ಪಾಲಿಸಿ ದಾಖಲೆಯಲ್ಲಿ ತಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ವಿವರಗಳನ್ನು ಅಪ್ಡೇಟ್ ಮಾಡುವಂತೆ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ಎಲ್ಲ ಪಾಲಿಸಿದಾರರನ್ನು ಕೇಳಿದೆ. ಆ ಮೂಲಕ ಮುಂಬರುವ ಐಪಿಒದಲ್ಲಿ ಭಾಗವಹಿಸಲು ಅರ್ಹರಾಗುವಂತೆ ತಿಳಿಸಿದೆ, ಎಂಬುದು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಕರಡು ಪ್ರಕಾರ ಗೊತ್ತಾಗಿದೆ. ಫೆಬ್ರವರಿ 13ನೇ ತಾರೀಕಿನಂದು ಸರ್ಕಾರಿ ಸ್ವಾಮ್ಯದ ಎಲ್ಐಸಿಯಿಂದ ಅಂದಾಜು 63,000 ಕೋಟಿ ರೂಪಾಯಿಗಳಿಗೆ ಸರ್ಕಾರದ ಶೇಕಡಾ 5ರಷ್ಟು ಪಾಲನ್ನು ಮಾರಾಟ ಮಾಡಲು ಬಂಡವಾಳ ಮಾರುಕಟ್ಟೆ ನಿಯಂತ್ರಕವಾದ ಸೆಬಿಗೆ ಕರಡು ಪತ್ರಗಳನ್ನು ಸಲ್ಲಿಸಲಾಯಿತು. 31.6 ಕೋಟಿಗೂ ಹೆಚ್ಚು ಷೇರುಗಳ ಐಪಿಒ ಅಥವಾ ಶೇಕಡಾ 5ರಷ್ಟು ಸರ್ಕಾರಿ ಪಾಲು ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ ಹಾಗೂ ಎಲ್‌ಐಸಿಯ ಉದ್ಯೋಗಿಗಳು ಮತ್ತು ಪಾಲಿಸಿದಾರರು ನಿಗದಿತ ಬೆಲೆಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
“ನಮ್ಮ ನಿಗಮದ ಪಾಲಿಸಿದಾರನು ಪ್ಯಾನ್ ವಿವರಗಳನ್ನು ನಮ್ಮ ನಿಗಮದ ಪಾಲಿಸಿ ದಾಖಲೆಗಳಲ್ಲಿ ಸಾಧ್ಯವಾದಷ್ಟು ಬೇಗ ಅಪ್ಡೇಟ್ ಮಾಡಲಾಗಿದೆ ಎಂದು ಎಂದು ಖಚಿತಪಡಿಸಿಕೊಳ್ಳಬೇಕು. ಸೆಬಿಗೆ ಈ DRHP ಅನ್ನು ಸಲ್ಲಿಸಿದ ದಿನಾಂಕದಿಂದ ಎರಡು ವಾರಗಳ ಅವಧಿ ಮುಗಿಯುವ ಮೊದಲು (ಅಂದರೆ ಫೆಬ್ರವರಿ 28, 2022ರೊಳಗೆ) ನಮ್ಮ ನಿಗಮದೊಂದಿಗೆ ಪ್ಯಾನ್ ವಿವರಗಳನ್ನು ನವೀಕರಿಸದ ಪಾಲಿಸಿದಾರನನ್ನು ಅರ್ಹ ಪಾಲಿಸಿದಾರ ಎಂದು ಪರಿಗಣಿಸಲಾಗುವುದಿಲ್ಲ,” ಎಂದು DRHP ಪ್ರಕಾರ ತಿಳಿಸಲಾಗಿದೆ. ಎಲ್‌ಐಸಿಯ ವೆಬ್‌ಸೈಟ್‌ನಲ್ಲಿ ನೇರವಾಗಿ ಅಥವಾ ಏಜೆಂಟ್‌ಗಳ ಸಹಾಯದಿಂದ ಪ್ಯಾನ್ ಅಪ್ಡೇಟ್ ಮಾಡಬಹುದು.
DRHP ಮತ್ತು ಬಿಡ್/ಆಫರ್ ಆರಂಭದ ದಿನಾಂಕದಂದು ಎಲ್‌ಐಸಿಯ ಒಂದು ಅಥವಾ ಹೆಚ್ಚಿನ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರರು ಮತ್ತು ಭಾರತದ ನಿವಾಸಿಗಳು ಈ ಆಫರ್‌ನಲ್ಲಿ ಪಾಲಿಸಿದಾರರ ಮೀಸಲಾತಿ ಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ. ಅರ್ಹ ಪಾಲಿಸಿದಾರರಿಗೆ ಮೀಸಲಾತಿಯ ಒಟ್ಟು ಮೊತ್ತವು ಒಟ್ಟು ಆಫರ್ ಗಾತ್ರದ ಶೇ 10 ಮೀರಬಾರದು. ಅನುಪಾತದ ಆಧಾರದ ಮೇಲೆ ಅರ್ಹ ಪಾಲಿಸಿದಾರರಿಗೆ ಹಂಚಿಕೆಗಾಗಿ ಲಭ್ಯವಿರುವ ಆಫರ್ನ ಭಾಗವು ಸರ್ಕಾರದಿಂದ ಅಗತ್ಯ ಅನುಮೋದನೆಗಳ ಸ್ವೀಕೃತಿಗೆ ಒಳಪಟ್ಟಿರುತ್ತದೆ.
ಹಣಕಾಸು ವರ್ಷ 2021ರಲ್ಲಿ ಎಲ್ಐಸಿ ಸರಿಸುಮಾರು 2.1 ಕೋಟಿ ವೈಯಕ್ತಿಕ ಪಾಲಿಸಿಗಳನ್ನು ಬಿಡುಗಡೆ ಮಾಡಿತು, ಇದು ಹೊಸ ವೈಯಕ್ತಿಕ ಪಾಲಿಸಿ ನೀಡಿಕೆಗಳಲ್ಲಿ ಸುಮಾರು ಶೇ 75ರಷ್ಟು ಹೊಂದಿದೆ. ಈಗಿನ ಐಪಿಒ ಭಾರತ ಸರ್ಕಾರದಿಂದ ಮಾರಾಟದ ಆಫರ್ ಆಗಿದೆ (Offer For Sale). ಎಲ್ಐಸಿಯಿಂದ ಯಾವುದೇ ಹೊಸ ಷೇರುಗಳ ವಿತರಣೆ ಇಲ್ಲ. ಎಲ್ಐಸಿಯಲ್ಲಿ ಸರ್ಕಾರವು ಶೇ 100ರಷ್ಟು ಪಾಲನ್ನು ಅಥವಾ 632.49 ಕೋಟಿ ಷೇರುಗಳನ್ನು ಹೊಂದಿದ್ದು, ಷೇರುಗಳ ಮುಖಬೆಲೆ 10 ರೂಪಾಯಿ ಆಗಿದೆ. ಎಲ್‌ಐಸಿ ಸಾರ್ವಜನಿಕ ವಿತರಣೆ ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಅತಿ ದೊಡ್ಡ ಐಪಿಒ ಆಗಲಿದೆ. ಒಮ್ಮೆ ಲಿಸ್ಟ್ ಮಾಡಿದರೆ, ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು ರಿಲಯನ್ಸ್ ಮತ್ತು ಟಿಸಿಎಸ್ನಂತಹ ಉನ್ನತ ಕಂಪೆನಿಗಳಿಗೆ ಹೋಲಿಸಬಹುದು.
ಮಾರ್ಚ್ ವೇಳೆಗೆ ಎಲ್‌ಐಸಿಯ ಐಪಿಒ ನಿರೀಕ್ಷಿಸಲಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 78,000 ಕೋಟಿ ರೂಪಾಯಿಗಳ ಪರಿಷ್ಕೃತ ಹೂಡಿಕೆ ಗುರಿಯನ್ನು ಪೂರೈಸಲು ಆದಾಯವು ನಿರ್ಣಾಯಕವಾಗಿದೆ. ಐಪಿಒಗೆ ಅನುಕೂಲವಾಗುವಂತೆ ಎಲ್‌ಐಸಿಯ ಷೇರು ಬಂಡವಾಳವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 100 ಕೋಟಿ ರೂಪಾಯಿಗಳಿಂದ 6,325 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು. ಕಳೆದ ತಿಂಗಳು ಎಲ್ಐಸಿಯು 2021-22ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 1,437 ಕೋಟಿ ರೂಪಾಯಿಗಳ ತೆರಿಗೆಯ ನಂತರದ ಲಾಭವನ್ನು ವರದಿ ಮಾಡಿತ್ತು. ಇದು ಹಿಂದಿನ ವರ್ಷದ ಅವಧಿಯಲ್ಲಿ 6.14 ಕೋಟಿ ರೂಪಾಯಿಗಳಷ್ಟಾಗಿತ್ತು. ಅದರ ಹೊಸ ವ್ಯಾಪಾರ ಪ್ರೀಮಿಯಂ ಬೆಳವಣಿಗೆ ದರವು 2021-22 ರ ಮೊದಲಾರ್ಧದಲ್ಲಿ ಶೇ 554.1ರಷ್ಟು ಇತ್ತು, ವರ್ಷದ ಹಿಂದಿನ ಅವಧಿಯಲ್ಲಿ ಶೇ 394.76ರಷ್ಟಿತ್ತು.
ಇದನ್ನೂ ಓದಿ: ಎಲ್ಐಸಿ ಐಪಿಒ ಇಶ್ಯೂ ಗಾತ್ರ ರೂ. 53,500 ಕೋಟಿಯಿಂದ ರೂ. 93,625 ಕೋಟಿ; ಪ್ರತಿ ಷೇರಿನ ಬೆಲೆ ರೂ. 1,693-2,962 ಸಾಧ್ಯತೆ