UPI Payment: ರೀಟೇಲ್ ಹೂಡಿಕೆದಾರರು ಐಪಿಒಗಳಿಗೆ ರೂ 5 ಲಕ್ಷದವರೆಗಿನ ಪಾವತಿಗೆ ಯುಪಿಐ ಬಳಕೆ
ಐಪಿಒಗೆ ಅರ್ಜಿ ಹಾಕುವ ರೀಟೇಲ್ ಹೂಡಿಕೆದಾರರು ಯುಪಿಐ ಬಳಸಬಹುದು ಎಂದು ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೇಳಿದೆ.
ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮಂಗಳವಾರದಂದು ಹೇಳಿರುವ ಪ್ರಕಾರ, ಈಕ್ವಿಟಿ ಷೇರುಗಳು ಮತ್ತು ಕನ್ವರ್ಟಿಬಲ್‌ಗಳ ಸಾರ್ವಜನಿಕ ಐಪಿಒಗಳಲ್ಲಿ ಅರ್ಜಿ ಸಲ್ಲಿಸುವ ವೈಯಕ್ತಿಕ ಹೂಡಿಕೆದಾರರು 5 ಲಕ್ಷ ರೂಪಾಯಿವರೆಗಿನ ಅರ್ಜಿ ಮೊತ್ತಕ್ಕಾಗಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಬಳಸಬಹುದು. ಅಲ್ಲದೆ, ಸಿಂಡಿಕೇಟ್ ಸದಸ್ಯ, ಸ್ಟಾಕ್ ಬ್ರೋಕರ್, ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ಮತ್ತು ರಿಜಿಸ್ಟ್ರಾರ್ ಹಾಗೂ ಷೇರು ವರ್ಗಾವಣೆ ಏಜೆಂಟ್‌ಗೆ ಈ ಯಾವುದೇ ಘಟಕಗಳೊಂದಿಗೆ ಸಲ್ಲಿಸಿದ ಬಿಡ್-ಕಮ್-ಅರ್ಜಿ ನಮೂನೆಯಲ್ಲಿ ತಮ್ಮ ಯುಪಿಐ ಐಡಿಯನ್ನು ಒದಗಿಸಲು ಕೇಳಲಾಗಿದೆ.
ಮೇ 1, 2022ರಂದು ಅಥವಾ ನಂತರ ತೆರೆಯುವ ಸಾರ್ವಜನಿಕ ವಿತರಣೆಗಳಿಗೆ ಹೊಸ ಮಾರ್ಗಸೂಚಿಗಳು ಜಾರಿಗೆ ಬರುತ್ತವೆ ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ. ಹೆಚ್ಚಿದ ಯುಪಿಐ ಮಿತಿಯೊಂದಿಗೆ ಅರ್ಜಿಗಳ ಪ್ರಕ್ರಿಯೆಗೆ ಅನುಕೂಲವಾಗುವಂತೆ ವಿವಿಧ ಮಧ್ಯವರ್ತಿಗಳಲ್ಲಿ ಅಗತ್ಯವಿರುವ ವ್ಯವಸ್ಥಿತ ಸಿದ್ಧತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪರಿಶೀಲಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮಾರ್ಚ್ 30, 2022ರಂತೆ, ಶೇಕಡಾ 80ಕ್ಕಿಂತ ಹೆಚ್ಚು ಸ್ವಯಂ ಪ್ರಮಾಣೀಕೃತ ಸಿಂಡಿಕೇಟ್ ಬ್ಯಾಂಕ್‌ಗಳು (SCSBಗಳು)/ಪ್ರಾಯೋಜಕ ಬ್ಯಾಂಕ್‌ಗಳು/ಯುಪಿಐ ಅಪ್ಲಿಕೇಷನ್‌ಗಳು ಸಿಸ್ಟಮ್ ಬದಲಾವಣೆಗಳನ್ನು ನಡೆಸಿವೆ ಮತ್ತು ಎನ್ಪಿಸಿಐ ನಿಯಮಾವಳಿಗಳನ್ನು ಅನುಸರಿಸಿವೆ. ಯುಪಿಐ-ಆಧಾರಿತ ಅಪ್ಲಿಕೇಷನ್‌ನಿಂದ ಬೆಂಬಲಿತವಾದ (ASBA) ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ (ಐಪಿಒಗಳು) ಎನ್ಪಿಸಿಐನಿಂದ 2021ರ ಡಿಸೆಂಬರ್ನಲ್ಲಿ ಯುಪಿಐನ ಪ್ರತಿ ವಹಿವಾಟು ಮಿತಿಯನ್ನು ರೂ. 2 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ: UPI For Feature Phones: ಫೀಚರ್ ಫೋನ್ ಯುಪಿಐಗೆ ಚಾಲನೆ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್