Name Change: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ
Easy steps to officially change a person's name: ಹೆಸರು ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ಅಧಿಕೃತವಾಗಿಯೇ ಆಗಬೇಕು. ಅದರ ಪ್ರಕ್ರಿಯೆ ಸಂಕೀರ್ಣವಿಲ್ಲ. ಮೂರು ಅಥವಾ ನಾಲ್ಕು ಹಂತಗಳ ಪ್ರಕ್ರಿಯೆಗಳ ಮೂಲಕ ಹೆಸರು ಬದಲಾಯಿಸಬಹುದು. ಅಫಿಡವಿಟ್ ರಚಿಸುವುದು, ಜಾಹೀರಾತು ಪ್ರಕಟಿಸುವುದು ಹಾಗೂ ಗೆಜೆಟ್ ವಿಭಾಗಕ್ಕೆ ಅರ್ಜಿ ಸಲ್ಲಿಸುವುದು, ಈ ಮೂಲಕ ಹೆಸರು ಬದಲಾವಣೆ ಮಾಡಬಹುದು.

ನಾನಾ ಕಾರಣಗಳಿಂದ ಹೆಸರು ಬದಲಾವಣೆ (Name Change) ಮಾಡಬೇಕಾಗಬಹುದು. ನಾವೇ ಹೆಸರು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಗೆಜೆಟ್ನಲ್ಲಿ ನಿಮ್ಮ ಹೊಸ ಹೆಸರು ಮುದ್ರಿತವಾಗಬೇಕು. ಆಗ ಮಾತ್ರ ಅಧಿಕೃತವಾಗಿ ಹೆಸರು ಬದಲಾದಂತೆ. ಇದಕ್ಕೆ ಮೂರ್ನಾಲ್ಕು ಹಂತಗಳಿವೆ. ಅಫಿಡವಿಟ್ ಮಾಡುವುದು, ಜಾಹೀರಾತು ಕೊಡುವುದು, ಗೆಜೆಟ್ನಲ್ಲಿ ಮುದ್ರಿಸುವುದು ಅತ್ಯಗತ್ಯ. ಇದನ್ನು ಹೇಗೆ ಮಾಡುವುದು, ಈ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.
ಹೆಸರು ಬದಲಾವಣೆಯ ಅಫಿಡವಿಟ್
ಮೊದಲ ಹಂತ ಎಂದರೆ ಅಫಿಡವಿಟ್ ರಚಿಸುವುದು. ಸ್ಟ್ಯಾಂಪ್ ಪೇಪರ್ನಲ್ಲಿ ನಿಮ್ಮ ಈಗಿನ ಹೆಸರು, ಹೊಸ ಹೆಸರು, ತಂದೆ ಅಥವಾ ಗಂಡನ ಹೆಸರು, ಪೂರ್ಣ ವಿಳಾಸ, ಹಾಗು ಹೆಸರು ಬದಲಾವಣೆಗೆ ಏನು ಕಾರಣ, ಇವೆಲ್ಲ ಅಂಶಗಳನ್ನು ಸೇರಿಸಿ ಅಫಿಡವಿಟ್ ರಚಿಸಬೇಕು.
ಈ ದಾಖಲೆಗೆ ನಿಮ್ಮ ಹಾಗೂ ಇಬ್ಬರು ಸಾಕ್ಷಿಗಳ ಸಹಿ ಬೇಕು. ಇದಾದ ಬಳಿಕ ಅಫಿಡವಿಟ್ಗೆ ಪಬ್ಲಿಕ್ ನೋಟರಿ ಅಥವಾ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಂದ ನೋಟರೈಸ್ ಅಗಬೇಕು. ಸ್ಟ್ಯಾಂಪ್ ಪೇಪರ್ಗೆ 20 ರೂ, ಹಾಗೂ ನೋಟರಿ ಫೀ ಸುಮಾರು 200ರಿಂದ 400 ರೂ ಆಗಬಹುದು. ಇದು ನಿಮ್ಮ ಹೆಸರು ಬದಲಾವಣೆಯ ಮೊದಲ ಹಂತ.
ಸುದ್ದಿಪತ್ರಿಕೆಗಳಲ್ಲಿ ಜಾಹೀರಾತು
ನೋಟರಿಯಿಂದ ಅಫಿಡವಿಟ್ಗೆ ಸೀಲು, ಸಹಿ ಬಿದ್ದ ಬಳಿಕ ನೀವು ಕನಿಷ್ಠ ಎರಡು ಸುದ್ದಿಪತ್ರಿಕೆಯಲ್ಲಿ ನಿಮ್ಮ ಹೆಸರು ಬದಲಾವಣೆಯನ್ನು ಪ್ರಕಟಿಸಬೇಕು. ಒಂದು, ಇಂಗ್ಲೀಷ್, ಇನ್ನೊಂದು ಕನ್ನಡ (ಅಥವಾ ಸ್ಥಳೀಯ ಭಾಷೆ) ಪತ್ರಿಕೆಯಲ್ಲಿ ಈ ಜಾಹೀರಾತು ಪ್ರಕಟವಾಗಬೇಕು. ಇದರಲ್ಲಿ ನಿಮ್ಮ ಹಳೆಯ ಹೆಸರು, ಹೊಸ ಹೆಸರು, ತಂದೆ ಅಥವಾ ಪತಿಯ ಹೆಸರು, ವಿಳಾಸ, ಹಾಗೂ ಅಫಿಡವಿಟ್ ಆದ ದಿನಾಂಕ ಈ ವಿವರ ಇರಬೇಕು. ಸುದ್ದಿಪತ್ರಿಕೆಯಲ್ಲಿ ಇದಕ್ಕೆಂದೇ ಒಂದು ಫಾರ್ಮ್ಯಾಟ್ನ ಅರ್ಜಿ ನಮೂನೆ ಇರುತ್ತದೆ. ಅದನ್ನು ಭರ್ತಿ ಮಾಡಿ ಕೊಟ್ಟರೆ, ಪತ್ರಿಕೆಯಲ್ಲಿ ಒಂದೆಡೆ ಜಾಹೀರಾತು ಪ್ರಕಟವಾಗುತ್ತದೆ. ಇದಕ್ಕೆ ಸುಮಾರು 500 ರೂನಿಂದ 1,000 ರೂ ಆಗಬಹುದು.
ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು
ಗೆಜೆಟ್ನಲ್ಲಿ ಮುದ್ರಣ
ಗೆಜೆಟ್ ಪತ್ರಿಕೆಯಲ್ಲಿ ಹೆಸರು ಬದಲಾವಣೆ ಆಗಿರುವುದನ್ನು ಮುದ್ರಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಇಗೆಜೆಟ್ ಪೋರ್ಟಲ್ ಬಳಸಬಹುದು. ಅಥವಾ ಕರ್ನಾಟಕದ ಇರಾಜ್ಯಪತ್ರ ಪೋರ್ಟಲ್ (eRajyapatra) ಅನ್ನು ಬಳಸಬಹುದು. ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಬೇಕು. ಅರ್ಜಿ ಜೊತೆಗೆ ನೋಟರಿಯಾದ ಅಫಿಡವಿಟ್, ಸುದ್ದಿಪತ್ರಿಕೆಯ ಕ್ಲಿಪಿಂಗ್, ಫೋಟೋ, ಐಡಿ ಪ್ರೂಫ್ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಶುಲ್ಕ (2,000 ರೂ ಒಳಗೆ) ಪಾವತಿಸಬೇಕು.
ಇದಾದ ಬಳಿಕ ಇ-ಗಜೆಟ್ನಲ್ಲಿ ನಿಮ್ಮ ಹೊಸ ಹೆಸರು ಮುದ್ರಿತವಾಗುತ್ತದೆ. ಅಗ ನಿಮ್ಮ ಹೆಸರು ಬದಲಾವಣೆ ಅಧಿಕೃತ ಎನಿಸುತ್ತದೆ. ಆಧಾರ್, ಪಾಸ್ಪೋರ್ಟ್, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್ ಇತ್ಯಾದಿ ಬೇರೆ ಬೇರೆ ನಾಗರಿಕ ಸೇವೆ ದಾಖಲೆಗಳಲ್ಲಿ ಗೆಜೆಟ್ ಪ್ರತಿಯನ್ನು ಬಳಸಿ ಹೆಸರು ಬದಲಾಯಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Thu, 1 January 26




