ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ ಸಭೆಯು (MPC Meeting) ಡಿಸೆಂಬರ್ 5ರಿಂದ 7ರ ವರೆಗೆ ನಡೆಯಲಿದ್ದು, ರೆಪೊ ದರವನ್ನು (Repo Rate) 25ರಿಂದ 35 ಮೂಲಾಂಶದಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹಣದುಬ್ಬರವನ್ನು ಮತ್ತಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಆರ್ಬಿಐ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ನಲ್ಲಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್ಬಿಐ 50 ಮೂಲಾಂಶದಷ್ಟು ಬಡ್ಡಿ ದರವನ್ನು ಹೆಚ್ಚಿಸಿತ್ತು.
ಮುಂದಿನ ಹಣಕಾಸು ನೀತಿಯಲ್ಲಿ 35 ಮೂಲಾಂಶದಷ್ಟು ರೆಪೊ ದರ ಹೆಚ್ಚಳದ ನಿರೀಕ್ಷೆ ಇದೆ. ಮುಂಬರುವ ತಿಂಗಳುಗಳಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಇನ್ನಷ್ಟು ನಿಯಂತ್ರಣಕ್ಕೆ ಬರಲಿದ್ದು, ಶೇಕಡಾ 6ಕ್ಕೆ ಇಳಿಕೆಯಾಗಲಿದೆ ಎಂದು ಕೇರ್ ರೇಟಿಂಗ್ಸ್ನ ರಜನಿ ಸಿನ್ಹಾ ತಿಳಿಸಿರುವುದಾಗಿ ‘ಐಎಎನ್ಎಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: New Bank Locker Rules; ಬ್ಯಾಂಕ್ ಲಾಕರ್ ನಿಯಮದಲ್ಲಿ ಆರ್ಬಿಐ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ
ಜಾಗತಿಕ ಮಟ್ಟದಲ್ಲಿ ಸರಕುಗಳ ದರದಲ್ಲಿ ಇಳಿಕೆಯಾಗಿರುವುದು ನಿರಾಳತೆ ಒದಗಿಸಿದೆ. ಆದಾಗ್ಯೂ ಭಾರತದಲ್ಲಿ ಹಣದುಬ್ಬರ ಪ್ರಮಾಣ ಶೇಕಡಾ 6ಕ್ಕಿಂತ ಮೇಲಿದೆ. ಆಹಾರ ದರ ಆಧಾರಿತ ಹಣದುಬ್ಬರವೂ ಮೇಲ್ಮಟ್ಟದಲ್ಲಿದೆ. ಹೀಗಾಗಿ ಆರ್ಬಿಐ ಹೆಚ್ಚು ಜಾಗರೂಕ ನಡೆ ಅನುಸರಿಸಬಹುದು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ ಪ್ರಮಾಣ ಮುಂದಿನ ಮಾರ್ಚ್ವರೆಗೆ ಶೇಕಡಾ 6ಕ್ಕಿಂತ ಕೆಳಗೆ ಬರುವ ನಿರೀಕ್ಷೆ ಇಲ್ಲ. ಹೀಗಾಗಿ ಆರ್ಬಿಐ ರೆಪೊ ದರದಲ್ಲಿ 25ರಿಂದ 35 ಮೂಲಾಂಶ ಮತ್ತೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: FD Rates: ಎಫ್ಡಿ ಬಡ್ಡಿ ದರ ಹೆಚ್ಚಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್; ಇಲ್ಲಿದೆ ವಿವರ
ರೆಪೊ ದರ ಸತತ ಹೆಚ್ಚಳ
ಮೇ ತಿಂಗಳ ನಂತರ ಸೆಪ್ಟೆಂಬರ್ವರೆಗೆ ಆರ್ಬಿಐಯು ಸತತವಾಗಿ ರೆಪೊ ದರ ಹೆಚ್ಚಿಸುತ್ತಲೇ ಬಂದಿದೆ. ಈ ಅವಧಿಯಲ್ಲಿ ರೆಪೊ ದರದಲ್ಲಿ ಒಟ್ಟು 190 ಮೂಲಾಂಶ ಹೆಚ್ಚಳ ಮಾಡಲಾಗಿದೆ. ಸದ್ಯ ರೆಪೊ ದರ ಪ್ರಮಾಣ ಶೇಕಡಾ 5.9ರಷ್ಟಿದೆ. ಇಷ್ಟಾಗಿಯೂ ಹಣದುಬ್ಬರ ಪ್ರಮಾಣ ಶೇಕಡಾ 6ಕ್ಕಿಂತ ಕೆಳಗೆ ತರುವುದು ಆರ್ಬಿಐಗೆ ಸಾಧ್ಯವಾಗಿಲ್ಲ. ಆದರೆ ಹಣದುಬ್ಬರದ ತೀವ್ರಗತಿಯ ಏರಿಕೆ ತಡೆಯುವಲ್ಲಿ ತುಸು ಮಟ್ಟಿಗೆ ಆರ್ಬಿಐ ಯಶಸ್ವಿಯಾಗಿದೆ.
ರೆಪೊ ದರ ಎಂದರೇನು? ಹೆಚ್ಚಳದ ಪರಿಣಾಮವೇನು?
ಸರಳವಾಗಿ ಹೇಳುವುದಾದರೆ, ದೇಶದ ಬ್ಯಾಂಕ್ಗಳಿಗೆ ಆರ್ಬಿಐ ನೀಡುವ ಹಣಕಾಸು ನಿಧಿಗೆ ಅಥವಾ ಸಾಲಕ್ಕೆ ವಿಧಿಸುವ ಬಡ್ಡಿ ದರವೇ ರೆಪೊ ದರ. ಹೀಗಾಗಿ ರೆಪೊ ದರದಲ್ಲಿ ವ್ಯತ್ಯಾಸವಾದಾಗ ಬ್ಯಾಂಕ್ಗಳ ಬಡ್ಡಿ ದರದಲ್ಲಿಯೂ ವ್ಯತ್ಯಾಸವಾಗುತ್ತದೆ. ಆರ್ಬಿಐ ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ರೆಪೊ ಹೆಚ್ಚಿಸಿದ್ದರಿಂದ ಅನೇಕ ಬ್ಯಾಂಕ್ಗಳು ಸಹ ಸಾಲ ಮತ್ತು ವಿವಿಧ ಠೇವಣಿಗಳ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ರೆಪೊ ದರ ಹೆಚ್ಚಳವಾದರೆ ಗೃಹ, ವಾಹನ ಮತ್ತಿತರ ಸಾಲ ಪಡೆದವರ ಇಎಂಐ ಮೊತ್ತದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ