ಬ್ಯಾಂಕುಗಳ ಮಿಸ್-ಸೆಲ್ಲಿಂಗ್ನಿಂದ ಹಿಡಿದು ಇಪಿಎಫ್ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು
Important Financial Rules change from July 2026: ಜನಸಾಮಾನ್ಯರ ಹಣಕಾಸು ಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಕ್ರಮಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಆಧಾರ್ಗೆ ಇಮೇಲ್ ಐಡಿ ಲಿಂಕ್ ಮಾಡಲು ಇದ್ದ ನಿಯಮದಲ್ಲಿ ಬದಲಾವಣೆ ಇದೆ. ಇಂಥ ಏಳೆಂಟು ಪ್ರಮುಖ ನಿಯಮ ಬದಲಾವಣೆ ಮತ್ತು ಕ್ರಮಗಳು ಜುಲೈನಿಂದ ಆರಂಭವಾಗುತ್ತವೆ.

ಮುಖ್ಯಾಂಶಗಳು
- ಜನಸಾಮಾನ್ಯರ ಹಣಕಾಸು ಸ್ಥಿತಿ ಮೇಲೆ ಪರಿಣಾಮ ಬೀರುವ ಕೆಲ ಕ್ರಮಗಳು ಜುಲೈ 1ರಿಂದ ಜಾರಿಗೆ.
- ಆಧಾರ್ಗೆ ಇಮೇಲ್ ಐಡಿ ಲಿಂಕ್ ಮಾಡಲು ಇದ್ದ ನಿಯಮದಲ್ಲಿ ಬದಲಾವಣೆ ಇದೆ.
- ಇಂಥ ಏಳೆಂಟು ಪ್ರಮುಖ ನಿಯಮ ಬದಲಾವಣೆ ಮತ್ತು ಕ್ರಮಗಳು ಜುಲೈನಿಂದ ಆರಂಭವಾಗುತ್ತವೆ.
ನವದೆಹಲಿ, ಜೂನ್ 30: ನಾಳೆಯಿಂದ, ಅಂದರೆ ಜುಲೈ 1 ರಿಂದ ದೇಶಾದ್ಯಂತ ಹಣಕಾಸು ಮತ್ತು ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳು (Financial rules) ಬದಲಾಗುತ್ತಿದೆ. ಇವು ನಿಮ್ಮ ಮಾಸಿಕ ಬಜೆಟ್, ಬ್ಯಾಂಕಿಂಗ್ ಮತ್ತು ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಬಹುದು. ಐಟಿ ರಿಟರ್ನ್ ಸಲ್ಲಿಕೆಯ ಗಡುವು, ಆಧಾರ್‌ನಲ್ಲಿ ಇಮೇಲ್ ಐಡಿ ಲಿಂಕ್ ಮಾಡುವುದು, ಕೆಲ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳಲ್ಲಿ ಬದಲಾವಣೆ ಇತ್ಯಾದಿ ವಿವಿಧ ಹಣಕಾಸು ನಿಯಮ ಬದಲಾವಣೆಗಳಿವೆ.
1. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಗಡುವು
ಆರ್ಥಿಕ ವರ್ಷದ ಐಟಿಆರ್ (Income Tax Return) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಆದರೆ ಜುಲೈ 1 ರಿಂದ ತೆರಿಗೆ ಇಲಾಖೆಯು ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಯಾವುದೇ ತಪ್ಪುಗಳಿಲ್ಲದೆ ಬೇಗನೇ ಐಟಿಆರ್ ಸಲ್ಲಿಸುವುದು ಸೂಕ್ತ, ಇಲ್ಲದಿದ್ದರೆ ಗಡುವಿನ ನಂತರ ಭಾರಿ ದಂಡ ತೆರಬೇಕಾಗಬಹುದು.
2. ಆಧಾರ್‌ನಲ್ಲಿ ಉಚಿತವಾಗಿ ಇಮೇಲ್ ಐಡಿ ಅಪ್‌ಡೇಟ್
ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್‌ದಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಆಧಾರ್ ಮೊಬೈಲ್ ಆ್ಯಪ್ ಅಥವಾ ಪೋರ್ಟಲ್ ಮೂಲಕ ಇಮೇಲ್ ಐಡಿ ಲಿಂಕ್ ಮಾಡಲು ಅಥವಾ ಅಪ್‌ಡೇಟ್ ಮಾಡಲು ಇದ್ದ ₹75 ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಈ ಉಚಿತ ಸೌಲಭ್ಯವು ಮುಂದಿನ 6 ತಿಂಗಳವರೆಗೆ (ಡಿಸೆಂಬರ್ 31 ರವರೆಗೆ) ಲಭ್ಯವಿರಲಿದೆ.
ಇದನ್ನೂ ಓದಿ: ವಿಶ್ವದ ನಂ. 1 ಶಿಪ್ಪಿಂಗ್ ಕಂಪನಿಯಿಂದ ಭಾರತದ ವಿಳಿಂಜಮ್ ಪೋರ್ಟ್ನಲ್ಲಿ ಭಾರೀ ಹೂಡಿಕೆ; ಅದಾನಿ ಸಂಸ್ಥೆಯಿಂದ ಶೇ. 49 ಪಾಲು ಮಾರಾಟ
3. ಎಚ್‌ಡಿಎಫ್‌ಸಿ (HDFC) ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ
HDFC ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ಏರ್‌ಪೋರ್ಟ್ ಲಾಂಜ್ ಆಕ್ಸೆಸ್ (Airport Lounge Access) ನಿಯಮಗಳನ್ನು ಬದಲಾಯಿಸುತ್ತಿದೆ. ಇನ್ಮುಂದೆ ಉಚಿತ ಲಾಂಜ್ ಸೌಲಭ್ಯ ಪಡೆಯಲು ಗ್ರಾಹಕರು ಹಿಂದಿನ ತ್ರೈಮಾಸಿಕದಲ್ಲಿ (Quarter) ಕನಿಷ್ಠ ₹60,000 ಖರ್ಚು ಮಾಡಿರಬೇಕಾಗುತ್ತದೆ. ಉದಾಹರಣೆಗೆ, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಲಾಂಜ್ ಆಕ್ಸೆಸ್ ಬೇಕಾದರೆ, ಏಪ್ರಿಲ್-ಜೂನ್ ನಡುವೆ ₹60,000 ಖರ್ಚು ಮಾಡಿರಬೇಕು.
4. ಎಸ್‌ಬಿಐ (SBI) ಫೋನ್‌ಪೇ ಕಾರ್ಡ್ ರಿವಾರ್ಡ್ ಪಾಯಿಂಟ್ಸ್
SBI ಕಾರ್ಡ್‌ನ ಫೋನ್‌ಪೇ ವೇರಿಯಂಟ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವ ಮಿತಿಯನ್ನು ಪರಿಷ್ಕರಿಸಲಾಗಿದೆ. ಕೆಲವು ನಿರ್ದಿಷ್ಟ ವಹಿವಾಟುಗಳನ್ನು (Transactions) ಇನ್ಮುಂದೆ ರಿವಾರ್ಡ್ ಪಾಯಿಂಟ್ಸ್ ಪಟ್ಟಿಯಿಂದ ಹೊರಗಿಡಲಾಗುವುದು.
5. ಪಾಸ್‌ಪೋರ್ಟ್ ಸೇವಾ ಶುಲ್ಕ ಹೆಚ್ಚಳ
ಜುಲೈ 1 ರಿಂದ ಪಾಸ್‌ಪೋರ್ಟ್ ಮಾಡಿಸುವುದು ಹೆಚ್ಚು ದುಬಾರಿಯಾಗಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾನ್ಯ (Normal) ಮತ್ತು ತತ್ಕಾಲ್ (Tatkal) ಎರಡೂ ಮಾದರಿಯ ಪಾಸ್‌ಪೋರ್ಟ್ ಅರ್ಜಿಗಳ ಶುಲ್ಕವನ್ನು ಹೆಚ್ಚಿಸುತ್ತಿದೆ.
6. ಮಿಸ್-ಸೆಲ್ಲಿಂಗ್ ವಿರುದ್ಧ ಆರ್‌ಬಿಐ (RBI) ಕಠಿಣ ಕ್ರಮ
ಬ್ಯಾಂಕುಗಳು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಹಣಕಾಸು ಉತ್ಪನ್ನಗಳನ್ನು (ವಿಮೆ, ಹೂಡಿಕೆ ಯೋಜನೆಗಳು ಇತ್ಯಾದಿ) ಮಿಸ್-ಸೆಲ್ಲಿಂಗ್ ಮಾಡುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಬ್ಯಾಂಕ್ ಮೋಸ ಮಾಡಿರುವುದು ಸಾಬೀತಾದರೆ ಗ್ರಾಹಕರಿಗೆ ಸಂಪೂರ್ಣ ಹಣ ಮರುಪಾವತಿ (Full Refund) ಮತ್ತು ನಷ್ಟದ ಭರ್ತಿ ಸಿಗಲಿದೆ.
ಇದನ್ನೂ ಓದಿ: ಯೂಸರ್ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್ನಲ್ಲಿ ಹೊಸ ಫೀಚರ್
7. ಇಪಿಎಫ್‌ಒ (EPFO 3.0) ಡಿಜಿಟಲ್ ಅಪ್‌ಗ್ರೇಡ್
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸೇವೆಗಳನ್ನು ಸರಳಗೊಳಿಸಲು ‘EPFO 3.0’ ಆವೃತ್ತಿಯನ್ನು ಪರಿಚಯಿಸುತ್ತಿದೆ. ಈ ನೂತನ ವ್ಯವಸ್ಥೆಯ ಮೂಲಕ ಯುಪಿಐ (UPI) ಮತ್ತು ಎಟಿಎಂ ನೆಟ್‌ವರ್ಕ್ ಬಳಸಿ ಪಿಎಫ್ ಹಣವನ್ನು ಅತ್ಯಂತ ವೇಗವಾಗಿ ಹಿಂಪಡೆಯಲು (PF Withdrawal) ಸಾಧ್ಯವಾಗಲಿದೆ.
8. ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತು ರೈಲ್ವೆ ನಿಯಮಗಳು
ಪ್ರತಿ ತಿಂಗಳ ಮೊದಲ ದಿನದಂತೆ ಜುಲೈ 1 ರಂದೂ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಗಳು ಪರಿಷ್ಕರಣೆಯಾಗಲಿವೆ. ಎಟಿಎಫ್ ಇಂಧನಗಳ ಬೆಲೆ ಪರಿಷ್ಕರಣೆಯೂ ಆಗಲಿದೆ. ಹಾಗೆಯೇ, ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ವಿಧಿಸುವ ದಂಡದ ಪ್ರಮಾಣವನ್ನೂ ಹೆಚ್ಚಿಸುವ ಸಾಧ್ಯತೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




