
ನವದೆಹಲಿ, ಸೆಪ್ಟೆಂಬರ್ 17: ಭಾರತವು ಈಗ ಎರಡನೇ ಹಂತದ ಸೆಮಿಕಂಡಕ್ಟರ್ ಪ್ರಯಾಣ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮ ಉದ್ಘಾಟಿಸಿ ನಂತರ ಭಾಷಣ ಮಾಡಿದ ಅವರು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಬಹಳ ಅದ್ವಿತೀಯ ಬೆಳವಣಿಗೆ ಹೊಂದುತ್ತಿರುವುದನ್ನು ಜಾಹೀರು ಮಾಡಿದ್ದಾರೆ. ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ನಿರ್ಮಿಸುವ ಹಂತದಿಂದ ಭಾರತ ಈಗ ಕಮರ್ಷಿಯಲ್ ಚಿಪ್ ತಯಾರಿಸುವ ಹಂತಕ್ಕೆ ಹೋಗುತ್ತಿದೆ ಎಂದಿದ್ದಾರೆ.
ಚಿಪ್ ಮ್ಯಾನುಫ್ಯಾಕ್ಚರಿಂಗ್ ಎಂಬುದು ಎಂದಿಗೂ ನಿಲ್ಲದ ಪ್ರಯಾಣ. ಅಂತೆಯೇ, ಭಾರತದ ಸೆಮಿಕಂಡಕ್ಟರ್ ಪ್ರಯಾಣವೂ ನಿರಂತರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಭಾರತ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಾಧಿಸಿದ ಬೆಳವಣಿಗೆ ಬಗ್ಗೆ ಅವರು ಹೆಮ್ಮೆ ಪಟ್ಟಿದ್ದಾರೆ. ಯಾವುದನ್ನು ಸಾಧಿಸಲು ಇತರ ದೇಶಗಳು ಒಂದು ದಶಕ ತೆಗೆದುಕೊಳ್ಳುತ್ತವೆಯೋ, ಅದನ್ನು ಭಾರತ ನಾಲ್ಕೇ ವರ್ಷದಲ್ಲಿ ಸಾಧಿಸಿದೆ ಎಂದು ಹೇಳಿದ್ದಾರೆ.
ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಜಾಗತಿಕ ಸಂಸ್ಥೆಗಳ ಉಪಸ್ಥಿತಿ ಗಮನಾರ್ಹವಾಗಿದೆ. ದೇಶದ ಸೆಮಿಕಂಡಕ್ಟರ್ ಇಕೋಸಿಸ್ಟಂನಲ್ಲಿ ಆ ಕಂಪನಿಗಳು ಹೊಂದಿರುವ ವಿಶ್ವಾಸಕ್ಕೆ ದ್ಯೋತಕ ಇದಾಗಿದೆ. ಚಿಪ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಹಾಗೂ ಸಂಬಂಧಿತ ತಂತ್ರಜ್ಞಾನಗಳಲ್ಲಿ ಭಾರತದ ಸಾಮರ್ಥ್ಯ ಹೆಚ್ಚುತ್ತಿರುವುದು ವಿಶ್ವದ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ
ಸೆಮಿಕಂಡಕ್ಟರ್ ಕ್ರಾಂತಿಯತ್ತ ಭಾರತ: ಭಾರತವು ಕೇವಲ ಸೆಮಿಕಂಡಕ್ಟರ್‌ಗಳ ಗ್ರಾಹಕ ದೇಶವಾಗಿ ಉಳಿಯದೆ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಚಿಪ್ ಉತ್ಪಾದನಾ ಕೇಂದ್ರವಾಗಿ (Chips Design & Manufacturing Hub) ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಮೂಲಸೌಕರ್ಯ, ಗತಿ ಶಕ್ತಿ ಯೋಜನೆ (PM Gati Shakti) ಮತ್ತು ಜಾಗತಿಕ ಪೂರೈಕೆ ಸರಪಳಿಯ ನಂಬಿಕೆಗಳು ಭಾರತದ ಉತ್ಪಾದನೆ (Manufacturing) ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತಿವೆ. ದೇಶಾದ್ಯಂತ ನಿರ್ಮಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ವೇಗಳು, ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು ಮತ್ತು ಶರವೇಗದ ಸಾರಿಗೆ ವ್ಯವಸ್ಥೆಗಳು ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಪೂರೈಕೆ ಸರಪಳಿಯನ್ನು (Supply Chain) ಅತ್ಯಂತ ವೇಗಗೊಳಿಸಿವೆ ಎಂದಿದ್ದಾರೆ.
ಪ್ರಧಾನಮಂತ್ರಿ ಗತಿ ಶಕ್ತಿ ಪರಿಣಾಮ: ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿದ್ದ ವಿಳಂಬವನ್ನು ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಬೃಹತ್ ಯೋಜನೆ ಸಂಪೂರ್ಣವಾಗಿ ತಡೆದಿದ್ದು, ಸಾರಿಗೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲು ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮ ಉದ್ಘಾಟನೆ; ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳ ಸಮಾಗಮ
ಭಾರತದಲ್ಲಿನ ರಾಜಕೀಯ ಸ್ಥಿರತೆ, ‘ಮೇಕ್ ಇನ್ ಇಂಡಿಯಾ’ ಮತ್ತು ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಗಳು ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳನ್ನು ಭಾರತದಲ್ಲಿ ಹೂಡಿಕೆ ಮಾಡಲು ಆಕರ್ಷಿಸುತ್ತಿವೆ ಎಂದಿದ್ದಾರೆ.
ಯುವ ಸಮುದಾಯಕ್ಕೆ ಹೊಸ ಉದ್ಯೋಗ: ಮುಂದಿನ ದಿನಗಳಲ್ಲಿ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ‘ಸೆಮಿಕಂಡಕ್ಟರ್ ಫ್ಯಾಬ್’ (Semiconductor Fabs) ಮತ್ತು ಅಸೆಂಬ್ಲಿ ಘಟಕಗಳು ಲಕ್ಷಾಂತರ ದೇಶೀಯ ಯುವ ಇಂಜಿನಿಯರ್‌ಗಳು ಹಾಗೂ ತಂತ್ರಜ್ಞರಿಗೆ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಸೆಮಿಕಾನ್ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ