ನವದೆಹಲಿ, ಅಕ್ಟೋಬರ್ 9: ಆರ್ಬಿಐ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಸತತ 10ನೇ ಬಾರಿ ಆರ್ಬಿಐ ನಿಲುವು ಅಚಲವಾಗಿದೆ. ಇದರೊಂದಿಗೆ ರೆಪೋ ದರ ಅಥವಾ ಬಡ್ಡಿದರ ಶೇ. 6.50ರಲ್ಲಿ ಮುಂದುವರಿಯಲಿದೆ. ಸೋಮವಾರದಿಂದ ಮೂರು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯ ನಿರ್ಧಾರಗಳನ್ನು ಇಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ಬಿಐನ ಆರು ಎಂಪಿಸಿ ಸದಸ್ಯರಲ್ಲಿ ಐವರು ಸದಸ್ಯರು ರೆಪೋ ದರ ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದರು ಎಂದು ಶಕ್ತಿಕಾಂತದಾಸ್ ಹೇಳಿದ್ದಾರೆ. ಎಂಎಸ್ಎಲ್ಆರ್ ಇತ್ಯಾದಿ ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.
ಇದನ್ನೂ ಓದಿ: ಭಾರತದಲ್ಲಿ ಮ್ಯುಚುವಲ್ ಫಂಡ್ಗೆ ಎಂಟು ದಶಕಗಳ ಇತಿಹಾಸ; 1963ರಿಂದ ಈ ಉದ್ಯಮ ಬೆಳೆದದ್ದು ಹೇಗೆ?
ರಿಪೋ ದರ ಎಂದರೆ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ರಿವರ್ಸ್ ರಿಪೋ ಎಂದರೆ ಆರ್ಬಿಐನಲ್ಲಿ ಬ್ಯಾಂಕುಗಳು ಇಡುವ ಠೇವಣಿಗೆ ಸಿಗುವ ಬಡ್ಡಿಯಾಗಿದೆ. ಆರ್ಬಿಐನ ಈ ದರಗಳು ಬ್ಯಾಂಕುಗಳ ಬಡ್ಡಿದರ ನೀತಿಗೆ ಪ್ರಭಾವ ಬೀರುತ್ತವೆ. ರಿಪೋ ದರಗಳು ಹೆಚ್ಚಾದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ಹೆಚ್ಚಿಸಬಹುದು. ಹೀಗಾಗಿ, ಆರ್ಬಿಐನ ರಿಪೋದರ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಪರಿಣಾಮ ಬೀರುತ್ತದೆ.
ಆಹಾರ ಮತ್ತು ಲೋಹಗಳ ಬೆಲೆಗಳಲ್ಲಿ ಇತ್ತೀಚೆಗೆ ಆಗಿರುವ ಹೆಚ್ಚಳವು ಹಣದುಬ್ಬರ ಹೆಚ್ಚಳಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ಆತಂಕವನ್ನು ಶಕ್ತಿಕಾಂತ ದಾಸ್ ವ್ಯಕ್ತಪಡಿಸಿದ್ದಾರೆ. ಅವರ ಅಂದಾಜಿನ ಪ್ರಕಾರ ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4ರಿಂದ 5ರ ವ್ಯಾಪ್ತಿಯಲ್ಲಿ ಇರಲಿದೆ. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.5ರಷ್ಟು ಇರಲಿದೆ ಎಂದಿದ್ದಾರೆ ಆರ್ಬಿಐ ಗವರ್ನರ್. ಮೂರು ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಹಣದುಬ್ಬರ ಶೇ. 4.8 ಮತ್ತು ಶೇ. 4.2ರಷ್ಟು ಇರಬಹುದು ಎಂಬುದು ಅವರ ಅಂದಾಜು. ಹಾಗೆಯೇ, 2025-26ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ, ಅಂದರೆ 2025ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಹಣದುಬ್ಬರ ಶೇ. 4.3ರಷ್ಟಿರಬಹುದು ಎನ್ನುವ ಅಂದಾಜನ್ನೂಆರ್ಬಿಐ ಮಾಡಿದೆ.
ಇದನ್ನೂ ಓದಿ: ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರ್ಥಿಕತೆ ಬಗ್ಗೆ ಆಶಾದಾಯಕವಾಗಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎಂದಿದ್ದಾರೆ. ಈ ಹಣಕಾಸು ವರ್ಷದ ಎರಡು, ಮೂರು ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಜಿಡಿಪಿ ಕ್ರಮವಾಗಿ ಶೇ. 7.0, ಶೇ. 7.4, ಮತ್ತು ಶೇ. 7.4ರ ದರದಲ್ಲಿ ಬೆಳೆಯಬಹುದು ಎಂದಿದ್ದಾರೆ. ಮುಂದಿನ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದೂ ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:16 am, Wed, 9 October 24