ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ!
ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ನಾನಾ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಅದರಲ್ಲೂ ಖಾಸಗಿ ಬಸ್ ಪ್ರಯಾಣ ದರ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ನಗರವಾಸಿಗಳು ಅತೀ ಹೆಚ್ಚಾಗಿ ನೆಚ್ಚಿಕೊಂಡಿರುವ ಓಲಾ, ಉಬರ್ ದರ ಹೆಚ್ಚಳಕ್ಕೆ ಚಾಲಕರು ಪಟ್ಟು ಹಿಡಿದಿದ್ದಾರೆ. ಅಗ್ರಿಗೇಟರ್, ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಹಾಗಾದ್ರೆ, ಕಿಲೋಮೀಟರ್ ಗೆ ಎಷ್ಟು?

ಬೆಂಗಳೂರು, (ಮೇ 17): ಪೆಟ್ರೋಲ್, ಡೀಸೆಲ್ (petrol and diesel price Hiked) ಹಾಗೂ ಸಿಎನ್ಜಿ ದರ ಏರಿಕೆ ಹಿನ್ನೆಲೆಯಲ್ಲಿ ಕ್ಯಾಬ್, ಟ್ಯಾಕ್ಸಿ (Ola And Uber) ದರವನ್ನು ಏರಿಸಲು ಸಂಘಟನೆಗಳು ಮುಂದಾಗಿವೆ. 1 ಕಿಲೋಮೀಟರ್ ಗೆ 5 ರಿಂದ 10 ರೂಪಾಯಿ ಹೆಚ್ಚಿಸುವಂತೆ ಓಲಾ, ಉಬರ್ ಚಾಲಕರು ಅಗ್ರಿಗೇಟರ್ ಕಂಪನಿ ಹಾಗೂ ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿದರೆ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವುದಂತೂ ಗ್ಯಾರಂಟಿ.
ಬೆಂಗಳೂರಲ್ಲಿ RTO ನಿಗದಿ ಪಡಿಸಿರುವ ದರಗಳು ಹೀಗಿವೆ
- 10 ಲಕ್ಷಕ್ಕಿಂತ ಕಡಿಮೆ ವಾಹನಗಳು: ಕನಿಷ್ಠ 100 ರೂಪಾಯಿ (ನಾಲ್ಕು ಕಿ.ಮೀಟರ್), ಪ್ರತಿ ಕಿ.ಮೀಟರ್ ಗೆ 24 ರೂಪಾಯಿ.
- 10-15 ಲಕ್ಷ ರೂಪಾಯಿ ವಾಹನ: ಕನಿಷ್ಠ 115 ರೂಪಾಯಿ, ಪ್ರತಿ ಕಿ.ಮೀಟರ್ ಗೆ 28 ರೂಪಾಯಿ.
- 15 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನ: ಕನಿಷ್ಠ 130 ರೂಪಾಯಿ, ಪ್ರತಿ ಕಿ.ಮೀಟರ್ ಗೆ 32 ರೂಪಾಯಿ ನಿಗದಿಪಡಿಸಲಾಗಿದೆ.
ಆದರೆ, ಒಲಾ, ಉಬರ್, ಅಗ್ರಿಗೇಟರ್ ಗಳು ಪ್ರತಿ ಕಿ.ಮೀಟರ್ ಗೆ ವಾಹನ ಮಾಲೀಕರಿಗೆ 10ರಿಂದ 12 ರುಪಾಯಿ, ಪೀಕ್ ಅವರ್ ನಲ್ಲಿ 20 ರುಪಾಯಿ ಮಾತ್ರ ನೀಡುತ್ತಿವೆ. ಇದಕ್ಕೆ ಕ್ಯಾಬ್ ಚಾಲಕ ಸಂಘಟನೆಗಳ ಅಸಮಾಧಾನ ಹೊರಹಾಕಿದ್ದು, ಡಿಸೇಲ್ ದರ ಏರಿಕೆ ಆಗಿರುವುದರಿಂದ ಕಿಮೀ ಮೇಲೆ 5 ರಿಂದ 10 ರುಪಾಯಿ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ ಅಬ್ಬರದ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್: ಖಾಸಗಿ ಬಸ್ಗಳ ಟಿಕೆಟ್ ದರವೂ ಹೆಚ್ಚಳ
ಖಾಸಗಿ ಬಸ್ , ಖಾಸಗಿ ಶಾಲಾ ವಾಹನ ಆಯ್ತು, ಈಗ ಓಲಾ, ಉಬರ್ ಟ್ಯಾಕ್ಸಿಗಳ ಸರದಿ. ಹೀಗಾಗಿ ಕ್ಯಾಬ್, ಟ್ಯಾಕ್ಸಿ ಚಾಲಕರು, ಸಿಲಿಕಾನ್ ಸಿಟಿ ಜನರಿಗೆ ಶಾಕ್ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ,

