ಗುಜರಾತ್​ನಲ್ಲಿ 7,500 ಕೋಟಿ ರೂ ಸಿಜಿ ಸೆಮಿ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ; ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ

PM Narendra Modi inaugurates CG Semi's OSAT facility at Gujarat: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನ ಸಾನಂದ್​ನಲ್ಲಿ ಒಸಾಟ್ (OSAT) ಘಟಕವನ್ನು ಉದ್ಘಾಟಿಸಿದ್ದಾರೆ. ಭಾರತದ ಸಿಜಿ ಸೆಮಿ ಮತ್ತು ಜಪಾನ್​ನ ರೆನಿಸಾಸ್ ಸಂಸ್ಥೆಗಳು ಜಂಟಿಯಾಗಿ 7,500 ಕೋಟಿ ರೂ ವೆಚ್ಚದಲ್ಲಿ ಈ ಘಟಕ ಸ್ಥಾಪಿಸಿವೆ. ಭಾರತದಲ್ಲಿ ಈಗ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತ ಬೆಳವಣಿಗೆ ಸಾಧಿಸಿರುತ್ತಿರುವುದರ ಕುರುಹು ಇದು.

ಗುಜರಾತ್​ನಲ್ಲಿ 7,500 ಕೋಟಿ ರೂ ಸಿಜಿ ಸೆಮಿ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ; ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ
ಸಿಜಿ ಸೆಮಿ ಘಟಕದಲ್ಲಿ ಪ್ರಧಾನಿ ಮೋದಿ
Image Credit source: PTI

Updated on: Jul 05, 2026 | 1:52 PM

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಅವರು ಗುಜರಾತ್​ನಲ್ಲಿ ಒಸಾಟ್ (OSAT) ಘಟಕವನ್ನು ಉದ್ಘಾಟಿಸಿದ್ದಾರೆ.
  • ಸಿಜಿ ಸೆಮಿ ಮತ್ತು ರೆನಿಸಾಸ್ ಜಂಟಿಯಾಗಿ 7,500 ಕೋಟಿ ರೂ ವೆಚ್ಚದಲ್ಲಿ ಈ ಘಟಕ ಸ್ಥಾಪಿಸಿವೆ.
  • ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತ ಬೆಳವಣಿಗೆ ಸಾಧಿಸಿರುತ್ತಿರುವುದರ ಕುರುಹು ಇದು.

ಅಹ್ಮದಾಬಾದ್, ಜುಲೈ 5: ಭಾರತವನ್ನು ಜಾಗತಿಕ ತಂತ್ರಜ್ಞಾನದ ಮಹಾಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಗುಜರಾತ್‌ನ ಸಾನಂದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು CG Semi ಸಂಸ್ಥೆಯ ಅತ್ಯಾಧುನಿಕ OSAT (Outsourced Semiconductor Assembly and Test – ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಪ್ರೊಡಕ್ಷನ್) ಘಟಕವನ್ನು ಉದ್ಘಾಟಿಸಿದ್ದಾರೆ.

ಈ ಉದ್ಘಾಟನೆಯೊಂದಿಗೆ, ಭಾರತವು ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಕೇವಲ ಗ್ರಾಹಕನಾಗಿರದೆ, ಉತ್ಪಾದಕನಾಗಿಯೂ ಅಬ್ಬರದ ಹೆಜ್ಜೆ ಇಟ್ಟಿದೆ. ಟ್ವಿಟರ್ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪ್ರಧಾನಿ ಕಾರ್ಯಾಲಯ (PMO), “ಭಾರತವು ಏನನ್ನು ಸಂಕಲ್ಪಿಸುತ್ತದೆಯೋ, ಅದನ್ನು ಸಾಧಿಸಿ ತೋರಿಸುತ್ತದೆ ಎಂಬುದಕ್ಕೆ ಈ ದಿನವೇ ಸಾಕ್ಷಿ” ಎಂದು ಬಣ್ಣಿಸಿದೆ.

ನರೇಂದ್ರ ಮೋದಿ ಅವರು ಸಿಜಿ ಸೆಮಿ ಉದ್ಯೋಗಿಗಳೊಂದಿಗೆ ಸಂವಾದಿಸುತ್ತಿರುವುದು
YouTube video player

ಸಿಜಿ ಸೆಮಿ: ಬುಡಕಟ್ಟು ಸಮುದಾಯದ ಯುವತಿಯರೊಂದಿಗೆ ಪ್ರಧಾನಿ ಸಂವಾದ

ಈ ಸಮಾರಂಭದ ಅತ್ಯಂತ ಆಕರ್ಷಕ ಮತ್ತು ಪ್ರೇರಣಾದಾಯಕ ಕ್ಷಣವೆಂದರೆ, ಪ್ರಧಾನಿ ಮೋದಿ ಅವರು ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಉದ್ಯೋಗಿಗಳೊಂದಿಗೆ ನಡೆಸಿದ ಸಂವಾದ. ವಿಶೇಷವಾಗಿ, ಬುಡಕಟ್ಟು (Tribal) ಸಮುದಾಯಗಳಿಂದ ಬಂದು ಇಂದು ಸೆಮಿಕಂಡಕ್ಟರ್ ಕ್ಷೇತ್ರದ ತಜ್ಞರಾಗಿ ಬೆಳೆದಿರುವ ಯುವತಿಯರೊಂದಿಗೆ ಮೋದಿ ಆಪ್ತವಾಗಿ ಮಾತನಾಡಿದರು.

ಪ್ರಧಾನಿ ಕಾರ್ಯಾಲಯದ ಎಕ್ಸ್ ಪೋಸ್ಟ್

ಸಾಮಾನ್ಯ ಹಿನ್ನೆಲೆಯಿಂದ ಬಂದು, ಐಟಿಐ (ITI) ಮುಗಿಸಿ, ಮಲೇಷ್ಯಾದಲ್ಲಿ ಅತ್ಯಾಧುನಿಕ ತಾಂತ್ರಿಕ ತರಬೇತಿ ಪಡೆದು ಇಂದು ವಿಶ್ವದ ಅತ್ಯಂತ ಪ್ರಮುಖ ಚಿಪ್ ತಯಾರಿಕಾ ಯಂತ್ರಗಳನ್ನು ಮುನ್ನಡೆಸುತ್ತಿರುವ ಈ ಯುವತಿಯರ ಆತ್ಮವಿಶ್ವಾಸವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ತಂತ್ರಜ್ಞಾನದ ಕ್ರಾಂತಿ ದೇಶದ ಕಟ್ಟಕಡೆಯ ಭಾಗವನ್ನೂ ತಲುಪುತ್ತಿದೆ ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.

ಇದನ್ನೂ ಓದಿ: ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?

ಸಂಪೂರ್ಣ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿ (Value Chain): ಭಾರತಕ್ಕೆ ಏನು ಲಾಭ?

ಕಳೆದ ದಶಕದಲ್ಲಿ ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಅಸೆಂಬ್ಲಿಂಗ್‌ನಲ್ಲಿ ಮುಂಚೂಣಿಗೆ ಬಂದಿತ್ತು. ಆದರೆ, ಈಗ ಅದರ ಮುಂದಿನ ಹಂತವಾದ “ಸಂಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಮ್” ಅನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಅಂದರೆ ಕೇವಲ ಉತ್ಪನ್ನಗಳಲ್ಲ, ಅವುಗಳ ಒಳಗೆ ಬಳಸುವ ಬಿಡಿಭಾಗಗಳು ಮತ್ತು ಇಡೀ ಜಗತ್ತನ್ನು ನಿಯಂತ್ರಿಸುವ ‘ಚಿಪ್ಸ್’ (Chips) ಕೂಡ ಈಗ ಭಾರತದಲ್ಲೇ ತಯಾರಾಗಲಿವೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉನ್ನತಿ, ಭಾರತಕ್ಕೆಷ್ಟು ಲಾಭ?

  • ಆರ್ಥಿಕ ಸ್ವಾವಲಂಬನೆ: ಪ್ರಸ್ತುತ ಭಾರತವು ಆಟೋಮೊಬೈಲ್, 5G ಫೋನ್‌ಗಳು, ರಕ್ಷಣೆ ಮತ್ತು ಎಐ (AI) ತಂತ್ರಜ್ಞಾನಗಳಿಗಾಗಿ ತೈವಾನ್, ಚೀನಾ ಮತ್ತು ಅಮೆರಿಕದ ಚಿಪ್‌ಗಳ ಮೇಲೆ ಅವಲಂಬಿತವಾಗಿದೆ. ಸ್ವದೇಶಿ ಉತ್ಪಾದನೆಯಿಂದಾಗಿ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
  • ಜಾಗತಿಕ ರಫ್ತು ಹಬ್: ಸಾಣಂದ್‌ನ ಈ CG Semi ಘಟಕವು ವಾರ್ಷಿಕವಾಗಿ 500 ಕೋಟಿ ಚಿಪ್ಸ್ ಉತ್ಪಾದಿಸುವ ಗುರಿ ಹೊಂದಿದೆ. ವಿಶೇಷವೆಂದರೆ, ಇಲ್ಲಿ ತಯಾರಾಗುವ ಚಿಪ್‌ಗಳು ಕೇವಲ ಭಾರತಕ್ಕಷ್ಟೇ ಅಲ್ಲದೆ ಜಪಾನ್, ಅಮೆರಿಕ ಮತ್ತು ಯುರೋಪ್ ದೇಶಗಳಿಗೂ ರಫ್ತಾಗಲಿವೆ.
  • ಉದ್ಯೋಗ ಸೃಷ್ಟಿ: ಮುಂದಿನ 5 ವರ್ಷಗಳಲ್ಲಿ ಈ ಒಂದೇ ಯೋಜನೆಯಿಂದ ಸುಮಾರು 5,000 ಪ್ರತ್ಯಕ್ಷ ಮತ್ತು ಪರೋಕ್ಷ ಹೈ-ಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ.
  • ತಂತ್ರಜ್ಞಾನದ ರಕ್ಷಣೆ: ಜಾಗತಿಕವಾಗಿ ಚಿಪ್‌ಗಳ ಕೊರತೆಯಾದಾಗಲೂ (Chip Shortage) ಭಾರತದ ಕಾರು ತಯಾರಿಕೆ, ಮೊಬೈಲ್ ಮತ್ತು ದೂರಸಂಪರ್ಕ ಉದ್ಯಮಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲು ಇದು ರಕ್ಷಣಾ ಕವಚವಾಗಲಿದೆ.

ಇದನ್ನೂ ಓದಿ: ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ: ಜುಲೈನಲ್ಲಿ 80ನೇ ಸ್ಥಾನಕ್ಕೆ ಕುಸಿದ ಭಾರತ; 56 ದೇಶಗಳಿಗೆ ವೀಸಾ ರಹಿತ ಪ್ರವೇಶ

ಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವ ಗುರಿ

“ಭಾರತದ ಸೆಮಿಕಂಡಕ್ಟರ್ ಜರ್ನಿಯು ರಾತ್ರೋರಾತ್ರಿ ಆಗಿದ್ದಲ್ಲ. ಇದು ಕಳೆದ ಹತ್ತು ವರ್ಷಗಳ ಎಲೆಕ್ಟ್ರಾನಿಕ್ಸ್ ಕ್ರಾಂತಿಯ ಮುಂದಿನ ಮೈಲಿಗಲ್ಲು. ಭಾರತದ ಯುವಶಕ್ತಿ ಸೆಮಿಕಂಡಕ್ಟರ್ ಮತ್ತು ಎಐ ಕ್ರಾಂತಿಯ ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಚಿಪ್ ಡಿಸೈನ್​ನಿಂದ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್​ವರೆಗೆ ಭಾರತದಲ್ಲಿ ಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವುದು ತಮ್ಮ ಗುರಿ ಎಂದೂ ಪ್ರಧಾನಿಗಳು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Sun, 5 July 26

Follow Us