ನವದೆಹಲಿ, ಏಪ್ರಿಲ್ 17: ಭಾರತದ ಯುವ ಸಮುದಾಯ ಬಹಳ ಕ್ರಿಯಾಶೀಲವಾಗಿದೆ. ಈ ವರ್ಗದ ಯುವ ಉದ್ಯಮಿಗಳಿಗೆ (young entrepreneurs) ಈ ಪ್ರಪಂಚವನ್ನು ಬದಲಿಸುವ ಮಹತ್ವಾಕಾಂಕ್ಷೆ ಇದೆ. ವಿಶ್ವದಲ್ಲಿ ಯಾರಿಗೂ ತಾನು ಕಡಿಮೆ ಇಲ್ಲ ಎನ್ನುವ ಮನಸ್ಥಿತಿ ಇದೆ. ಇವರದ್ದು ವಿರಾಟ್ ಕೊಹ್ಲಿ ರೀತಿಯ ಧೋರಣೆ ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಭಾರತದ ಕ್ರಿಯಾಶೀಲ (innovative) ಉದ್ಯಮಿಗಳು ಸ್ಥಳೀಯ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗದೇ ವಿದೇಶಗಳಲ್ಲಿ ಅವಕಾಶ ಅರಸುವಂತಾಗಿದೆ. ಭಾರತ ಬಿಟ್ಟು ಹೊರಗೆ ಹೋಗಿ ಉದ್ಯಮ ಸ್ಥಾಪಿಸುವ ಅನಿವಾರ್ಯ ಸ್ಥಿತಿ ಯಾಕೆ ಬಂದಿದೆ ಎನ್ನುವುದನ್ನು ನಾವು ಕೇಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ನಡೆದ ‘2047ರಲ್ಲಿ ಭಾರತವನ್ನು ಮುಂದುವರಿದ ಆರ್ಥಿಕತೆಯ ದೇಶ ಆಗಬೇಕೆಂದರೆ ಏನು ಮಾಡಬೇಕು’ ಎನ್ನುವ ವಿಚಾರ ಸಂಕಿರಣದಲ್ಲಿ ರಘುರಾಮ್ ರಾಜನ್ ಮಾತನಾಡುತ್ತಿದ್ದರು. ಶೇ. 8ರ ದರದಲ್ಲಿ ಆಗುತ್ತಿರುವ ಭಾರತದ ಜಿಡಿಪಿ ಬೆಳವಣಿಗೆ ದರದ ಬಗ್ಗೆ ರಾಜನ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್ ಸಲಹೆ
ಆರ್ಥಿಕ ತಜ್ಞರೂ ಆಗಿರುವ ರಘುರಾಮ್ ರಾಜನ್ ಪ್ರಕಾರ ಭಾರತದಲ್ಲಿ ಜಿಡಿಪಿ ದರ ಶೇ. 6 ಮಾತ್ರವೇ ಇರುವುದು. ಜನಸಂಖ್ಯಾ ಬಲ ಇದ್ದರೂ ಅದರ ಫಲ ಪಡೆಯಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಅವರು ಚೀನಾ ಮತ್ತು ಕೊರಿಯಾದ ಉಲ್ಲೇಖ ಮಾಡಿದ್ದಾರೆ.
‘ಚೀನಾ ಮತ್ತು ಕೊರಿಯಾ ದೇಶಗಳು ತಮ್ಮ ಜನಸಂಖ್ಯಾ ಬಲದ ಫಲ ಎಷ್ಟು ಪಡೆದಿದ್ದವು ನೋಡಿ. ಅದಕ್ಕೆ ಹೋಲಿಸಿದರೆ ಭಾರತ ಪಡೆಯುತ್ತಿರುವುದು ಏನೇನೂ ಅಲ್ಲ. ಈಗ ನಾವು ಸಾಧಿಸುತ್ತಿರುವ ಬೆಳವಣಿಗೆಯೇ ಅದ್ಬುತ ಎಂದು ಹೇಳಿದರೆ ಅದು ಅತಿರೇಕದಂತೆ ಅನಿಸುತ್ತದೆ. ನಾವು ಜನಸಂಖ್ಯಾಬಲದ ಫಲದಿಂದ ದೂರ ಉಳಿಯುತ್ತಿದ್ದೇವೆ ಎಂಬುದಕ್ಕಿಂತ ಹೆಚ್ಚಾಗಿ ಯುವಕರಿಗೆ ಕೆಲಸ ನೀಡುತ್ತಿಲ್ಲ ಎಂಬುದು ಬೇಸರದ ಸಂಗತಿ,’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಸಕ್ತ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ. 6.8ರಷ್ಟು ಬೆಳೆಯುವ ಸಾಧ್ಯತೆ; ಅಂದಾಜು ಹೆಚ್ಚಿಸಿದ ಐಎಂಎಫ್
ಜನರ ಕೌಶಲ್ಯ ಹೆಚ್ಚಿಸುವುದು ಮತ್ತು ಈಗಿರುವ ಉದ್ಯೋಗಗಳ ರೀತಿಯನ್ನು ತುಸು ಬದಲಿಸುವುದು, ಈ ಎರಡು ಅಂಶಗಳು ನನ್ನ ಮನಸಿಗೆ ಬರುತ್ತವೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಪ್ರೆಂಟಿಸ್ಶಿಪ್ ಐಡಿಯವನ್ನು ಉಲ್ಲೇಖಿಸಿದ್ದಾರೆ.
ಈ ಅಪ್ರೆಂಟಿಸ್ಶಿಪ್ ಐಡಿಯಾವನ್ನು ಪ್ರಯತ್ನಿಸಬಹುದು. ಉತ್ತಮ ಉದ್ಯೋಗಿಯಾಗಲು ಸಮರ್ಥಿರುವಂತಹ ಹಲವು ವಿದ್ಯಾರ್ಥಿಗಳ ಅಗತ್ಯತೆ ಇದೆ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ