Google Investments In Airtel: ಏರ್​ಟೆಲ್​ನಲ್ಲಿ ಗೂಗಲ್​ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ

| Updated By: Srinivas Mata

Updated on: Feb 28, 2022 | 6:52 PM

ಏರ್​ಟೆಲ್​ನಲ್ಲಿ ಗೂಗಲ್​ನಿಂದ ನೂರು ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಕ್ಕೆ ಷೇರುದಾರರು ಅನುಮತಿ ನೀಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Google Investments In Airtel: ಏರ್​ಟೆಲ್​ನಲ್ಲಿ ಗೂಗಲ್​ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ
ಸಾಂದರ್ಭಿಕ ಚಿತ್ರ
Follow us on

ಏರ್​ಟೆಲ್​ನ ಶೇ 1.28ರ ಪಾಲಿನ ಖರೀದಿಗೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಭಾರತೀಯ ಟೆಲಿಕಾಂ ಕಂಪೆನಿಯ ಷೇರುದಾರರು ಅನುಮತಿ ನೀಡಿದ್ದಾರೆ. ಗೂಗಲ್​ನಿಂದ (Google) ಹೂಡಿಕೆಗೆ ವಿಶೇಷ ನಿಲುವಳಿಯನ್ನು ಶೇ 99ರಷ್ಟು ಷೇರುದಾರರು ಅನುಮೋದಿಸಿದರು ಎಂದು ಫೆಬ್ರವರಿ 26ನೇ ತಾರೀಕಿನಂದು ನಡೆದ ವಿಶೇಷ ಸಾಮಾನ್ಯ ಸಭೆ (EGM) ಫಲಿತಾಂಶದ ಆಧಾರದಲ್ಲಿ ತಿಳಿಸಲಾಗಿದೆ. ಗೂಗಲ್​ನಿಂದ ಏರ್​ಟೆಲ್​ನಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಅಥವಾ 7500 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡುವುದಾಗಿ ಜನವರಿ 28ನೇ ತಾರೀಕು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಈಕ್ವಿಟಿ ಹೂಡಿಕೆ ಮತ್ತು ವಾಣಿಜ್ಯ ಒಪ್ಪಂದ ಸಹ ಒಳಗೊಂಡಿತ್ತು.

ಪರಸ್ಪರ ಒಪ್ಪಿದ ನಿಬಂಧನೆಗಳ ಜತೆಗೆ ಮುಂದಿನ 5 ವರ್ಷಗಳಿಗೆ ಹಣಕಾಸು ಒದಗಿಸುವುದು ಸಹ ಸೇರಿತ್ತು. ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಭಾಗವಾಗಿ ಏರ್​ಟೆಲ್​ ಸಹಭಾಗಿತ್ವದಲ್ಲಿ 100 ಕೋಟಿ ಅಮೆರಿಕನ್ ಡಾಲರ್​ ತನಕ ಹೂಡಿಕೆ ಮಾಡುವುದಾಗಿ ಗೂಗಲ್ ಹೇಳಿತ್ತು.

ಈ ಹೂಡಿಕೆಯಲ್ಲಿ 70 ಕೋಟಿ ಡಾಲರ್ ಅನ್ನು ಈಕ್ವಿಟಿ ರೂಪದಲ್ಲಿ ಏರ್​ಟೆಲ್​ನಲ್ಲಿ ಹೂಡಿಕೆ ಮಾಡುತ್ತದೆ. ಅಂದರೆ ಪ್ರತಿ ಷೇರಿಗೆ 734 ರೂಪಾಯಿಯಂತೆ ಖರೀದಿಸುತ್ತದೆ. ಇನ್ನು ಬಾಕಿ 30 ಕೋಟಿ ಡಾಲರ್ ವಾಣಿಜ್ಯ ಒಪ್ಪಂದಗಳ ಜಾರಿಗಾಗಿ ಹೂಡಿಕೆ ಮಾಡುತ್ತದೆ. ಅದರಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್ ಸಾಧನಗಳ ಉತ್ಪಾದನೆ, ಭಾರತದಾದ್ಯಂತ ಡಿಜಿಟಲ್ ಎಕೋಸಿಸ್ಟಮ್​ ಅಡಿಯಲ್ಲಿ ಡಿಜಿಟಲ್​ ಸಂಪರ್ಕಕ್ಕೆ ಪ್ರಯತ್ನಿಸುತ್ತದೆ.

ಇದರ ಜತೆಗೆ ಬಹುತೇಕ ಷೇರುದಾರರು ಏರ್​ಟೆಲ್​ನ ಪ್ರಸ್ತಾವ ಆದ 1.17 ಲಕ್ಷ ಕೋಟಿ ರೂಪಾಯಿಯನ್ನು ಅಂಗಸಂಸ್ಥೆಗಳಾದ ಇಂಡಸ್ ಟವರ್ಸ್, Nxtra ಮತ್ತು ಭಾರ್ತಿ ಹೆಕ್ಸಾಕಾಂಗಾಗಿ ವೆಚ್ಚ ಮಾಡುವುದಕ್ಕೆ ಅನುಮೋದನೆಯನ್ನು ನೀಡಿದರು.

ಇದನ್ನೂ ಓದಿ: Airtel Payments Bank: ಆರ್​ಬಿಐನಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪಡೆದ ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್

Published On - 4:58 pm, Mon, 28 February 22