
ನವದೆಹಲಿ, ಜನವರಿ 1: ರಿಸರ್ಚ್ ಅನಾಲಿಸ್ಟ್ ಆಗಿ ಸೆಬಿಯಿಂದ ಲೈಸೆನ್ಸ್ (SEBI licence) ಪಡೆದ ವ್ಯಕ್ತಿಯೊಬ್ಬ ತನ್ನ ಇಮೇಲ್, ಪಾಸ್ವರ್ಡ್ ಅನ್ನು ಪರಿಚಿತನೊಬ್ಬನಿಗೆ ಕೊಟ್ಟು ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈತನ ರಿಜಿಸ್ಟ್ರೇಶನ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದರಿಂದ ಬಹಳ ಜನರಿಗೆ ಕೋಟ್ಯಂತರ ರೂ ನಷ್ಟವಾಗಿದೆ. ಸೆಬಿ ಈತನಿಗೆ ನೀಡಿದ್ದ ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಅನ್ನು ರದ್ದು ಮಾಡಿದೆ. ಕುತೂಹಲ ಎಂದರೆ, ತನ್ನ ರಿಜಿಸ್ಟ್ರೇಶನ್ ನಂಬರ್ ದುರ್ಬಳಕೆಯಾಗಿದ್ದರೂ ಅದರ ಅರಿವೇ ಇಲ್ಲದೆ ಪುರೂಸ್ಖಾನ್ (Purooskhan) ಯಾವುದೋ ಸಣ್ಣ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದಾನೆ.
ಪುರೂಸ್ಖಾನ್ ಎಂಬುವವರ ರಿಜಿಸ್ಟ್ರೇಶನ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹಲವು ದೂರುಗಳು ಸೆಬಿಗೆ ಬಂದಿತ್ತು. 2022ರ ಜೂನ್ ತಿಂಗಳಲ್ಲಿ ಮೊದಲಿಗೆ ಬಂದ ದೂರಿನಲ್ಲಿ ಆಪ್ಷನ್ಸ್ ರಿಸರ್ಚ್ ಎನ್ನುವ ವೆಬ್ಸೈಟ್ನಿಂದ ಸುಳ್ಳು ಭರವಸೆಗಳು ಬರುತ್ತಿವೆ ಎಂದು ಆರೋಪಿಸಲಾಗಿತ್ತು. ಸೆಬಿ ಸರ್ಟಿಫೈಡ್ ಎಂದು ಹೇಳಿಕೊಂಡು ಪುರೂಸ್ಖಾನ್ರ ರಿಜಿಸ್ಟ್ರೇಶನ್ ನಂಬರ್ ಹಾಕಿದ್ದ ಆ ವೆಬ್ಸೈಟ್, ತಾನು ಹಣ ಡಬಲ್ ಮಾಡುವ ಸ್ಕೀಮ್, ಟ್ರೇಡಿಂಗ್ ಸ್ಟ್ರಾಟಿಜಿ ಮಾಡುವುದಾಗಿ ಭರವಸೆ ಕೊಟ್ಟಿತ್ತು. ತಮ್ಮಿಂದ 50,000 ರೂ ಶುಲ್ಕ ಪಡೆಯಲಾಯಿತು, ಹಾಗೂ ನಂತರದ ಟ್ರೇಡಿಂಗ್ನಲ್ಲಿ 4 ಲಕ್ಷ ರೂನಷ್ಟು ನಷ್ಟ ಆಯಿತು ಎಂದು ಆ ಮೊದಲ ದೂರುದಾರರು ಆರೋಪಿಸಿದ್ದರು.
ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ
ಸೆಬಿ ತನಿಖೆ ನಡೆಸಿದಾಗ ಒಂದು ಸಂಗತಿ ಗಮನಕ್ಕೆ ಬಂತು. ರಿಜಿಸ್ಟ್ರೇಶನ್ ನಂಬರ್ ಪುರೂಸ್ಖಾನ್ ಅವರದ್ದಾದರೂ, ಗ್ರಾಹಕರಿಂದ ಪಡೆದ ಶುಲ್ಕದ ಹಣವನ್ನು ಆಪ್ಷನ್ಸ್ ರಿಸರ್ಚ್ ಕನ್ಸಲ್ಟೆನ್ಸಿ ಎನ್ನುವ ಕಂಪನಿಗೆ ಹೋಗುತ್ತಿತ್ತು. ಆ ಒಆರ್ಸಿ ಯಾವುದೇ ರೀತಿಯಲ್ಲೂ ಸೆಬಿಯಲ್ಲಿ ನೊಂದಾಯಿತವಾಗಿರಲಿಲ್ಲ. ಇದು ಮೊದಲ ದೂರು ಬಂದಾಗ ನಡೆಸಿದ ತನಿಖೆಯಲ್ಲಿ ಗೊತ್ತಾದ ಸಂಗತಿ.
2023ರ ಫೆಬ್ರುವರಿಯಲ್ಲಿ ಎರಡನೇ ದೂರು ದಾಖಲಾಯಿತು. ಅಲ್ಲಿಯೂ ಕೂಡ ಓಆರ್ಸಿ ವಿರುದ್ಧದ ದೂರೇ. ಈಗ ಸೆಬಿ ಹೆಚ್ಚು ಆಳವಾಗಿ ತನಿಖೆ ನಡೆಸಿತು. ಓಆರ್ಸಿ ಹಾಗೂ ಅದರ ಪಾರ್ಟ್ನರ್ ಸಂಸ್ಥೆಗಳು ಸೆಬಿ ಲೈಸೆನ್ಸ್ ಹೊಂದಿಲ್ಲದಿರುವುದು ಹಾಗೂ ಬೇರೆ ಸೆಬಿ ನೊಂದಣಿ ಸಂಖ್ಯೆಯೊಂದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಚಿತವಾಗಿತ್ತು. 30 ಕೋಟಿ ರೂ ಹಣವನ್ನು ಹೂಡಿಕೆದಾರರಿಗೆ ಮರಳಿಸಬೇಕೆಂದು ಆದೇಶಿಸಿ, ಒಆರ್ಸಿಯನ್ನು ಎರಡು ವರ್ಷ ನಿಷೇಧಿಸಿತು.
ಸೆಬಿ ಇದೇ ವೇಳೆ ಪುರೂಸ್ಖಾನ್ ಮೇಲೆ ತನಿಖೆ ನಡೆಸಿತು. ಈತ 2018ರಲ್ಲಿ ರಿಸರ್ಚ್ ಅನಾಲಿಸ್ಟ್ ಆಗಿ ಸೆಬಿಯಲ್ಲಿ ನೊಂದಾಯಿಸಿದರೂ, ಆ ಕಾಯಕ ಬಿಟ್ಟು ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ. ಅಲ್ಲದೇ ಒಆರ್ಸಿ ಜೊತೆ ಸಂಪರ್ಕ ಇರುವ ವ್ಯಕ್ತಿಯೊಬ್ಬನಿಗೆ ತಾನು ಸೆಬಿ ನೊಂದಾಯಿತ ಇಮೇಲ್ ಐಡಿಯ ಪಾಸ್ವರ್ಡ್ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಸೆಬಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈತನ ಲೈಸೆನ್ಸ್ ಅನ್ನು ರದ್ದು ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ