
ನವದೆಹಲಿ, ಸೆಪ್ಟೆಂಬರ್ 24: ಪಶ್ಚಿಮ ಏಷ್ಯಾದ ಬಿಗುವಿನ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಬೆಲೆ ಮತ್ತೆ ನೂರು ಡಾಲರ್ ಗಡಿ ದಾಟಿ ಹೋಗಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅಣಿಗೊಳ್ಳುತ್ತಿವೆ. ಖಾಸಗಿ ಪೆಟ್ರೋಲಿಯಂ ಮಾರಾಟಗಾರರು ಡೀಸಲ್ ಮಾರಾಟದಲ್ಲಿ ಮಿತಿ ಹಾಕಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಸುದ್ದಿ ಬಂದಿದ್ದು, ಕೆಲ ಖಾಸಗಿ ಪೆಟ್ರೋಲ್ ಪಂಪ್ಗಳಲ್ಲಿ ಒಬ್ಬರಿಗೆ 50 ಲೀಟರ್ವರೆಗೆ ಮಾತ್ರ ಡೀಸಲ್ ನೀಡಲಾಗುತ್ತಿದೆಯಂತೆ. ಬೇರೆ ಬೇರೆ ಕಡೆ ಬೇರೆ ರೀತಿಯ ಪೂರೈಕೆ ನಿರ್ಬಂಧ ಇದೆ ಎನ್ನಲಾಗಿದೆ.
ವರದಿ ಪ್ರಕಾರ, ಹಲವು ಜಿಯೋ-ಬಿಪಿ ಪೆಟ್ರೋಲ್ ಬಂಕ್ಗಳಲ್ಲಿ ಪ್ರತೀ ಗ್ರಾಹಕರಿಗೆ 50 ಲೀಟರ್ವರೆಗೂ ಮಾತ್ರ ಡೀಸಲ್ ನೀಡಬಹುದು ಎಂದು ಸೂಚಿಸಲಾಗಿದೆಯಂತೆ. ಹಾಗೆಯೇ, ಕೆಲ ಬಂಕ್ಗಳಲ್ಲಿ ದಿನಕ್ಕೆ 6,000 ಲೀಟರ್ ಡೀಸಲ್ ಮಾತ್ರ ಒಂದು ದಿನದಲ್ಲಿ ಮಾರಲು ಅನುಮತಿಸಲಾಗಿದೆ.
ಇದನ್ನೂ ಓದಿ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್
ನಯಾರಾ ಎನರ್ಜಿ ಪೆಟ್ರೋಲ್ ಬಂಕ್ಗಳಲ್ಲಿ ಒಬ್ಬ ಗ್ರಾಹಕರಿಗೆ 70 ಲೀಟರ್ನಿಂದ 200 ಲೀಟರ್ ಡೀಸಲ್ ಪೂರೈಕೆಯ ಮಿತಿ ಹಾಕಲಾಗಿದೆ.
ಇದೇ ವೇಳೆ, ಐಒಸಿಎಲ್, ಬಿಪಿ, ಹೆಚ್ಪಿಯಂತಹ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪೆಟ್ರೋಲ್ ಬಂಕ್ಗಳಲ್ಲಿ ಸದ್ಯ ಯಾವುದೇ ನಿರ್ಬಂಧಗಳಿಲ್ಲದೆ ಪೆಟ್ರೋಲ್, ಡೀಸಲ್ ಪೂರೈಕೆ ಆಗುತ್ತಿದೆ. ದೇಶದಲ್ಲಿ ಶೇ. 90ರಷ್ಟು ಪೆಟ್ರೋಲ್ ಬಂಕ್ಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳದ್ದಾದ್ದರಿಂದ ಹೆಚ್ಚಿನ ಗ್ರಾಹಕರಿಗೆ ದೊಡ್ಡ ವ್ಯತ್ಯಯ ಆಗುವುದಿಲ್ಲ.
ಆದರೆ, ದೂರದೂರುಗಳಿಗೆ ಸಂಚರಿಸುವ ಸರಕು ಸಾಗಣೆ ಲಾರಿಗಳು ಮತ್ತು ಟ್ರಕ್‌ಗಳಿಗೆ ಈ ನಿರ್ಬಂಧಗಳು ಹೆಚ್ಚಿನ ಪರಿಣಾಮ ಬೀರಬಹುದು.
ಇದನ್ನೂ ಓದಿ: ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು
ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಬಹಳ ಹೆಚ್ಚಾಗಿತ್ತು. ಈಗ ಮತ್ತೆ ಅದೇ ಮಟ್ಟಕ್ಕೆ ಬೆಲೆಗಳು ಹೋಗುತ್ತಿವೆ. ಸೆಪ್ಟೆಂಬರ್ 21ರಂದು ಭಾರತದ ತೈಲ ಬುಟ್ಟಿಯಲ್ಲಿನ ಸರಾಸರಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್ಗೆ 117 ಡಾಲರ್ಗೆ ಹೋಗಿದೆ. 2025-26ರ ವರ್ಷದಲ್ಲಿ ಸರಾಸರಿ ಬೆಲೆ 66 ಡಾಲರ್ ಮಾತ್ರ ಇತ್ತು. ಬಹುತೇಕ ಎರಡು ಪಟ್ಟು ಬೆಲೆ ಹೆಚ್ಚಾಗಿದೆ. ಆದರೆ, ಪೆಟ್ರೋಲ್, ಡೀಸಲ್ ಬೆಲೆಗಳಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಒಂದು ಅಂದಾಜು ಪ್ರಕಾರ ತೈಲ ಮಾರುಕಟ್ಟೆ ಕಂಪನಿಗಳು ಒಂದು ಲೀಟರ್ ಡೀಸಲ್ ಮಾರಾಟದಲ್ಲಿ 9 ರೂ ಹಾಗೂ ಪೆಟ್ರೋಲ್ ಮಾರಾಟದಲ್ಲಿ 8 ರೂ ನಷ್ಟ ಕಾಣುತ್ತಿವೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ