 111 ಡಾಲರ್‌ಗೆ ತಲುಪಿತ್ತು.

ಮತ್ತಷ್ಟು ಓದಿ: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ!

ತೈಲ ಕಂಪನಿಗಳಿಗೆ ಆಗ್ತಿದ್ದ ಭಾರಿ ನಷ್ಟ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸತತವಾಗಿ ಏರುತ್ತಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ತಿಂಗಳುಗಳಿಂದ ದೇಶೀಯ ಇಂಧನ ಬೆಲೆಗಳನ್ನು ಬದಲಾಯಿಸದೆ ಗ್ರಾಹಕರಿಗೆ ನೆರವಾಗಿದ್ದವು. ಆದರೆ, ಈ ಅವಧಿಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿ ತಿಂಗಳು ಸುಮಾರು 1,000 ಕೋಟಿ ರೂ.ಗಳಷ್ಟು ಭಾರಿ ನಷ್ಟವನ್ನು ಅನುಭವಿಸುತ್ತಿದ್ದವು. ಹೀಗಾಗಿ ನಷ್ಟದ ಹೊರೆಯನ್ನು ತಗ್ಗಿಸಲು ಈಗ ಬೆಲೆ ಪರಿಷ್ಕರಣೆಯ ಮೂಲಕ ಆ ಹೊರೆಯ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಕಂಪನಿಗಳು ಆರಂಭಿಸಿವೆ.

ಇಂಧನ ಆಘಾತ ಎದುರಿಸಲು ಭಾರತ ಸಜ್ಜು: ಹರ್ದೀಪ್ ಸಿಂಗ್ ಪುರಿ
ಇತ್ತೀಚೆಗೆ ನಡೆದ ‘ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆ 2026’ ರಲ್ಲಿ ಮಾತನಾಡಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಜಾಗತಿಕ ಅಡೆತಡೆಗಳು ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಹೊರತಾಗಿಯೂ ಬಲವಾದ ನೀತಿ ಸಮನ್ವಯದ ಮೂಲಕ ಭಾರತವು ಸ್ಥಿರ ಇಂಧನ ಪೂರೈಕೆಯನ್ನು ಖಚಿತಪಡಿಸಿದೆ ಎಂದು ಹೇಳಿದ್ದರು. ಯಾವುದೇ ಕೊರತೆಯಾಗದಂತೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ತಡೆರಹಿತ ಲಭ್ಯತೆಯನ್ನು ಖಚಿತಪಡಿಸಲಾಗಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದರು. ಆದಾಗ್ಯೂ, ಪ್ರಸ್ತುತ ಜಾಗತಿಕ ಒತ್ತಡ ಹೆಚ್ಚಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಬೆಲೆ ಏರಿಕೆ ಅನಿವಾರ್ಯವಾಗಿದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:14 am, Sat, 23 May 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us