
ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ ‘ಯೂನಿಕಾರ್ನ್’ (Unicorn) ಸ್ಟಾರ್ಟ್‌ಅಪ್ ಆಗಿ ಹೊರಹೊಮ್ಮಿದೆ.
ಈ ಹೂಡಿಕೆ ಸುತ್ತಿನಲ್ಲಿ ಜಾಗತಿಕ ಐಟಿ ದೈತ್ಯ ಕಂಪನಿಯಾದ ಹೆಚ್ಸಿಎಲ್ಟೆಕ್ನೊಂದೇ (HCLTech) 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಮೂಲಕ ಸರ್ವಮ್ AI ಕಂಪನಿಯಲ್ಲಿ ಶೇ. 10.46 ರಷ್ಟು ಪಾಲನ್ನು (Stake) ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್, ಖೋಸ್ಲಾ ವೆಂಚರ್ಸ್ ಮತ್ತು ಪೀಕ್ ಎಕ್ಸ್‌ವಿ ಪಾರ್ಟ್‌ನರ್ಸ್ (ಹಳೆಯ ಸಿಕ್ವೊಯಾ ಕ್ಯಾಪಿಟಲ್) ಕಂಪನಿಗಳು ಸಹ ಭಾಗವಹಿಸಿವೆ. ಸರ್ವಂ ಎಐ ಮೇಲೆ ಹೂಡಿಕೆ ಮಾಡಿದ ಬೆನ್ನಲ್ಲೇ ಎಚ್ಸಿಎಲ್ ಟೆಕ್ ಕಂಪನಿ ಮಂಗಳವಾರದ ಷೇರು ಟ್ರೇಡಿಂಗ್ನಲ್ಲಿ ಬೇಡಿಕೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ. ಅದರ ಷೇರುಬೆಲೆ ಶೇ. 3ರಷ್ಟು ಹೆಚ್ಚಿದೆ.
ಸರ್ವಂ ಕಂಪನಿಯ ಆದಾಯವು 2024-25ರ ಹಣಕಾಸು ವರ್ಷದಲ್ಲಿ ₹1.5 ಕೋಟಿಯಷ್ಟಿತ್ತು. ಒಂದು ವರ್ಷದಲ್ಲಿ (2025-26) ಭಾರಿ ಜಿಗಿತ ಕಂಡು ₹45.1 ಕೋಟಿಗೆ ತಲುಪಿದೆ. ಹೀಗಾಗಿ, ಈ ಕಂಪನಿ ಸುಸ್ಥಿರ ಬೆಳವಣಿಗೆ ಸಾಧಿಸುವ ವಿಶ್ವಾಸವು ಹೂಡಿಕೆದಾರರಲ್ಲಿ ಮೂಡಿಸಿದಂತಿದೆ. ಪರಿಣಾಮವಾಗಿ, ಬಹಳ ಕ್ಷಿಪ್ರ ವೇಗದಲ್ಲಿ ಸರ್ವಂ ಎಐ ಯೂನಿಕಾರ್ನ್ ಕಂಪನಿ ಮಟ್ಟಕ್ಕೆ ಬೆಳೆದಿದೆ.
ಇದನ್ನೂ ಓದಿ: ಎನ್ಆರ್ಐಗಳ ಡೆಪಾಸಿಟ್ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?
ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗದ ಸ್ಟಾರ್ಟಪ್ವೊಂದು ಮೌಲ್ಯದಲ್ಲಿ ಒಂದು ಬಿಲಿಯನ್ ಡಾಲರ್ ಮಟ್ಟ ದಾಟಿದಾಗ ಅದು ಯೂನಿಕಾರ್ನ್ ಎನಿಸುತ್ತದೆ. ಭಾರತದಲ್ಲಿ 130ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳನ್ನು ಹೊಂದಿರುವುದು.
ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಜಂಟಿಯಾಗಿ ಸ್ಥಾಪಿಸಿದ ಈ ಬೆಂಗಳೂರು ಮೂಲದ ಕಂಪನಿಯು ಕೇವಲ ಆ್ಯಪ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ, ಭಾರತೀಯ ಭಾಷೆಗಳು ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೆಯಾಗುವಂತೆ ಮೊದಲಿನಿಂದಲೇ (From Scratch) AI ಮಾದರಿಗಳನ್ನು (Foundational Models) ಅಭಿವೃದ್ಧಿಪಡಿಸುತ್ತಿದೆ.
ಸದ್ಯ ಈ ಕಂಪನಿಯ AI ಪ್ಲಾಟ್‌ಫಾರ್ಮ್ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಸಂಭಾಷಣೆಗಳನ್ನು (Interactions) ನಿಭಾಯಿಸುತ್ತಿದೆ ಮತ್ತು ದಿನಕ್ಕೆ 1 ಕೋಟಿಗೂ ಹೆಚ್ಚು ಎಪಿಐ (API) ಕರೆಗಳನ್ನು ಪ್ರೊಸೆಸ್ ಮಾಡುತ್ತಿದೆ.
ಕೇಂದ್ರ ಕೃಷಿ ಸಚಿವಾಲಯದ ಸಹಯೋಗದೊಂದಿಗೆ, ಈ ಕಂಪನಿಯ ಬಹುಭಾಷಾ ಧ್ವನಿ ತಂತ್ರಜ್ಞಾನವು (Multilingual Voice Agents) ದೇಶದ 1.7 ಕೋಟಿ ರೈತರಿಂದ ಯಶಸ್ವಿಯಾಗಿ ಮಾಹಿತಿ ಸಂಗ್ರಹಿಸಿದೆ.
ದೇಶದ ಪ್ರಮುಖ ವಿಮಾ ಕಂಪನಿಯೊಂದರ ಪಾಲಿಸಿ ನವೀಕರಣಕ್ಕಾಗಿ (Policy Renewal) ಈ AI ತಂತ್ರಜ್ಞಾನವು ದೇಶಾದ್ಯಂತ 4.5 ಕೋಟಿ ಗ್ರಾಹಕರನ್ನು ತಲುಪಿದೆ.
ಕಂಪನಿಯ ಸಹ-ಸ್ಥಾಪಕ ಪ್ರತ್ಯುಷ್ ಕುಮಾರ್ ಅವರ ಪ್ರಕಾರ, ಸೀರೀಸ್-ಬಿ ರೌಂಡ್‌ನಲ್ಲಿ ಬಂದ ಈ ಹೊಸ ಬಂಡವಾಳವನ್ನು ಭಾರತಕ್ಕೆಂದೇ ಪ್ರತ್ಯೇಕವಾದ ಸಾರ್ವಭೌಮ AI (Sovereign AI) ವ್ಯವಸ್ಥೆಯನ್ನು ಬಲಪಡಿಸಲು ಬಳಸಲಾಗುತ್ತದೆ.
“ನಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವ, ನಮ್ಮ ದಾಖಲೆಗಳನ್ನು ಓದುವ ಮತ್ತು ಪ್ರತಿಯೊಂದು ಉದ್ಯಮ ಹಾಗೂ ಸರ್ಕಾರಕ್ಕೂ ಕೈಗೆಟುಕುವ ವೆಚ್ಚದಲ್ಲಿ ಬುದ್ಧಿವಂತಿಕೆ ಸೇವೆಯನ್ನು ನೀಡುವ AI ಮಾದರಿಗಳನ್ನು ಭಾರತೀಯ ಮಟ್ಟದಲ್ಲಿ ರೂಪಿಸುವುದೇ ನಮ್ಮ ಗುರಿ” ಎಂದು ಸರ್ವಂ ಎಐ ಕಂಪನಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Tue, 16 June 26