ಚೀನಾದ ಎವರ್ಗ್ರ್ಯಾಂಡ್ (Evergrande) ಈಗ ಎಲ್ಲೆಲ್ಲೂ ಚರ್ಚೆಯಲ್ಲಿದೆ. ಚೀನಾದ ಪಾಲಿನ ಪೋಸ್ಟರ್ಬಾಯ್ನಂತಿದ್ದ ಈ ರಿಯಲ್ ಎಸ್ಟೇಟ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲೇ ಸೃಷ್ಟಿಸಿರುವ ತಲ್ಲಣ ಎಂಥದ್ದು ಎಂಬುದು ಗೊತ್ತಾಗಬೇಕಾದರೆ ಆರಂಭದಿಂದ ಹೇಳಬೇಕಾಗುತ್ತದೆ. ಇಲ್ಲಿ ಆರಂಭ ಯಾವುದು ಅಂದರೆ, ಬಾಟಲಿ ನೀರಿನ ಮಾರಾಟ ಆರಂಭಿಸುವ ಮೂಲಕ 25 ವರ್ಷದ ಹಿಂದೆ ಖ್ಯಾತಿ ಪಡೆಯಲು ಶುರುವಾದ ಆ ದಿನಗಳಿಂದ ಹೇಳಬೇಕು. ಎವರ್ಗ್ರ್ಯಾಂಡ್ ಆರಂಭ ಮಾಡಿದ್ದು ಬಾಟಲಿ ನೀರಿನ ಮಾರಾಟವನ್ನು ಮತ್ತು ಹಂದಿ ಸಾಕಣೆಯನ್ನು. ಆದರೆ ಕಂಪೆನಿಯು ಗುವಾಂಗ್ಝೌನಲ್ಲಿ ಫುಟ್ಬಾಲ್ ಕ್ಲಬ್ ಅನ್ನು ಕೂಡ ಹೊಂದಿದೆ. ಮಧ್ಯಮ ವರ್ಗದವರ ಪಾಲಿಗೆ ಸ್ವಂತ ಮನೆ ಅಂದರೆ, ಅದು ಎವರ್ಗ್ರ್ಯಾಂಡ್ನಿಂದ ಎಂಬಷ್ಟರ ಮಟ್ಟಿಗೆ ಹೆಸರಾಗಿದೆ. 250ರಷ್ಟು ನಗರಗಳಲ್ಲಿ ಕಂಪೆನಿ ಕಾರ್ಯ ನಿರ್ವಹಿಸುತ್ತದೆ. ಕೊರೊನಾ ಬಿಕ್ಕಟ್ಟಿನ ನಂತರ ಚೀನಾದಲ್ಲಿ ಆಸ್ತಿ ಬೆಲೆ ಜಾಸ್ತಿ ಆಯಿತು. ಅದರಿಂದ ಲಾಭ ಪಡೆದಂಥ ಕಂಪೆನಿಯಿದು.
ಆದರೆ, ಎವರ್ಗ್ರ್ಯಾಂಡ್ನ ಇವತ್ತಿನ ಬಿಕ್ಕಟ್ಟಿಗೆ ಎರಡು ಮುಖ್ಯ ಕಾರಣಗಳು ಚೀನಾದ ನಿಯಂತ್ರಕ ಸಂಸ್ಥೆಗಳಿಂದ ಪ್ರಾಪರ್ಟಿ ಡೆವಲಪರ್ಗಳು ಸಾಲಗಳ ಬಗ್ಗೆ ತನಿಖೆ ಶುರುವಾಯಿತು. ತನ್ನ ಉದ್ಯಮದಲ್ಲಿ ಸ್ವಲ್ಪ ಭಾಗವನ್ನು ಮಾರಿಬಿಟ್ಟು, ಈ ಸಮಸ್ಯೆಯಿಂದ ಹೊರಬಂದು ಬಿಡೋಣ ಅಂದುಕೊಂಡಿತು ಎವರ್ಗ್ರ್ಯಾಂಡ್. ಆದರೆ ಇದೇ ಯೋಜನೆ ಉಲ್ಟಾ ಹೊಡೆದು, ಸಮಸ್ಯೆ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣ ಆಯಿತು. ಚೀನಾದ ಆಸ್ತಿ ಮಾರುಕಟ್ಟೆ ಹಿಂಜರಿತ ಆಗಿ ಮತ್ತು ಹೊಸ ಮನೆಗಳಿಗೆ ಬೇಡಿಕೆ ಇಳಿದುಹೋಯಿತು. ಇನ್ನು ನಗದು ಹರಿವು ಹೇಗೆ ಸಾಧ್ಯ? ನಿಮಗೆ ಊಹೆ ಮಾಡುವುದಕ್ಕೆ ಸಾಧ್ಯವಾ? ಎವರ್ಗ್ರ್ಯಾಂಡ್ಗೆ 30,000 ಕೋಟಿ ಅಮೆರಿಕನ್ ಡಾಲರ್ ಸಾಲ ಇದೆ. ಇದನ್ನೇ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 22,15,728 ಕೋಟಿ (22.15 ಲಕ್ಷ ಕೋಟಿ) ಆಗುತ್ತದೆ. ಸಾಲ ಇದೆ ಅಂತಷ್ಟೇ ಅಲ್ಲ, ಕಂಪೆನಿ ಷೇರು ಬೆಲೆ ಕುಸಿದಿದೆ ಹಾಗೂ ಜತೆಗೆ ಕ್ರೆಡಿಟ್ ರೇಟಿಂಗ್ಸ್ಗೆ ಪೆಟ್ಟು ಬಿದ್ದಿದೆ. ಪೂರೈಕೆದಾರರಿಗೆ ಕೊಡದೆ ಬಾಕಿ ಉಳಿಸಿಕೊಂಡ ದುಡ್ಡು, ಈಗಾಗಲೇ ಮನೆಯ ಸಲುವಾಗಿ ಭಾಗಶಃ ಹಣ ಪಾವತಿಸಿರುವ ಖರೀದಿದಾರರು ಸಹ ಇದ್ದಾರೆ. ಎವರ್ಗ್ರ್ಯಾಂಡ್ನ ಹಣಕಾಸಿನ ಬಿಕ್ಕಟ್ಟು ಮೊನ್ನೆ ಇಡೀ ಜಗತ್ತು ತಲ್ಲಣಿಸಿದ ಅತಿ ದೊಡ್ಡ ಹಾಗೂ ಮುಖ್ಯ ಸಂಗತಿ ಆಗಿತ್ತು.
ಕೊರೊನಾ ಬಿಕ್ಕಟ್ಟಿನ ನಂತರ ಬಹಳ ಬೇಗ ಆರ್ಥಿಕವಾಗಿಯೂ ಚೇತರಿಕೆ ಕಂಡ ದೇಶ ಚೀನಾ. ಜಾಗತಿಕ ಮಾರುಕಟ್ಟೆಯಲ್ಲಿ ಪದಾರ್ಥಗಳ ಬೆಲೆ ಮೇಲೇರಲು ಮುಖ್ಯ ಕಾರಣ ಆಯಿತು. ಇದರ ಜತೆಗೆ ಚೀನಾದಲ್ಲಿ 1990ರ ಮಧ್ಯದಿಂದ ಆರಂಭವಾದ ಆಸ್ತಿ ಬೆಲೆ ಏರಿಕೆಯು ಆ ದೇಶದ ಕುಟುಂಬಗಳ ಶೇ 75ರಷ್ಟು ಸಂಪತ್ತನ್ನು ಹೊಂದಿದೆ. ಎವರ್ಗ್ರ್ಯಾಂಡ್ ಕುಸಿತ ಆದಲ್ಲಿ ಮೊದಲಿಗೆ ದೊಪ್ಪನೆ ಬೀಳುವುದು ಚೀನಾದ ಆರ್ಥಿಕತೆ. ಇದರಿಂದ ಬೆಳವಣಿಗೆ ಕಡಿಮೆ ಆಗಲಿದೆ ಮತ್ತು ಜಾಗತಿಕ ಮಾರುಕಟ್ಟೆಗಳು ಹಾಗೂ ಪದಾರ್ಥಗಳ ಮೇಲೂ ಪ್ರಭಾವ ಆಗುತ್ತದೆ. ಇದರ ಜತೆಗೆ ಚೀನಾದ ಸರ್ಕಾರಿ ಸ್ವಾಮ್ಯದ ಹ್ಯುರಾಂಗ್ ಹಣಕಾಸು ಒಕ್ಕೂಟಕ್ಕೆ 24 ಕೋಟಿ ಅಮೆರಿಕನ್ ಡಾಲರ್ ಸಾಲ ವಾಪಸ್ ಆಗಬೇಕಿದೆ. ಆದರೆ ಈಗಿನ ಸನ್ನಿವೇಶ ಕೈ ಮೀರದಂತೆ ನೋಡಿಕೊಳ್ಳಲು ಸರ್ಕಾರ ಭಾರೀ ಪ್ರಯತ್ನ ನಡೆಸುತ್ತಿದೆ.
ಇನ್ನು 2021ರ ಆರಂಭದಿಂದಲೂ ಲೋಹದ ಸೆಗ್ಮೆಂಟ್ ಏರಿಕೆ ಕಾಣುತ್ತಾ ಬಂದಿದ್ದು, ಸೋಮವಾರದಂದು ತೀಕ್ಷ್ಣ ಇಳಿಕೆ ಕಂಡಿದೆ. ವಿಶ್ಲೇಷಕರು ಹೇಳುವಂತೆ, ಇದು ಅಲ್ಪಾವಧಿಯ ಕುಸಿತ ಅಷ್ಟೇ. ಒಂದು ವೇಳೆ ಎವರ್ಗ್ರ್ಯಾಂಡ್ ಬಿಕ್ಕಟ್ಟು ಪರಿಹಾರ ಆಗದೇ ಇದ್ದಲ್ಲಿ ಇದರಿಂದ ದೀರ್ಘಾವಧಿ ಪರಿಣಾಮ ಬೀರುತ್ತದೆ. ಇದರ ಜತೆಗೆ ಭಾರತದಿಂದ ಚೀನಾಗೆ ಕಬ್ಬಿಣದ ಅದಿರು ರಫ್ತಾಗುತ್ತಿದೆ. ಒಂದು ವೇಳೆ ಚೀನಾದ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಹೊಡೆತ ಬಿದ್ದರೆ ಇದರಿಂದ ಮತ್ತೊಂದು ಬಗೆಯ ಸಮಸ್ಯೆ ಆಗುತ್ತದೆ.
ಇದನ್ನೂ ಓದಿ: China Exposed Again: ವಿಶ್ವಬ್ಯಾಂಕ್ಗೂ ಹಬ್ಬಿದ ಚೀನಾದ ಮೋಸ; ಜಗತ್ತಿನ ಮುಂದೆ ಕಳಚಿದ ಡ್ರ್ಯಾಗನ್ ಮುಖವಾಡ
(Rs 22 Lakh Crore Worth Of Chinas Real Estate Empire Evergrande Collapse Here Is The Impact On India Explained)
Published On - 5:46 pm, Wed, 22 September 21