ನವದೆಹಲಿ, ಜನವರಿ 17: ಕಳೆದ ಎರಡು ವರ್ಷದಿಂದ ಸಾಕಷ್ಟು ಲಾಭ ಮಾಡಿರುವ ಭಾರತದ ಪೆಟ್ರೋಲಿಯಂ ಕಂಪನಿಗಳು (Oil Marketing companies) ಈಗ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಮತ್ತೆ ಬರುತ್ತಿವೆ. ಫೆಬ್ರುವರಿ ತಿಂಗಳಲ್ಲಿ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್ಗೆ 10 ರೂವರೆಗೂ ಬೆಲೆ ಇಳಿಕೆ ಮಾಡಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕಡಿಮೆ ಆಗಬಹುದು ಎಂದು ಡಿಸೆಂಬರ್ ತಿಂಗಳಲ್ಲೂ ವರದಿಗಳು ಬಂದಿದ್ದವು. ಲೋಕಸಭೆ ಚುನಾವಣೆಗೆ ಒಂದು ಅಥವಾ ಎರಡು ತಿಂಗಳು ಇರುವ ಮುನ್ನ ಬೆಲೆ ಇಳಿಕೆ ಆಗಬಹುದು ಎನ್ನಲಾಗಿದೆ.
ಭಾರತದಲ್ಲಿ 2022ರ ಏಪ್ರಿಲ್ ತಿಂಗಳಿಂದಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಸ್ಥಿರವಾಗಿವೆ. ಅದೇ ವೇಳೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಅಗ್ಗಗೊಂಡಿವೆ. ರಷ್ಯಾದಿಂದಲೂ ಕಡಿಮೆ ಬೆಲೆಗೆ ತೈಲವನ್ನು ಪಡೆಯಲಾಗುತ್ತಿದೆ. ಅಲ್ಲಿಯವರೆಗೆ ಸಾಕಷ್ಟು ನಷ್ಟಗಳನ್ನು ಕಂಡಿದ್ದ ಭಾರತದ ಪೆಟ್ರೋಲಿಯಂ ಕಂಪನಿಗಳು ಕಳೆದ ಎರಡು ವರ್ಷದಿಂದ ನಷ್ಟದ ಸುಳಿಯಿಂದ ಹೊರಬಂದಿರುವುದಷ್ಟೇ ಅಲ್ಲ ಲಾಭದ ಹಳಿಗೂ ಬಂದಿವೆ. ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್ನ ಅವಧಿ) ಇಂಡಿಯನ್ ಆಯಿಲ್, ಎಚ್ಪಿ, ಭಾರತ್ ಪೆಟ್ರೋಲಿಯಂ ಕಂಪನಿಗಳು 75,000 ಕೋಟಿ ರೂನಷ್ಟು ಲಾಭ ಹೊಂದಿರಬಹುದು.
ವರದಿಯ ಪ್ರಕಾರ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸದ್ಯಕ್ಕೆ ಒಂದು ಲೀಟರ್ಗೆ 10 ರೂನಷ್ಟು ಲಾಭದ ಮಾರ್ಜಿನ್ ಹೊಂದಿವೆ. ಇದರಲ್ಲಿ ಒಂದಷ್ಟು ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಪೆಟ್ರೋಲ್ ಮತ್ತು ಡೀಸಲ್ ಒಂದು ಲೀಟರ್ಗೆ 5ರಿಂದ 10 ರೂವರೆಗೆ ಬೆಲೆ ಇಳಿಕೆ ಕಾಣಬಹುದು.
ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೂ ಎರಡು ರೀತಿಯಲ್ಲಿ ಅನುಕೂಲವಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇರುವುದರಿಂದ ಜನಬೆಂಬಲ ಸಿಗಬಹುದೆಂದು ನಿರೀಕ್ಷಿಸಬಹುದು. ಹಾಗೆಯೇ, ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯ ಪರಿಣಾಮವಾಗಿ ಬೇರೆ ಬೆಲೆಗಳೂ ಕಡಿಮೆ ಆಗಬಹುದು. ಇದರಿಂದ ಹಣದುಬ್ಬರ ಏರಿಕೆಗೆ ಸ್ವಲ್ಪ ಕಡಿವಾಣ ಬೀಳಬಹುದು.
ಇದನ್ನೂ ಓದಿ: Petrol Diesel Price on January 17: ಛತ್ತೀಸ್ಗಢದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಉತ್ತರ ಪ್ರದೇಶದಲ್ಲಿ ದುಬಾರಿ
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.72 ರೂ ಇದೆ. ಡೀಸಲ್ ಬೆಲೆ ಲೀಟರ್ಗೆ 89.62 ರೂ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 106.31 ರೂ ಇದ್ದರೆ ಡೀಸಲ್ ಬೆಲೆ 94.27 ರೂ ಇದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ಗೆ 101.94 ರೂ ಇದೆ. ಡೀಸಲ್ ಬೆಲೆ 87.89 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ