ಒಂದೇ ಲಿಕ್ಕರ್ ಲೈಸೆನ್ಸ್, ಹೆಲ್ತ್ ಟ್ರೇಡ್ ಲೈಸೆನ್ಸ್ ಸಾಕು; ಈಟಿಂಗ್ ಹೌಸ್ ಲೈಸೆನ್ಸ್ ಬೇಡ: ನೀತಿ ಆಯೋಗ್ ಸಲಹೆಗಳು

NITI Aayog proposes single liquor licence: ಒಂದೇ ಹೋಟೆಲ್ ಗ್ರೂಪ್​ಗೆ ಸೇರಿದ ಮತ್ತು ಒಂದೇ ಆವರಣದಲ್ಲಿರುವ ವಿವಿಧ ಔಟ್​ಲೆಟ್​ಗಳಲ್ಲಿ ಲಿಕ್ಕರ್ ಪೂರೈಕೆಗೆ ಪ್ರತ್ಯೇಕ ಪರವಾನಿಗೆಗಳನ್ನು ಪಡೆಯುವ ನಿಯಮ ಕೈಬಿಡುವಂತೆ ನೀತಿ ಆಯೋಗ್ ಶಿಫಾರಸು ಮಾಡಿದೆ. ಅಂದರೆ, ಇಂಥ ಸಂಸ್ಥೆ ಒಂದೇ ಮದ್ಯದ ಲೈಸೆನ್ಸ್ ಹೊಂದಿದ್ದರೆ ಸಾಕು. ಹೊಟೆಲ್ ಉದ್ಯಮಗಳು ಪೊಲೀಸರಿಂದ ಈಟಿಂಗ್ ಹೌಸ್ ಲೈಸೆನ್ಸ್ ಪಡೆಯುವ ಕ್ರಮವನ್ನೂ ಕೈಬಿಡುವಂತೆ ಶಿಫಾರಸು ಮಾಡಲಾಗಿದೆ.

ಒಂದೇ ಲಿಕ್ಕರ್ ಲೈಸೆನ್ಸ್, ಹೆಲ್ತ್ ಟ್ರೇಡ್ ಲೈಸೆನ್ಸ್ ಸಾಕು; ಈಟಿಂಗ್ ಹೌಸ್ ಲೈಸೆನ್ಸ್ ಬೇಡ: ನೀತಿ ಆಯೋಗ್ ಸಲಹೆಗಳು
ಲಿಕ್ಕರ್
Image Credit source: Getty Images

Updated on: Jun 30, 2026 | 6:18 PM

ನವದೆಹಲಿ, ಜೂನ್ 30: ಭಾರತದಲ್ಲಿ ಹೋಟೆಲ್, ರೆಸ್ಟೋರೆಂಟ್ ಮತ್ತು ಹೋಮ್ ಸ್ಟೇ ಉದ್ಯಮವನ್ನು ಆರಂಭಿಸಲು ಎದುರಾಗುತ್ತಿರುವ ಅತಿ ದೊಡ್ಡ ಕಾನೂನು ಮತ್ತು ನಿಯಮಾವಳಿಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಪ್ರಮುಖ ಚಿಂತಕರ ಚಾವಡಿಯಾದ ‘ನೀತಿ ಆಯೋಗ’ (NITI Aayog) ಅತ್ಯಂತ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಪ್ರವಾಸೋದ್ಯಮ ಸುಧಾರಣೆಗಳ ಕುರಿತು ನೀತಿ ಆಯೋಗ ಬಿಡುಗಡೆ ಮಾಡಿರುವ ‘ಅನ್‌ಲಾಕಿಂಗ್ ಗ್ರೋತ್ ಇನ್ ಟೂರಿಸಂ ಆಂಡ್ ಹಾಸ್ಪಿಟಾಲಿಟಿ ಸೆಕ್ಟರ್’ (Unlocking Growth in Tourism and Hospitality Sector) ವರದಿಯಲ್ಲಿ, ಈ ವಲಯದಲ್ಲಿ ಹೂಡಿಕೆಯನ್ನು ಸರಳಗೊಳಿಸಲು ಹಲವು ಅನುಮೋದನೆ ಕ್ರಮಗಳನ್ನು ರದ್ದುಗೊಳಿಸಲು ಮತ್ತು ನಿಯಮಗಳನ್ನು ಸಡಿಲಗೊಳಿಸಲು ಪ್ರಸ್ತಾಪಿಸಲಾಗಿದೆ.

ಒಂದೇ ಆವರಣಕ್ಕೆ ಒಂದೇ ಲಿಕ್ಕರ್ ಲೈಸೆನ್ಸ್

ಪ್ರಸ್ತುತ ನಿಯಮಗಳ ಪ್ರಕಾರ, ಒಂದು ದೊಡ್ಡ ಹೋಟೆಲ್ ಅಥವಾ ರೆಸಾರ್ಟ್ ಆವರಣದೊಳಗೆ ಬೇರೆ ಬೇರೆ ರೆಸ್ಟೋರೆಂಟ್‌ಗಳು, ಬಾರ್‌ಗಳು ಅಥವಾ ಸ್ಪಾ ಪ್ರದೇಶಗಳಿದ್ದರೆ, ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಮದ್ಯದ ಪರವಾನಗಿ (Liquor Licence) ಪಡೆಯಬೇಕಾಗುತ್ತದೆ. ಆದರೆ ಇನ್ಮುಂದೆ, ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮದ್ಯ ಪೂರೈಕೆ ಸ್ಥಳಗಳಿಗೆ ಒಂದೇ ಒಂದು ಜಂಟಿ ಲಿಕ್ಕರ್ ಲೈಸೆನ್ಸ್ ನೀಡುವಂತೆ ನೀತಿ ಆಯೋಗ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಬ್ಯಾಂಕುಗಳ ಮಿಸ್-ಸೆಲ್ಲಿಂಗ್​ನಿಂದ ಹಿಡಿದು ಇಪಿಎಫ್​ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು

‘ಈಟಿಂಗ್ ಹೌಸ್ ಲೈಸೆನ್ಸ್’ ರದ್ದು

ಹೋಟೆಲ್ ಮತ್ತು ಆಹಾರ ಮಳಿಗೆಗಳನ್ನು ನಡೆಸಲು ಪೊಲೀಸ್ ಇಲಾಖೆಯಿಂದ ಪಡೆಯಬೇಕಾದ ‘ಈಟಿಂಗ್ ಹೌಸ್ ಲೈಸೆನ್ಸ್’ (Eating House Licence) ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದು ಉದ್ಯಮಿಗಳಿಗೆ ಅನಗತ್ಯ ಕಾಗದಪತ್ರಗಳ ಕಿರಿಕಿರಿಯನ್ನು ತಪ್ಪಿಸಲಿದೆ.

ಏಕೀಕೃತ ಹೆಲ್ತ್ ಟ್ರೇಡ್ ಲೈಸೆನ್ಸ್

ಹೋಟೆಲ್‌ನ ಒಳಗೆ ಇರುವ ರೆಸ್ಟೋರೆಂಟ್, ಈಜುಕೊಳ (Swimming Pool), ಸ್ಪಾ (Spa) ಮುಂತಾದ ವಿವಿಧ ಸೌಲಭ್ಯಗಳಿಗೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಂದ ಪ್ರತ್ಯೇಕ ಪರವಾನಗಿ ಪಡೆಯುವ ಬದಲಿಗೆ, ಇವೆಲ್ಲವನ್ನೂ ಒಳಗೊಂಡ ಒಂದೇ ಒಂದು ‘ಹೆಲ್ತ್ ಟ್ರೇಡ್ ಲೈಸೆನ್ಸ್’ (Single Health Trade Licence) ನೀಡಲು ಪ್ರಸ್ತಾಪಿಸಲಾಗಿದೆ.

ಲೈಸೆನ್ಸ್ ಅವಧಿ ವಿಸ್ತರಣೆ

ಮದ್ಯದ ಪರವಾನಗಿಗಳು ಮತ್ತು ಎಫ್‌ಎಸ್‌ಎಸ್‌ಎಐ (FSSAI – ಆಹಾರ ಸುರಕ್ಷತೆ) ನೋಂದಣಿಗಳ ಮಾನ್ಯತೆಯ ಅವಧಿಯನ್ನು (Validity) ವಿಸ್ತರಿಸಲು ಮತ್ತು ಇಡೀ ಪ್ರಕ್ರಿಯೆಯನ್ನು ಡಿಜಿಟಲ್ ಏಕಗವಾಕ್ಷಿ (Single Window) ವ್ಯವಸ್ಥೆಯಡಿ ತರಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ವಿಶ್ವದ ನಂ. 1 ಶಿಪ್ಪಿಂಗ್ ಕಂಪನಿಯಿಂದ ಭಾರತದ ವಿಳಿಂಜಮ್ ಪೋರ್ಟ್​ನಲ್ಲಿ ಭಾರೀ ಹೂಡಿಕೆ; ಅದಾನಿ ಸಂಸ್ಥೆಯಿಂದ ಶೇ. 49 ಪಾಲು ಮಾರಾಟ 

ಈ ಸುಧಾರಣೆಗಳ ಅಗತ್ಯವೇಕೆ?

ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ ಒಂದು ಹೋಟೆಲ್ ಪ್ರಾಜೆಕ್ಟ್ ಅನುಮೋದನೆ ಪಡೆದು ಆರಂಭವಾಗಲು ಸಾಮಾನ್ಯವಾಗಿ 36 ರಿಂದ 48 ತಿಂಗಳುಗಳು (3 ರಿಂದ 4 ವರ್ಷ) ಬೇಕಾಗುತ್ತವೆ. ಆದರೆ, ಅಸಿಯಾನ್ (ASEAN) ಒಕ್ಕೂಟದ ಇತರ ದೇಶಗಳಲ್ಲಿ ಇದೇ ಪ್ರಕ್ರಿಯೆ ಕೇವಲ 12 ರಿಂದ 18 ತಿಂಗಳುಗಳಲ್ಲಿ ಮುಗಿಯುತ್ತದೆ. ಭಾರತದಲ್ಲಿನ ಕಠಿಣ ನಿಯಮಗಳು ಮತ್ತು ವಿಳಂಬ ನೀತಿಯು ಪ್ರವಾಸೋದ್ಯಮದ ಹೂಡಿಕೆಗೆ ದೊಡ್ಡ ತಡೆಯಾಗಿದ್ದು, ಹೊಸ ಶಿಫಾರಸುಗಳು ಜಾರಿಯಾದರೆ ಹೋಟೆಲ್ ಉದ್ಯಮದಲ್ಲಿ ಭಾರಿ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us