ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

PNG vs LPG: ಪಿಎನ್​ಜಿ ನೈಸರ್ಗಿಕ ಅನಿಲವಾದರೆ, ಎಲ್​ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎಲ್​ಪಿಜಿಯಲ್ಲಿ ಅನಿಲವನ್ನು ದ್ರವೀಕರಿಸಿ ಸಿಲಿಂಡರ್​ಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತದೆ. ಆದರೆ, ಪಿಎನ್​ಜಿಯನ್ನು ನೀರಿನ ನಲ್ಲಿ ರೀತಿಯಲ್ಲಿ ಕೊಳವೆ ಮೂಲಕ ಪೂರೈಕೆ ಮಾಡಲಾಗುತ್ತದೆ. ಪಿಎನ್​ಜಿಯಲ್ಲಿ ಅರ್ಧದಷ್ಟನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಇದನ್ನು ಆಮದು ಮಾಡಿಕೊಂಡರೂ ಹಲವಾರು ದೇಶಗಳಿಂದ ಪೂರೈಕೆ ಪಡೆಯಲಾಗುವುದರಿಂದ ತೊಂದರೆ ಇರುವುದಿಲ್ಲ ಎನ್ನುವ ವಾದ ಇದೆ.

ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?
ಎಲ್​ಪಿಜಿ

Updated on: Mar 16, 2026 | 7:09 PM

ನವದೆಹಲಿ, ಮಾರ್ಚ್ 16: ಭಾರತದಲ್ಲಿ ಎಲ್​ಪಿಜಿಗೆ (LPG) ತುಸು ಹಾಹಾಕಾರ ನಡೆಯುತ್ತಿದೆ. ಸರ್ಕಾರ ಎಲ್​ಪಿಜಿ ಪೂರೈಕೆ ಸರಿಯಾಗಿ ಇದೆ ಎಂದು ಹೇಳಿದರೂ ಸಿಲಿಂಡರ್ ಬುಕಿಂಗ್ ಆಗದೇ ಇರುವುದು, ಡೆಲಿವರಿ ವಿಳಂಬ ಆಗುತ್ತಿರುವುದು ಇತ್ಯಾದಿ ಸಮಸ್ಯೆ ಇದೆ. ಇದೇ ವೇಳೆ, ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಬಳಕೆದಾರರಿಗೆ (PNG users) ಗ್ಯಾಸ್ ಪೂರೈಕೆ ನಿಂತಿಲ್ಲ. ಪ್ರಧಾನಿಗಳು ಇತ್ತೀಚೆಗೆ, ಪಿಎನ್​ಜಿ ಬಳಕೆ ಮಾಡುವಂತೆ ಜನರಿಗೆ ಕರೆ ಕೂಡ ಮಾಡಿದ್ದಾರೆ. ಹಾಗಾದರೆ, ಪಿಎನ್​ಜಿ ಗ್ಯಾಸ್ ಮತ್ತು ಎಲ್​ಪಿಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಮತ್ತು ಪಿಎನ್​ಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಎಂಬುದು ಪೆಟ್ರೋಲಿಯಂ ಉತ್ಪನ್ನ. ಇದು ಕಚ್ಚಾ ತೈಲದಿಂದ ಸಿಗುವ ಒಂದು ಉಪ ಉತ್ಪನ್ನ. ಗ್ಯಾಸ್ ಅನ್ನು ದ್ರವೀಕರಿಸಿ ಸಿಲಿಂಡರ್​ನಲ್ಲಿ ತುಂಬಿಸಿ ಸರಬರಾಜು ಮಾಡಲಾಗುತ್ತದೆ.

ಪಿಎನ್​ಜಿ ಎಂಬುದು ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ನೈಸರ್ಗಿಕ ಅನಿಲ. ನೀರನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುವಂತೆ, ಪಿಎನ್​ಜಿಯನ್ನು ಕೊಳವೆ ಮೂಲಕ ಮನೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

ದೇಶದಲ್ಲಿ ಹೆಚ್ಚಿನ ಮನೆಗಳಲ್ಲಿ ಎಲ್​ಪಿಜಿ ಸಂಪರ್ಕ ಇದೆ. 32 ಕೋಟಿಗೂ ಅಧಿಕ ಮನೆಗಳು ಎಲ್​ಪಿಜಿ ಗ್ಯಾಸ್ ಸೌಲಭ್ಯ ಪಡೆದಿವೆ. ಆದರೆ, ಪಿಎನ್​ಜಿ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ ಒಂದೂವರೆ ಕೋಟಿಗಿಂತ ತುಸು ಹೆಚ್ಚು. ಈಗೀಗ ಇದರ ಬಳಕೆ ಮತ್ತು ಸಂಪರ್ಕ ಜಾಲ ಹೆಚ್ಚುತ್ತಿದೆ.

ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯ ಆಗದಿರುವುದು ಯಾಕೆ?

ಭಾರತಕ್ಕೆ ಬೇಕಾದ ಎಲ್​ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದು ಮಾಡಿಕೊಳ್ಳಲಾಗುತ್ತಿರುವ ಎಲ್​ಪಿಜಿಯಲ್ಲಿ ಶೇ. 80ಕ್ಕಿಂತ ಹೆಚ್ಚಿನಷ್ಟನ್ನು ಕೊಲ್ಲಿ ರಾಷ್ಟ್ರಗಳಿಂದ ಪಡೆಯಲಾಗುತ್ತಿದೆ. ಹೀಗಾಗಿ, ಇರಾನ್ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಪೂರೈಕೆಯಲ್ಲಿ ಗಣನೀಯವಾದ ತೊಂದರೆ ಆಗಿದೆ.

ಆದರೆ, ನೈಸರ್ಗಿಕ ಅನಿಲ ಭಾರತದಲ್ಲೂ ಲಭ್ಯ ಇದೆ. ಭಾರತಕ್ಕೆ ಬೇಕಾದ ಪಿಎನ್​ಜಿಯಲ್ಲಿ ಅರ್ಧದಷ್ಟು ಭಾರತದಲ್ಲೇ ಲಭ್ಯ ಇದೆ. ಉಳಿದವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಆಮದು ಮಾಡಿಕೊಳ್ಳಲು ಒಂದು ಪ್ರದೇಶದ ಮೇಲೆ ಅವಲಂಬಿತವಾಗದೆ, ಅಮೆರಿಕ, ಆಸ್ಟ್ರೇಲಿಯಾ ಇತ್ಯಾದಿ ಹಲವಾರು ರಾಷ್ಟ್ರಗಳಿಂದ ಅದನ್ನು ಪಡೆಯಲಾಗುತ್ತಿದೆ. ಹೀಗಾಗಿ, ಪಿಎನ್​ಜಿ ಪೂರೈಕೆಯಲ್ಲಿ ಭಾರತಕ್ಕೆ ಅಷ್ಟೇನೂ ತೊಂದರೆ ಆಗದಿರಬಹುದು.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಭಾರತದಲ್ಲಿ ಪಿಎನ್​ಜಿ ಸಂಪರ್ಕ ಪಡೆಯುವುದು ಹೇಗೆ?

ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪಿಎನ್​ಜಿ ಸಂಪರ್ಕ ಸೌಲಭ್ಯ ಇದೆ. ಇಂಡಿಯನ್ ಆಯಿಲ್, ಬಿಪಿಸಿಎಲ್, ಅದಾನಿ ಟೋಟಲ್ ಗ್ಯಾಸ್, ಜಿಎಐಎಲ್ ಇತ್ಯಾದಿ ಸಂಸ್ಥೆಗಳು ಪಿಎನ್​ಜಿ ಸೌಲಭ್ಯ ನೀಡುತ್ತವೆ. ಐಜಿಎಲ್, ಎಂಜಿಎಲ್, ಆವಂತಿಕಾ ಗ್ಯಾಸ್, ಜಿಜಿಎಲ್ ಇತ್ಯಾದಿ ಇನ್ನೂ ಅನೇಕ ಸಂಸ್ಥೆಗಳು ಈ ಸೇವೆ ನೀಡುತ್ತವೆ. ಬೆಂಗಳೂರಿನಲ್ಲಿ ಜಿಎಐಎಲ್ ಸಂಸ್ಥೆ ಪಿಎನ್​ಜಿ ಸಂಪರ್ಕ ನೀಡುತ್ತದೆ. ಜಿಎಐಎಲ್​ನ ಅಧಿಕೃತ ವೆಬ್​ಸೈಟ್​ಗೆ ಹೋಗಿ ನೀವಿರುವ ಪ್ರದೇಶದ ಸಮೀಪ ಪಿಎನ್​ಜಿ ಜಾಲ ಇದ್ದರೆ ಪರಿಶೀಲಿಸಿ, ಕನೆಕ್ಷನ್​ಗೆ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us