Rupee Value: ರೂಪಾಯಿ ಮೌಲ್ಯ ದಾಖಲೆ ಕುಸಿತ: ಅಮೆರಿಕ ಡಾಲರ್ ಎದುರು 78.29ಕ್ಕೆ ಆರಂಭಿಕ ವಹಿವಾಟು
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ (ಜೂನ್ 13) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಮುಂಬೈ: ದೇಶದ ಆರ್ಥಿಕತೆ (Indian Economy) ಚೇತರಿಕೆ ಹಾದಿಯಲ್ಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಿಗೇ ರೂಪಾಯಿ ಮೌಲ್ಯ (Rupee Value) ಕುಸಿಯುತ್ತಿರುವುದು ಹೊಸ ಆತಂಕ ತಂದೊಡ್ಡಿದೆ. ಅಮೆರಿಕದ ಡಾಲರ್ (American Dollor) ಎದುರು ರೂಪಾಯಿ ಮೌಲ್ಯವು ಸೋಮವಾರ (ಜೂನ್ 13) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವಿವಿಧ ದೇಶಗಳಲ್ಲಿ ಷೇರುಪೇಟೆ (Share Market) ಕುಸಿಯುತ್ತಿರುವುದು ಮತ್ತು ಬಾಂಡ್ಗಳ ಯೀಲ್ಡ್ (Bond Yield) ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಆದರೆ ಅಮೆರಿಕದ ಡಾಲರ್ನತ್ತ ಹೂಡಿಕೆದಾರರ ಆಸಕ್ತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಸೇರಿದಂತೆ ಹಲವು ದೇಶಗಳ ಕರೆನ್ಸಿ ಮೌಲ್ಯ ಕುಸಿತ ಕಾಣುತ್ತಿದೆ.
ಭಾರತವೂ ಸೇರಿದಂತೆ ಏಷ್ಯಾದ ಷೇರುಪೇಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣ ಹಿಂದಕ್ಕೆ ತೆಗೆಯುವುದನ್ನು ಮುಂದುವರಿಸಿದ್ದಾರೆ. ಇದೂ ಸಹ ಷೇರುಪೇಟೆಯ ಬಗ್ಗೆ ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದ್ದು, ಬಹುತೇಕರು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಇಂಟರ್ಬ್ಯಾಂಕ್ ಫಾರಿನ್ ಎಕ್ಸ್ಚೇಂಜ್ನಲ್ಲಿ ಭಾರತದ ರೂಪಾಯಿಯು ಅಮೆರಿಕದ ಡಾಲರ್ ಎದುರು ₹ 78.20 ಮೌಲ್ಯದೊಂದಿಗೆ ವಹಿವಾಟು ಆರಂಭಿಸಿತು. ನಂತರ ಒಮ್ಮೆಲೆ ₹ 78.29ಕ್ಕೆ ಕುಸಿಯಿತು. ಇದು ಹಿಂದಿನ ವಹಿವಾಟಿನ ಮೌಲ್ಯಕ್ಕೆ ಹೋಲಿಸಿದರೆ 36 ಪೈಸೆ ಕಡಿಮೆ ಮತ್ತು ಸಾರ್ವಕಾನಿಕ ಕನಿಷ್ಠ ಮೊತ್ತ ಎನಿಸಿದೆ. ಕಳೆದ ಶುಕ್ರವಾರ ಭಾರದ ರೂಪಾಯಿ ಅಮೆರಿಕದ ಡಾಲರ್ ಎದುರು 19 ಪೈಸೆಗಳಷ್ಟು ಮೌಲ್ಯ ಕಳೆದುಕೊಂಡು, ₹ 77.93ರ ಮೌಲ್ಯದಲ್ಲಿ ವಹಿವಾಟು ನಡೆಸಿತ್ತು.
‘ಜಾಗತಿಕ ಮಾರುಕಟ್ಟೆಯಲ್ಲಿ ಕಳಾಹೀನ ವಾತಾವರಣ, ಏಷ್ಯಾ ಮತ್ತು ಐರೋಪ್ಯ ದೇಶಗಳ ಕರೆನ್ಸಿ ಮೌಲ್ಯ ಕುಸಿತವು ಭಾರತದ ರೂಪಾಯಿ ಮೌಲ್ಯದ ಮೇಲೆಯೂ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯವು ಒಂದು ಡಾಲರ್ಗೆ ₹ 77.70ಕ್ಕಿಂತಲೂ ಕಡಿಮೆ ಮೊತ್ತಕ್ಕೆ ಕುಸಿಯಲು ಬಿಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಭರವಸೆ ನೀಡಿದ ನಂತರ ಡಾಲರ್ ಎದುರು ರೂಪಾಯಿ ಮೊತ್ತವು ₹ 78ರ ಮೊತ್ತಕ್ಕೆ ವಹಿವಾಟು ಆರಂಭಿಸಿತ್ತು. ರೂಪಾಯಿ ಮೌಲ್ಯ ಕುಸಿತ ತಡೆಯಲು ರಿಸರ್ವ್ ಬ್ಯಾಂಕ್ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಗಮನಿಸಬೇಕಿದೆ’ ಎಂದು ಫಿರೆಕ್ಸ್ ಟ್ರೆಷರಿ ಅಡ್ವೈಸರ್ಸ್ನ ಅನಿಲ್ ಕುಮಾರ್ ಭನ್ಸಾಲಿ ಹೇಳಿದ್ದಾರೆ.
ವಿಶ್ವದ ಪೆಟ್ರೋಲಿಯಂ ಉತ್ಪನ್ನಗಳ ಬೆಂಚ್ಮಾರ್ಕ್ ಎನಿಸಿದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಸಹ ಪ್ರತಿ ಬ್ಯಾರೆಲ್ಗೆ ಶೇ 1.46ರಷ್ಟು ಕಡಿಮೆಯಾಗಿದೆ. ಒಂದು ಬ್ಯಾರೆಲ್ ಕಚ್ಚಾತೈಲಕ್ಕೆ 120.23 ಡಾಲರ್ ಮುಟ್ಟಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದೆ. ಜೂನ್ 13ನೇ ತಾರೀಕಿನ ಸೋಮವಾರದ ಆರಂಭದ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆ ಹೊತ್ತಿಗೆ ಸೆನ್ಸೆಕ್ಸ್ 1448.13 ಪಾಯಿಂಟ್ಸ್ ಅಥವಾ ಶೇ 2.67ರಷ್ಟು ಕುಸಿತ ಕಂಡು, 52,855.31 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 414.10 ಪಾಯಿಂಟ್ಸ್ ಅಥವಾ ಶೇ 2.56ರಷ್ಟು ನೆಲ ಕಚ್ಚಿ, 15,787.70 ಪಾಯಿಂಟ್ಸ್ನಲ್ಲಿತ್ತು. 508 ಕಂಪೆನಿಗಳ ಷೇರು ಏರಿಕೆ ದಾಖಲಿಸಿದರೆ, 2428 ಕಂಪೆನಿಯ ಷೇರು ಇಳಿಕೆಯಲ್ಲಿತ್ತು. 105 ಕಂಪೆನಿ ಷೇರುಗಳಲ್ಲಿ ಯಾವುದೇ ದರ ಬದಲಾವಣೆ ಆಗಲಿಲ್ಲ. ವಲಯವಾರು ಗಮನಿಸಿದರೆ, ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಎಲ್ಲ ವಲಯಗಳೂ ಕುಸಿತ ದಾಖಲಿಸಿದ್ದವು. ಬಿಎಸ್ಇಯಲ್ಲಿ ರಿಯಾಲ್ಟಿ ಶೇ 3.09ರಷ್ಟು ನಷ್ಟ ಕಂಡಿತು. ಕ್ಯಾಪಿಟಲ್ ಗೂಡ್ಸ್, ಮಾಹಿತಿ ತಂತ್ರಜ್ಞಾನ, ಲೋಹ, ತೈಲ ಮತ್ತು ಅನಿಲ ವಲಯಗಳು ಶೇ 2ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದವು. ಇನ್ನು ಬಿಎಸ್ಇ ಮಿಡ್ಕ್ಯಾಪ್ ಶೇ 2.09 ಮತ್ತು ಸ್ಮಾಲ್ ಕ್ಯಾಪ್ ಶೇ 2.27ರಷ್ಟು ನಷ್ಟ ಅನುಭವಿಸಿದವು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Mon, 13 June 22