ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

Proposed Draft IT rules 2026: ಸರ್ಕಾರ 2021ರ ಐಟಿ ನಿಯಮಗಳಿಗೆ ತಿದ್ದುಪಡಿ ತರುತ್ತಿದೆ. ಇದರ ಕರಡು ತಿದ್ದುಪಡಿ ನಿಯಮಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರರೂ ಕೂಡ ಕಂಟೆಂಟ್ ಹಾಕುವಾಗ ಎಚ್ಚರದಿಂದರಬೇಕು. ಸೂಕ್ಷ್ಮವೆನಿಸುವ ಮಾಹಿತಿ ಹಂಚಿಕೊಂಡರೆ ಸರ್ಕಾರವು ನೇರವಾಗಿ ಕ್ರಮ ತೆಗೆದುಕೊಳ್ಳಲು ಸಾಧ್ಯ. ಈ ತಿದ್ದುಪಡಿ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್
ಸೋಷಿಯಲ್ ಮೀಡಿಯಾ
Image Credit source: Alamy

Updated on: Mar 31, 2026 | 1:28 PM

ನವದೆಹಲಿ, ಮಾರ್ಚ್ 31: ಕೇಂದ್ರ ಸರ್ಕಾರ 2021ರ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ನೈತಿಕ ಸಂಹಿತೆ ನಿಯಮಗಳನ್ನು ಪರಿಷ್ಕರಿಸುತ್ತಿದೆ. ಈ ಸಂಬಂಧ ತಿದ್ದುಪಡಿ ತರುತ್ತಿದ್ದು ಅದರ ಕರಡು ನಿಯಮಗಳನ್ನು ನಿನ್ನೆ ಸೋಮವಾರ ಬಹಿರಂಗಪಡಿಸಿದೆ. ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರನ (social media user) ಮೇಲೆ ಪರಿಣಾಮ ಬೀರಲಿರುವುದು ಸೇರಿದಂತೆ ಕೆಲ ಪ್ರಮುಖ ಸಂಗತಿಗಳು ಈ ಪ್ರಸ್ತಾವಿತ ನಿಯಮಗಳಲ್ಲಿವೆ.

ಗಮನಿಸಬೇಕಾದ ಹೊಸ ಐಟಿ ನಿಯಮಗಳಿವು…

ಆನ್​ಲೈನ್​ನಲ್ಲಿ ಸಾಮಾನ್ಯ ಬಳಕೆದಾರರು ಹಾಕುವ ಪೋಸ್ಟ್​ಗಳು ಸೂಕ್ಷ್ಮವಿದ್ದರೆ, ಅವರಿಗೆ ಸರ್ಕಾರದಿಂದಲೇ ನೇರವಾಗಿ ನೋಟೀಸ್ ಹೋಗಬಹುದು.

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಸರ್ಕಾರ ನೀಡುವ ಸೂಚನೆಗಳು ಗೈಡ್​ಲೈನ್ಸ್ ಮಾತ್ರವೇ ಆಗದೆ, ಕಾನೂನಾತ್ಮಕವಾಗಿ ಪಾಲಿಸುವಂಥದ್ದಿರುತ್ತವೆ. ಇವನ್ನು ಪಾಲಿಸದಿದ್ದರೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಸಾಮಾನ್ಯ ಬಳಕೆದಾರರ ಮೇಲೆ ಯಾಕೆ ಸರ್ಕಾರದ ಕಣ್ಣು?

ಇವತ್ತು ಸೋಷಿಯಲ್ ಮೀಡಿಯಾ ಮತ್ತು ಆನ್​ಲೈನ್ ಪ್ಲಾಟ್​ಫಾರ್ಮ್​ಗಳು ಗಣನೀಯವಾಗಿ ವಿಸ್ತರಣೆ ಕಂಡಿವೆ. ಮಾಧ್ಯಮ ಸಂಸ್ಥೆಗಳಿಗಿಂತ ಹೆಚ್ಚು ಪ್ರಭಾವಶಾಲಿಯಾದ ಪೋಸ್ಟ್​ಗಳು ಸಾಮಾನ್ಯ ಯೂಸರ್​​ಗಳಿಂದ ಬರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಸುಲಭವಾಗಿ ಹರಡಬಹುದು. ಇನ್ಸ್​ಟಾಗ್ರಾಮ್ ಇನ್​ಫ್ಲುಯೆನ್ಸರ್​ಗಳು, ಯೂಟ್ಯೂಬ್ ಚಾನಲ್ ನಡೆಸುವವರು ಮೊದಲಾದವರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳು ಇತರರನ್ನು ಪ್ರಭಾವಿತಗೊಳಿಸಬಹುದು. ಹೀಗಾಗಿ, ಸರ್ಕಾರವು ಈ ಬಳಕೆದಾರರ ಪೋಸ್ಟ್​ಗಳ ಮೇಲೆ ನಿಗಾ ಇರಿಸಲು ಹೊರಟಿರಬಹುದು.

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಹೆಚ್ಚಿನ ಜವಾಬ್ದಾರಿ

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಇಂತಿಂತಹ ಕಂಟೆಂಟ್​ಗಳ ಮೇಲೆ ನಿಗಾ ಇರಿಸಬೇಕು ಎಂದು ಸರ್ಕಾರದಿಂದ ಸಲಹೆ, ಸೂಚನೆಗಳು, ಮಾರ್ಗಸೂಚಿಗಳು ಇವೆ. ಆದರೆ, ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎನ್ನುವ ಕಟ್ಟುಪಾಡು ಇರಲಿಲ್ಲ. ಈಗ ಪ್ರಸ್ತಾವಿತ ನಿಯಮಗಳ ಪ್ರಕಾರ, ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಕಟ್ಟುಪಾಡುಗಳಂತೆ ಭಾವಿಸಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಂಥ ತಪ್ಪು ಪೋಸ್ಟ್ ಅನ್ನು ತೆಗೆದುಹಾಕಬೇಕೆಂದರೆ ಅದನ್ನು ತೆಗೆಯುವುದು ಅನಿವಾರ್ಯ. ಇಲ್ಲದಿದ್ದರೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಕೆಲ ವಾರಗಳ ಹಿಂದೆ ಸರ್ಕಾರವು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ನೀಡಿದ ನಿರ್ದೇಶನದ ಪ್ರಕಾರ, ಒಂದು ಪೋಸ್ಟ್ ಅನ್ನು ತೆಗೆದುಹಾಕುವಂತೆ ಸೂಚನೆ ನೀಡಿದರೆ ಅದನ್ನು ಪಾಲಿಸುವ ಅವಧಿಯನ್ನು 24-36 ಗಂಟೆಗಳಿಂದ ಕೇವಲ 2-3 ಗಂಟೆಗೆ ಇಳಿಸಲಾಗಿದೆ.

ಸದ್ಯ ಸರ್ಕಾರದ ಕರಡು ನಿಯಮಗಳ ಬಗ್ಗೆ ಯಾರಿಗೇ ಆದರೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಏಪ್ರಿಲ್ 14ರವರೆಗೂ ಕಾಲಾವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us